ಬೆಳಗಾವಿ
ಬಡ್ತಿ ಮೀಸಲಾತಿ ಕಾಯ್ದೆ-2018ನ್ನು ಜಾರಿಗೊಳಿಸದಂತೆ ಆಗ್ರಹಿಸಿ ಗುರುವಾರ ಅಲ್ಪಸಂಖ್ಯಾತ ಹಿಂದುಳಿದ ಹಾಗೂ ಸಾಮಾನ್ಯ ವರ್ಗದ ಕರ್ನಾಟಕ ಸರಕಾರದ ವಿವಿಧ ಇಲಾಖೆಗಳು, ನಿಗಮ ಮಂಡಳಿ, ಕಾರ್ಪೊರೇಷನ್ ನಿವೃತ್ತ, ಸೇವಾ ನಿರತ ನೌಕರರ ಹಿತರಕ್ಷಣಾ ವೇದಿಕೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಸಿಎಂಗೆ ಮನವಿ ರವಾನಿಸಿದರು.
ಕರ್ನಾಟಕ ಸರಕಾರ 1978ರಲ್ಲಿ ಬಡ್ತಿಯಲ್ಲೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ಮೀಸಲಾತಿ ನೀಡುವುದನ್ನು ಜಾರಿ ಮಾಡಿತ್ತು. ಈ ನೀತಿ ಕೇವಲ ಲೋಯರ್ ಕ್ಲಾಸ್ 1 ಹುದ್ದೆಯವರೆಗೆ ಇರುತ್ತದೆ. ಆದರೆ ಬಡ್ತಿ ಮೀಸಲಾತಿಯಿಂದ ಬಡ್ತಿ ಹುದ್ದೆಗಳನ್ನು ಪಡೆದರೆ ಅವರುಗಳಿಗೆ ವೇಗೋತ್ಕರ್ಷಕ ಜೇಷ್ಠತೆಯನ್ನು ಸರಕಾರ ನೀಡುತ್ತ ಬಂದಿತ್ತು. ಈ ನೀತಿಯಿಂದ ಎಲ್ಲ ಬಡ್ತಿ ಹುದ್ದೆಗಳು ಹೆಚ್ಚಿನ ಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ಲಭಿಸಿ ಶೇ. 82 ವರ್ಗದವರಿಗೆ ಅನ್ಯಾಯವಾಗುತ್ತ ಬಂದಿತ್ತು. ಈ ವೇಗೋತ್ಕರ್ಷ ಜೇಷ್ಠತೆಯನ್ನು ಅನುಸರಿಸುತ್ತಿರುವ ಬಗ್ಗೆ ಸಾಮಾನ್ಯ ವರ್ಗದವರಿಂದ 1992ರಿಂದ ಕರ್ನಾಟಕ ಆಡಳಿತ ನ್ಯಾಯ ಮಂಡಳಿಯಲ್ಲಿ ಪ್ರಶ್ನೆ ಮಾಡಲಾಯಿತು. ತದ ನಂತರ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿ 2017ರಲ್ಲಿ ಸಾಮಾನ್ಯ ವರ್ಗದವರಿಗೆ ನ್ಯಾಯ ದೊರಕಿತು. ಈ ಆದೇಶವನ್ನು ಆರು ತಿಂಗಳಲ್ಲಿ ಜಾರಿ ಮಾಡಲು ತಿಳಿಸಿತ್ತು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಕಳೆದ 26 ವರ್ಷಗಳಿಂದ ಹೋರಾಟ ನಡೆಸಲಾಗಿದೆ. ಲಕ್ಷಾಂತರ ನೌಕರರು ಬಡ್ತಿಯಿಂದ ವಂಚಿತರಾಗಿದ್ದಾರೆ. ಸರಕಾರ ಎಲ್ಲ ಸತ್ಯಾಸತ್ಯತೆ ಅರಿತು ಕಾಯ್ದೆಯನ್ನು ಜಾರಿಗೊಳಿಸಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಬಿ.ಡಿ.ನಸಲಾಪುರೆ, ಸಿ.ಬಿ.ಯಂಕಂಚಿ, ಎ.ಎಂ.ಸುಂಕದ, ಎಸ್.ಎಸ್.ಪಟ್ಟಣಶೆಟ್ಟಿ, ಕೆ.ಆರ್.ರಮೇಶ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.