*ಬೆದರಿಕೆ: ಇಬ್ಬರು ನಕಲಿ ಪತ್ರಕರ್ತರ ಬಂಧನ*
ಧಾರವಾಡ ( ಕರ್ನಾಟಕ ವಾರ್ತೆ) ಏ.23:
ಇಲ್ಲಿನ ಬೇಲೂರು ಕೈಗಾರಿಕಾಭಿವೃದ್ಧಿ ಪ್ರದೇಶದಲ್ಲಿರುವ ಬಿಎಂಎನ್ ಅಗ್ರೋ ಫುಡ್ಸ್ ಸಂಸ್ಥೆಗೆ ಭೇಟಿ ನೀಡಿ, ಪತ್ರಕರ್ತರು ಎಂದು ಹೇಳಿ
ಕೊಂಡು ಬೆದರಿಕೆ ಒಡ್ಡಿ, 25 ಸಾವಿರ ರೂ.ಹಣದ ಬೇಡಿಕೆ ಇಟ್ಟಿದ್ದ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಜೆಕೆ 24×7 ನ್ಯೂಸ್ ಚಾನೆಲ್ ವರದಿಗಾರ ಎಂದು ಹೇಳಿಕೊಂಡ ಅನ್ವರ್ ಕೆ.ಜಮಾದಾರ ಹಾಗೂ ಜೆಎಂ ಆರ್ ಚಾನೆಲ್ ವರದಿಗಾರ ಎಂದು ಹೇಳಿಕೊಂಡ ನಿಝಾಮ್ ಅಬ್ದುಲ್ ಸಾಬ್ ಪಟೇಲ್ ಗುರುತಿನ ಚೀಟಿ ತೋರಿಸಿ , ಉದ್ಯಮ ಸಂಸ್ಥೆಗೆ ಬೆದರಿಕೆ ಹಾಕಿದ್ದರು.ಅಲ್ಲದೇ 25 ಸಾವಿರ ರೂ.ಗಳ ಹಣದ ಬೇಡಿಕೆಯನ್ನೂ ಸಹ ಇಟ್ಟಿದ್ದರು. ಕೆಎ 22- ಸಿ – 3636 ಸಂಖ್ಯೆಯ ಕಾರಿನಲ್ಲಿ ಅನುಮತಿಯಿಲ್ಲದೇ ಬೆಳಗಾವಿ ಜಿಲ್ಲೆಯಿಂದ ಧಾರವಾಡದವರೆಗೆ ಪ್ರಯಾಣ ಮಾಡಿದ್ದರು.
ಗರಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಈ ಇಬ್ಬರು ನಕಲಿ ಪತ್ರಕರ್ತರನ್ನು ಬಂಧಿಸಿದ್ದಾರೆ.ಧಾರವಾಡ ಗ್ರಾಮೀಣ ಪೊಲೀಸ್ ಇನ್ಸಪೆಕ್ಟರ್ ಎಸ್.ಸಿ.ಪಾಟೀಲ, ಗರಗ ಪಿಎಸ್ ಐ ಪ್ರಸಾದ ನೇತೃತ್ವದಲ್ಲಿ ಪೊಲೀಸರು ಉತ್ತಮ ಕಾರ್ಯ ನಿರ್ವಹಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.