ಬೆಳಗಾವಿ : ನಗರದಲ್ಲಿ ವ್ಯಾಪಕವಾಗಿ ಮಾದಕ ವಸ್ತುಗಳ ಮಾರಾಟ ಮತ್ತು ಸೇವನೆ ನಡೆಯುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಆದರೆ ಇವುಗಳ ನಿಯಂತ್ರಣಕ್ಕೆ ನಗರ ಪೋಲೀಸರು ಮುಂದಾದ ಪರಿಣಾಮ ಕಳೆದ ವರ್ಷಕ್ಕಿಂತ ಕಡಿಮೆ ಪ್ರಕಣಗಳು ವರದಿಯಾಗಿವೆ ಎಂದು ನಗರ ಪೋಲೀಸ್ ಆಯುಕ್ತ ಡಾ.ಡಿ.ಸಿ. ರಾಜಪ್ಪ ಹೇಳಿದರು.
ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇದುವರೆಗೂ ಬೆಳಗಾವಿ ನಗರ ಪೋಲೀಸ್ ಕಮೀಷನರೆಟ್ ವ್ಯಾಪ್ತಿಯಲ್ಲಿ ರಷ್ಯನ್ ಡ್ರಗ್ಸ್ ಕುರಿತ ಯಾವೊಂದೂ ಪ್ರಕರಣ ವರದಿಯಾಗಿಲ್ಲ. ಈ ಬಗ್ಗೆ ನಿಖರ ಮಾಹಿತಿ ನೀಡಿದಲ್ಲಿ ಆ ಸ್ಥಳದ ಮೇಲೆ ದಾಳಿ ನಡೆಸಿ ಅದನ್ನು ತಡೆಯಲು ನಗರ ಪೋಲೀಸರು ಬದ್ಧರಾಗಿದ್ದಾರೆ ಎಂದರು.
ನಗರದಲ್ಲಿನ ಉದ್ಯಾನವನಗಳಲ್ಲಿ ಸಂಜೆ 6ರ ನಂತರ ಮಾದಕ ವಸ್ತು ಸೇವನೆ ಮಾಡಲಾಗುತ್ತಿದೆ ಎಂಬ ದೂರಿನ ಮೇರೆಗೆ ಗುರುವಾರದಿಂದಲೇ (ಆ.9ರಿಂದಲೇ) ಸಂಜೆ 7ರಿಂದ ಬೆಳಗ್ಗೆ 6ಗಂಟೆಯವರೆಗೆ ಉದ್ಯಾನವನಕ್ಕೆ ಬೀಗ ಹಾಕುವ ಜತೆಗೆ ಪೋಲೀಸ್ ಸಿಬ್ಬಂದಿಗಳನ್ನು ಬಂದೋಬಸ್ತ್‍ಗೆ ನಿಯೋಜಿಸಲಾಗುವುದು. ಇದರ ಬಗ್ಗೆ ಪ್ರತಿ ಕಾಲೇಜುಗಳಲ್ಲಿ ಜಾಗೃತಿ ಮೂಡಿಸುವ ಕುರಿತು ಆಡಳಿತ ಮಂಡಳಿಗಳಿಗೆ ಸೂಚನೆ ನೀಡಲಿದ್ದೇವೆ. ನಗರ ವ್ಯಾಪ್ತಿಯ ಶಾಲೆ ಕಾಲೇಜು, ಹಾಸ್ಟೆಲ್, ಪಿಜಿಗಳ ತಪಾಸಣೆ ನಡೆಯಲಿದೆ. ಎಲ್ಲಿಯೇ ದೂರು ಬಂದ ತಕ್ಷಣ ಕ್ರಮಕ್ಕೆ ಮುಂದಾಗಲಿದ್ದೇವೆ. ಜಿಲ್ಲಾ ಪೋಲೀಸ್ ಮತ್ತು ಮಹಾರಾಷ್ಟ್ರ ಪೋಲೀಸರೊಂದಿಗೆ ಚರ್ಚೆ ನಡೆಸಿದ್ದು, ಇದರ ತಡೆಗೆ ನಗರ ಪೋಲೀಸರು ಶಿಸ್ತು ಕ್ರಮಕ್ಕೆ ಮುಂದಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಡಿಸಿಪಿಗಳಾದ ಸೀಮಾ ಲಾಟ್ಕರ, ಮಹಾನಿಂಗ ನಂದಗಾವಿ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.