ಲಾಕ್‌ಡೌನ್ ಹಿನ್ನೆಲೆ ನೆಲಕಚ್ಚಿದ ಮುದ್ರಣ ವ್ಯವಸಾಯ: ಸಹಾಯಕ್ಕಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.
ಕೊರೊನಾ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಘೋಷಿಸಲಾದ ಲಾಕ್‌ಡೌನ್‌ಗೆ ಬಹುತೇಕ ಉದ್ಯಮಗಳು ನೆಲಕಚ್ಚಿದ್ದು ಅದರಲ್ಲಿ ಮುದ್ರಣ ಉದ್ಯಮವೂ ಒಂದು. ಕಳೆದ 55 ದಿನಗಳಿಂದ ಬೆಳಗಾವಿ ನಗರದಲ್ಲಿರುವ 80ಕ್ಕೂ ಹೆಚ್ಚು ಪ್ರಿಂಟಿಂಗ್ ಪ್ರೆಸ್‌ಗಳು ಬಂದ್ ಆಗಿದ್ದು ಪ್ರಿಂಟಿಂಗ್ ಪ್ರೆಸ್ ಮಾಲೀಕರು ತುಂಬಾ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಫೆಬ್ರವರಿ ತಿಂಗಳಿಂದ ಜೂನ್ ತಿಂಗಳವರೆಗೂ ಮದುವೆ, ನಿಶ್ಚಿತಾರ್ಥ, ಮುಂಜಿ, ಗೃಹಪ್ರವೇಶ, ಜಾತ್ರೆ ಹೀಗೆ ನಾನಾ ಕಾರ್ಯಕ್ರಮಗಳು ನಡೆಯುತ್ತಿದ್ದವು. ಅದಕ್ಕಾಗಿ ಗ್ರಾಹಕರು ಆಮಂತ್ರಣ ಪತ್ರಿಕೆ ಮುದ್ರಿಸಲು ಬರುತ್ತಿದ್ದರು. ಆದರೆ ಕಳೆದ 55 ದಿನಗಳಿಂದ ಲಾಕ್‌ಡೌನ್ ಇರೋ ಹಿನ್ನೆಲೆ ಅದ್ಧೂರಿ ಮದುವೆ, ಸಭೆ ಸಮಾರಂಭಗಳಿಗೂ ಕಡಿವಾಣ ಹಾಕಿದ್ದು ಸೀಸನ್ ಟೈಮ್‌ನಲ್ಲೇ ಲಾಕ್‌ಡೌನ್ ಆಗಿದ್ದರಿಂದ ಪ್ರಿಂಟಿಂಗ್ ಪ್ರೆಸ್ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹೀಗಾಗಿ ಪ್ರಿಂಟಿಂಗ್ ಪ್ರೆಸ್ ಮಾಲೀಕರು ಹಾಗೂ ನೌಕರರಿಗೆ ಸರ್ಕಾರ ಸಹಾಯಧನ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಬೆಳಗಾವಿ ಪ್ರೆಸ್ ಓನರ್ಸ್ ಅಸೋಸಿಯೇಶನ್ ವತಿಯಿಂದ ಬೆಳಗಾವಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಬೆಳಗಾವಿ ಪ್ರೆಸ್ ಓನರ್ಸ್ ಅಸೋಸಿಯೇಷನ್ ಅಧ್ಯಕ್ಷ ಸತೀಶ್ ಜಾಧವ್, ಶಿವಾ ಆಫಸೆಟ್ ಮಾಲೀಕ ಶಿವು ನಂದಗಾಂವ ಸೇರಿದಂತೆ ಹಲವರು ಉಪಸ್ಥಿತರಿದ್ದರು.