ಆಹಾರ ಸಾಮಗ್ರಿಗಳ ನೇರ ವಿತರಣೆಗೆ ನಿರ್ಬಂಧ
—————————————————————
ಆಹಾರ ಸಾಮಗ್ರಿ ಮಹಾನಗರ ಪಾಲಿಕೆಗೆ ಸಲ್ಲಿಸಲು ಸಂಘ-ಸಂಸ್ಥೆಗಳಿಗೆ ಜಿಲ್ಲಾಧಿಕಾರಿ ಮನವಿ
ಬೆಳಗಾವಿ,-ಕೋವಿಡ್-೧೯ ತಡೆಗಟ್ಟುವಿಕೆ ಹಿನ್ನೆಲೆಯಲ್ಲಿ ಲಾಕ್ ಡೌನ್ ಘೋಷಿಸಲಾಗಿದೆ. ಈ ಸಂದರ್ಭದಲ್ಲಿ ಸಂಘ-ಸಂಸ್ಥೆಗಳು ಸಿದ್ಧಪಡಿಸಿದ ಆಹಾರ ಅಥವಾ ಆಹಾರ ಸಾಮಗ್ರಿಗಳನ್ನು ಸಾರ್ವಜನಿಕರಿಗೆ ನೇರವಾಗಿ ವಿತರಿಸುವುದನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್. ಬಿ.ಬೊಮ್ಮನಹಳ್ಳಿ ತಿಳಿಸಿದ್ದಾರೆ.
ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಈ ನಿರ್ಬಂಧ ವಿಧಿಸಲಾಗಿರುತ್ತದೆ. ಆಹಾರ ಸಾಮಗ್ರಿಗಳನ್ನು ವಿತರಿಸಲು ಬಯಸುವ ಸಂಘ-ಸಂಸ್ಥೆಗಳು ಮಹಾನಗರ ಪಾಲಿಕೆಯ ಮೂಲಕ ವಿತರಣೆ ಮಾಡಬಹುದು ಎಂದು ತಿಳಿಸಿದ್ದಾರೆ.
ಸಂಘ-ಸಂಸ್ಥೆಗಳು ಒಂದು ವೇಳೆ ಬಡವರು ಹಾಗೂ ಕೂಲಿ ಕಾರ್ಮಿಕರಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಲು ಬಯಸಿದರೆ ಅಂತಹ ಸಾಮಗ್ರಿಗಳನ್ನು ಮಹಾನಗರ ಪಾಲಿಕೆಗೆ ಸಲ್ಲಿಸಬೇಕು.
ಹೀಗೆ ಸಂಗ್ರಹವಾಗುವ ಆಹಾರಧಾನ್ಯ ಅಥವಾ ಸಿದ್ಧಪಡಿಸಿದ ಆಹಾರವನ್ನು ಪಾಲಿಕೆಯ ಕೇಂದ್ರೀಕೃತ ವ್ಯವಸ್ಥೆಯ ಮೂಲಕ ಅರ್ಹ ಕೂಲಿಕಾರ್ಮಿಕರು ಮತ್ತು ಬಡವರಿಗೆ ವಿತರಿಸಲಾಗುವುದು ಎಂದು ತಿಳಿಸಿದ್ದಾರೆ.
ಸಂಕಷ್ಟದಲ್ಲಿರುವ ಎಲ್ಲರಿಗೂ ಆಹಾರ ತಲುಪಿಸಬೇಕು ಎಂಬುದರ ಜತೆಗೆ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ನೇರವಾಗಿ ವಿತರಿಸುವುದನ್ನು ನಿರ್ಬಂಧಿಸಿದೆ.
ಸಂಘ-ಸಂಸ್ಥೆಗಳು ಆಹಾರ ಸಾಮಗ್ರಿಗಳನ್ನು ಅಥವಾ ಸಿದ್ಧಪಡಿಸಿದ ಆಹಾರವನ್ನು ತಲುಪಿಸಲು ಮಹಾನಗರ ಪಾಲಿಕೆಯ ಎಂಜಿನಿಯರ್ ಲಕ್ಷ್ಮೀ ನಿಪ್ಪಾಣಿಕರ (ಮೊಬೈಲ್ ಸಂಖ್ಯೆ- 9449193973 ) ಅವರನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದ್ದಾರೆ.
****