ಮಣಗುತ್ತಿಯಲ್ಲಿ ಪುಂಡಾಟಿಕೆಗೆ ಪುರಾವೆ ಹುಡುಕುತ್ತಿರುವ ಪುಂಡರು……
ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಇರುವಷ್ಟು ಶಿವಾಜಿ ಮಹಾರಾಜರ ಮೂರ್ತಿಗಳು ಪಕ್ಕದ ಕೊಲ್ಹಾಪುರ ಜಿಲ್ಲೆಯಲ್ಲೂ ಇಲ್ಲ.ಬೆಳಗಾವಿ ಜಿಲ್ಲೆಯ ಕನ್ನಡಿಗರು ಎಂದಿಗೂ ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪನೆಗೆ ಎಂದಿಗೂ ವಿರೋಧ ಮಾಡಿಲ್ಲ,ಮುಂದೆಯೂ ಮಾಡುವದಿಲ್ಲ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ,ಯಮಕನಮರಡಿ ವಿಧಾನಸಭೆ ಕ್ಷೇತ್ರದಲ್ಲಿ ಬರುವ ಮನಗುತ್ತಿ ಗ್ರಾಮದಲ್ಲಿ ಇತ್ತೀಚಿಗೆ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಗ್ರಾಮದ ಬಸ್ ನಿಲ್ಧಾಣದ ಆವರಣದಲ್ಲಿ ಪ್ರತಿಷ್ಠಾಪನೆ ಮಾಡಲಾಗಿತ್ತು,ಈ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ ಶಿವರಾಯನ ಭಕ್ತರೇ ಈಗ ಮೂರ್ತಿಯನ್ನು ಬೇರೆ ಪ್ರಮುಖ ಸ್ಥಳದಲ್ಲಿ ಪ್ರತಿಷ್ಠಾಪನೆ ಮಾಡುವ ಉದ್ದೇಶದಿಂದ ಮನಗುತ್ತಿ ಗ್ರಾಮದ ಮೂರ್ತಿಯನ್ನು ತೆರವು ಮಾಡಿ ಅದನ್ನು ಸುರಕ್ಷಿತವಾಗಿ ಇಟ್ಟಿದ್ದಾರೆ.ಮೂರ್ತಿ ಪ್ರತಿಷ್ಠಾಪನೆಗೆ ನಮಗೆ ಯಾರೂ ವಿರೋಧ ಮಾಡಿಲ್ಲ,ಅದನ್ನು ತೆರವು ಮಾಡಿ ಅಂತಾ ಯಾರೂ ಒತ್ತಾಯವೂ ಮಾಡಿಲ್ಲ ಎಂದು ಮನಗುತ್ತಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ಛತ್ರಪತಿ ಶಿವಾಜಿ ಮಹಾರಾಜರ ಭಕ್ತರು ಮರಾಠಾ ಸಮಾಜದ ಹಿರಿಯರು ಸ್ಪಷ್ಟಪಡಿಸಿದ್ದಾರೆ.
ಕಾಲು ಕೆದರಿ ಜಗಳ ಮಾಡುವದನ್ನೇ ಕರಗತ ಮಾಡಿಕೊಂಡಿರುವ ಮಹಾರಾಷ್ಟ್ರದ ಕೆಲವು ಪುಂಡರು,ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪನೆ ಮಾಡಲು ಕರ್ನಾಟಕ ಸರ್ಕಾರ ಪೋಲೀಸರನ್ನು ಛೂ ಬಿಟ್ಟು ವಿರೋಧ ಮಾಡುತ್ತಿದೆ,ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿಗೆ ದೂರು ನೀಡಿದ್ದಾರೆ.ಕೊಲ್ಹಾಪೂರದ ಕೆಲವು ಪುಂಡರು ನಾವು ರವಿವಾರ ಬೆಳಗಾವಿ ಜಿಲ್ಲೆಗೆ ನುಗ್ಗುತ್ತೇವೆ,ಎಂದು ಮರಾಠಿ ವಾಹಿನಿ ಒಂದಕ್ಕೆ ಹೇಳಿಕೆ ಕೊಟ್ಟಿದ್ದು,ಈ ವಾಹಿನಿ ಅದೇ ಹೇಳಿಕೆಯನ್ನು ಪದೇ ಪದೇ ಬಿತ್ತರಿಸಿ ಮರಾಠಿ ಭಾಷಿಕರನ್ನು ಪ್ರಚೋದಿಸುವ ಕೆಲಸ ಮಾಡುತ್ತಿದೆ.
ಶಿವಾಜಿ ಮಹಾರಾಜರ ವಿಷಯದಲ್ಲಿ ಗಡಿ ಭಾಗದ ಕನ್ನಡಿಗರು ಯಾವಾಗಲೂ ಅಭಿಮಾನದ ಜೊತೆ ಭಕ್ತಿಯನ್ನು ತೋರಿಸುತ್ತಲೇ ಬಂದಿದ್ದಾರೆ,ಶಿವಾಜಿ ಮಹಾರಾಜರು ಕೇವಲ ಮಹಾರಾಷ್ಟ್ರಕ್ಕೆ ಸೀಮೀತವಾದ ಮಹಾ ಪುರುಷರಲ್ಲ,ಶಿವಾಜಿ ಮಹಾರಾಜರು ರಾಷ್ಟ್ರ ಪುರುಷರು ಎನ್ನುವದನ್ನು ಬೆಳಗಾವಿ ಜಿಲ್ಲೆಯ ಕನ್ನಡಿಗರು ತೋರಿಸಿದ್ದಾರೆ ಶಿವಾಜಿ ಮಹಾರಾಜರನ್ನು ಕನ್ನಡಿಗರು ಆರಾಧಿಸಿದ್ದಾರೆ.
ಮನಗುತ್ತಿ ಗ್ರಾಮದಲ್ಲಿ ಮೂರ್ತಿ ಪ್ರತಿಷ್ಠಾಪನೆ ಆಗಿತ್ತು. ಅದಾದ ಬಳಿಕ ಅವರೇ ಕಾರಣಾಂತರಗಳಿಂದ ಮೂರ್ತಿಯನ್ನು ತೆರವು ಮಾಡಿದ್ದಾರೆ.ಮತ್ತೆ ಅದನ್ನು ಸೂಕ್ತವಾದ ಸ್ಥಳದಲ್ಲಿ ಅದನ್ನು ಪ್ರತಿಷ್ಠಾಪನೆ ಮಾಡುತ್ತಾರೆ,ಶಿವಾಜಿ ಮಹಾರಾಜರನ್ನು ಎಲ್ಲರೂ ಆರಾಧಿಸುತ್ತಾರೆ ಇದರಲ್ಲಿ ಎರಡು ಮಾತಿಲ್ಲ.
ಮನಗುತ್ತಿ ಗ್ರಾಮದಲ್ಲಿ ನಡೆದ ಸಹಜವಾದ ಘಟನೆಗೆ ಮಹಾರಾಷ್ಟ್ರದ ಕೆಲವು ಸಂಘಟನೆಗಳು ಬೇರೆ ಬಣ್ಣ ಬಳಿಯಲು ಮುಂದಾಗಿವೆ,ಕರ್ನಾಟಕ ಸರ್ಕಾರ ಶಿವಾಜಿ ಮಹಾರಾಜರ ವಿರೋಧಿ ಎನ್ನುವ ರೀತಿಯಲ್ಲಿ ಬಿಂಬಿಸುತ್ತಿರುವದು ಖಂಡನೀಯ.
ಕರ್ನಾಟಕ ಸರ್ಕಾರ ಬೆಳಗಾವಿ ಜಿಲ್ಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಗೆ ಎಂದಿಗೂ ವಿಶೇಷ ಅನುದಾನ ಕೊಟ್ಟಿಲ್ಲ,ಕೊಡುವದೂ ಇಲ್ಲ ಆದ್ರೆ ಬೆಳಗಾವಿ ನಗರದಲ್ಲಿ ಶಿವಾಜಿ ಜಯಂತಿ ಉತ್ಸವಕ್ಕೆ ಕರ್ನಾಟಕ ಸರ್ಕಾರ ವಿಶೇಷ ಅನುದಾನ ಈ ಹಿಂದೆಯೂ ಕೊಟ್ಟಿದೆ ಮುಂದೆಯೂ ಕೊಡುತ್ತದೆ.ಅದಕ್ಕೆ ಕನ್ನಡಿಗರೂ ಹಿಂದೆಯೂ ವಿರೋಧ ಮಾಡಿಲ್ಲ,ಮುಂದೆಯೂ ವಿರೋಧ ಮಾಡುವದಿಲ್ಲ
ಪುಟ್ಟ ಗ್ರಾಮವೊಂದರಲ್ಲಿ ನಡೆದ ಸಣ್ಣ ಘಟನೆ,ಸಹಜ ಪ್ರಸಂಗವನ್ನು ಮುಂದಿಟ್ಟುಕೊಂಡು ಮಹಾರಾಷ್ಟ್ರದ ನಾಯಕರು ಶಿವಾಜಿ ಮಹಾರಾಜರ ವಿಷಯದಲ್ಲಿ ಕರ್ನಾಟಕ ಸರ್ಕಾರದ ಮೇಲೆ,ಕನ್ನಡಿಗರ ಮೇಲೆ ಗೂಬೆ ಕೂರಿಸುವದು ಸರಿಯಲ್ಲ.
ಮನಗುತ್ತಿ ಗ್ರಾಮದಲ್ಲಿ ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪನೆ ವಿಷಯದಲ್ಲಿ ಯಾವುದೇ ರೀತಿಯ ಅಡತಡೆ ಆಗದಂತೆ ಅಲ್ಲಿಯ ಹಿರಿಯರು ನೋಡಿಕೊಳ್ಳುತ್ತಾರೆ.ಅದು ಸ್ಥಳೀಯ ವಿಚಾರವಾಗಿದ್ದು ಅದನ್ನು ಅವರು ಸೌಹಾರ್ದತೆಯಿಂದ ಬಗೆಹರಿಸಿಕೊಳ್ಳುತ್ತಾರೆ.ಅದರ ಬಗ್ಗೆ ಕೊಲ್ಹಾಪೂರದವರು ತೆಲೆ ಕೆಡಿಸಿಕೊಳ್ಳಬೇಕಾಗಿಲ್ಲ.
ಹಮ್ಹಾರೆ ಅಂಗಳದಲ್ಲಿ ಮಹಾರಾಷ್ಟ್ರಕಾ ಕ್ಯಾ…ಕಾಮ್ ಹೈ….!