ಬೆಳಗಾವಿ- ಪೀರನವಾಡಿಯಲ್ಲಿ ಕ್ರಾಂತಿವೀರ ,ಶೂರ ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡುವ ವಿಷಯವನ್ನು ಬೆಳಗಾವಿ ಜಿಲ್ಲಾಡಳಿತ ತಿಳಿದುಕೊಂಡಷ್ಟು ಹಗುರವಾಗಿಲ್ಲ,ಯಾಕಂದ್ರೆ ದಿನಕಳೆದಂತೆ ಈ ಸಮಸ್ಯೆ ಜಟಿಲವಾಗುತ್ತಿದ್ದು ನಾಳೆ ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಅಭಿಮಾನಿಗಳು ಬೆಳಗಾವಿಗೆ ಮುತ್ತಿಗೆ ಹಾಕಲಿದ್ದಾರೆ.
ರಾಜ್ಯದ ಎಲ್ಲ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಬೆಳಗಾವಿಗೆ ಬರುತ್ತಿರುವ ರಾಯಣ್ಣನ ಅಭಿಮಾನಿಗಳು ಬೆಳಗಾವಿಯ ಸುವರ್ಣ ವಿಧಾನಸೌಧ ದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪಾದಯಾತ್ರೆ ನಡೆಸಿ ಪೀರನವಾಡಿಯಲ್ಲಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡುವಂತೆ ಆಗ್ರಹ ಪಡಿಸಲಿದ್ದಾರೆ.
ಪೀರನವಾಡಿಯ ಮೂರ್ತಿ ವಿವಾದದ ಕುರಿತು ಬೆಳಗಾವಿಯ ರಾಯಣ್ಣ ಅಭಿಮಾನಿಗಳು ನಿರಂತರವಾಗಿ ಹೋರಾಟ ನಡೆಸಿದ್ದು,ಬೆಳಗಾವಿಯ ಅಭಿಮಾನಿಗಳಿಗೆ ಸಾಥ್ ಕೊಡಲು ಬೆಂಗಳೂರು ಸೇರಿದಂತೆ,ಬಹುತೇಕ ರಾಜ್ಯದ ಎಲ್ಲ ಜಿಲ್ಲೆಗಳಿಂದ ರಾಯಣ್ಣನ ಅಭಿಮಾನಿಗಳು ನಾಳೆ ಬೆಳಗಾವಿಗೆ ಬರಲಿದ್ದಾರೆ.
ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಅವರು ರಾಯಣ್ಣನ ಅಭಿಮಾನಿಗಳ ಜೊತೆ,ಹಾಗೂ ಹಾಲುಮತ ಸಮಾಜದ ನಾಯಕರ ಜೊತೆ ಮಾತುಕತೆ ಮಾಡಿ ಗಣೇಶ ಹಬ್ಬ ಮುಗಿದ ಬಳಿಕ ಮೂರ್ತಿ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸುವದಾಗಿ ಭರವಸೆ ಕೊಟ್ಟಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ರಾಯಣ್ಣನ ಮೂರ್ತಿ ವಿವಾದದ ಕುರಿತು ದೊಡ್ಡ ಸಮರವೇ ನಡೆಯುತ್ತಿದೆ.ರಾಯಣ್ಣನ ಮೂರ್ತಿಯನ್ನು ಕಾನೂನು ಬದ್ದವಾಗಿ ಪೀರನವಾಡಿ ಸರ್ಕಲ್ ನಲ್ಲಿಯೇ ಪ್ರತಿಷ್ಠಾಪನೆ ಮಾಡುವಂತೆ ರಾಜ್ಯಾದ್ಯಂತ ಒತ್ತಾಯ ಮಾಡಲಾಗುತ್ತಿದೆ.
ನಾಳೆ ಬೆಳಗಾವಿಯಲ್ಲಿ ನಡೆಯಲಿರುವ ಹೋರಾಟ ಪೀರನವಾಡಿ ವಿವಾದದ ಕುರಿತು ನಡೆಯುತ್ತಿರುವ ಹೋರಾಟಕ್ಕೆ ಹೊಸ ಆಯಾಮ ನೀಡಲಿದೆ.
ಪೀರನವಾಡಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡುವಂತೆ ಆಗ್ರಹಿಸಿ ನಡೆಯುತ್ತಿರುವ ಹೋರಾಟ ಈಗ ಬೆಳಗಾವಿಗೆ ಸೀಮಿತ ವಾಗಿಲ್ಲ ಈ ಹೋರಾಟ ರಾಜ್ಯದೆಲ್ಲೆಡೆ ವ್ಯಾಪಿಸಿದೆ.