ಬೆಳಗಾವಿ: ಬೆಳಗಾವಿ ಮಹಾನಗರ ಸ್ಮಾರ್ಟ್ ಸಿಟಿ ಪಟ್ಟಿಗೆ ಸೇರಿ ಬರೋಬ್ಬರಿ ಒಂದು ವರ್ಷ ಗತಿಸಿದೆ. ಯೋಜನೆಯ 400 ಕೋಟಿ ರೂ. ಅನುದಾನ ಪಾಲಿಕೆಗೆ ಬಂದಿದೆ. ಇದರ ಬಳಕೆಗೆ ಒಬ್ಬ ವಿಶೇಷ ಅಧಿಕಾರಿಯೂ ನಿಯೋಜನೆಗೊಂಡಿದ್ದಾರೆ. ಸ್ಮಾರ್ಟ್ ಸಿಟಿ ಯೋಜನೆ ಕೇವಲ ಮೀಟಿಂಗ್ಗು, ಸೆಮಿನಾರು, ವರ್ಕ್ ಶಾಪ್ ಗಳಿಗೆ ಸೀಮಿತವಾಗಿದೆ. ಆದರೆ, ಇನ್ನೂವರೆಗೆ ಈ ಯೋಜನೆಯ ನಯಾಪೈಸೆ ಕೆಲಸವೂ ಆಗದೇ ಇರುವುದು ದೊಡ್ಡ ದುರ್ದೈವದ ಸಂಗತಿ.
ಸ್ಮಾರ್ಟ್ ಸಿಟಿ ಯೋಜನೆಯ 400 ಕೋಟಿ ರೂ. ಅನುದಾನ ಬಂದಿದೆ. ಯೋಜನೆಯ ಕಾಮಗಾರಿಗಳನ್ನು ನಿಭಾಯಿಸಲು ಲೆಹೆಮೀಯರ್ ಎಂಬ ಅಂತಾರಾಷ್ಟ್ರೀಯ ಏಜೆನ್ಸಿಯು ಅಂತಿಮಗೊಂಡಿದೆ. ಆದರೆ, ಬೆಳಗಾವಿ ಪಾಲಿಕೆಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಅಭಿವೃದ್ಧಿ ಕಾಮಗಾರಿಗಳು ಆರಂಭವಾಗಿಲ್ಲ.
ಸ್ಮಾರ್ಟ್ ಸಿಟಿ ಯೋಜನೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮುಲ್ಲಾಯಿ ಮೊಹಿಲನ್ ಅವರು ಇನ್ನೂವರೆಗೆ ಯೋಜನೆ ಕಾರ್ಯ ಚಟುವಟಿಕೆಗಳನ್ನು ಆರಂಭಿಸುವ ಪ್ರಯತ್ನಕ್ಕೆ ಕೈಹಾಕಿಲ್ಲ. ಸ್ಥಳೀಯ ಜನಪ್ರತಿನಿಧಿ ಗಳಿಗೆ ಈ ಬಗ್ಗೆ ಚಿಂತೆ ಮಾಡಲು ಪುರುಸೊತ್ತು ಸಿಗುತ್ತಿಲ್ಲ. ಪಾಲಿಕೆ ಅಧಿಕಾರಿಗಳು ಈ ಕುರಿತು ತಲೆ ಕೆಡಿಸಿಕೊಳ್ಳುತ್ತಿಲ್ಲ.
ಸ್ಮಾರ್ಟ್ ಸಿಟಿ ಯೋಜನೆ ಕೇವಲ ನಾಮಕೇ ವಾಸ್ತೆ ಎಂಬುದು ಈಗ ಅಕ್ಷರಶಃ ಸತ್ಯವಾಗಿದೆ. ಕೇಂದ್ರ ಸರ್ಕಾರ ತನ್ನ ಪಾಲಿನ ಜವಾಬ್ದಾರಿ ನಿಭಾಯಿಸಿದೆ. ಆದರೆ, ಅಧಿಕಾರಿಗಳು ಕೇವಲ ಮೀಟಿಂಗ್ಗು, ಕಾರ್ಯಾಗಾರಗಳಲ್ಲೇ ಕಾಲಹರಣ ಮಾಡುತ್ತಿದ್ದಾರೆ.
ಸ್ಮಾರ್ಟ್ ಸಿಟಿ ಯೋಜನೆ ಮೊದಲ ಹಂತದಲ್ಲಿ ಯಾವ್ಯಾವ ಅಭಿವೃದ್ಧಿ ಕಾಮಗಾರಿ ಗಳು ನಡೆಯಬಹುದು ಎಂಬುದು ಬೆಳಗಾವಿಗರಿಗೆ ಗೊತ್ತಿಲ್ಲ. ಈ ಕುರಿತು ಅಧಿಕಾರಿಗಳು ಸ್ಪಷ್ಟಪಡಿಸುತ್ತಿಲ್ಲ. ಈ ಯೋಜನೆಯ 400 ಕೋಟಿ ರೂ. ಅನುದಾನ ಪಾಲಿಕೆಯ ಖಜಾನೆಯಲ್ಲಿ ಕೊಳೆಯುತ್ತಿದೆ.
ಇನ್ನಾದರೂ ಮಹಾನಗರ ಪಾಲಿಕೆ ಅಧಿಕಾರಿಗಳು ಎಚ್ಚೆತ್ತು ಬೆಳಗಾವಿಗರ ಬಹುನಿರೀಕ್ಷೆಯ ಸ್ಮಾರ್ಟ್ ಯೋಜನೆಗೆ ಚಾಲನೆ ನೀಡುತ್ತಾರೆಯೇ? ಅಥವಾ ಹೀಗೆ ಹಿಂದೇಟು ಹಾಕುತ್ತಾರೋ? ಎಂಬುದನ್ನು ಕಾದುನೋಡಬೇಕು.