ಬೆಳಗಾವಿ: ಕಳೆದ ತಿಂಗಳಷ್ಟೇ ಬೆಳಗಾವಿಯ ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯಕ್ಕೆ ಹೆಣ್ಣು ಸಿಂಹವೊಂದು ಸೇರ್ಪಡೆಯಾಗಿತ್ತು. ಈಗ ಹೆಣ್ಣು ಹುಲಿಯೊಂದರ ಆಗಮನವಾಗಿದ್ದು, ಹುಲಿ ಪ್ರಿಯರ ಕಣ್ಮನ ಸೆಳೆಯಲಿದೆ.
ಪ್ರಾಣಿ ವಿನಿಮಯ ಕಾರ್ಯಕ್ರಮದಡಿ ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಿಂದ ‘ನಿತ್ಯ’ ಹೆಸರಿನ 12 ವರ್ಷದ ಹೆಣ್ಣು ಹುಲಿಯನ್ನು ಅರಣ್ಯ ಅಧಿಕಾರಿಗಳು ಗುರುವಾರ ಬೆಳಗಾವಿಗೆ ಕರೆ ತಂದಿದ್ದಾರೆ.
ಕಿತ್ತೂರು ಚನ್ನಮ್ಮ ಕಿರು ಮೃಗಾಲಯದಲ್ಲಿ ಈಗಾಗಲೇ ಕೃಷ್ಣಾ, ಕನಿಷ್ಕಾ ಹೆಸರಿನ ಎರಡು ಗಂಡು ಹುಲಿಗಳು ಇದ್ದವು. ಆದರೆ, ಹೆಣ್ಣು ಹುಲಿ ಇರಲಿಲ್ಲ. ಹಾಗಾಗಿ, ಕೇಂದ್ ಮೃಗಾಲಯ ಪ್ರಾಧಿಕಾರದ ಸೂಚನೆ ಮೇರೆಗೆ ಅರಣ್ಯ ಅಧಿಕಾರಿಗಳು ಮೈಸೂರಿನ ಮೃಗಾಲದಿಂದ ನಿತ್ಯಳನ್ನು ತೆಗೆದುಕೊಂಡು ಬಂದಿರುತ್ತಾರೆ.
ಈಟಿವಿ ಭಾರತ ಪ್ರತಿನಿಧಿಗೆ ಮಾಹಿತಿ ನೀಡಿದ ಮೃಗಾಲಯದ ವಲಯ ಅರಣ್ಯ ಸಂರಕ್ಷಾಧಿಕಾರಿ ಪವನ ಕುರನಿಂಗ, ಸದ್ಯಕ್ಕೆ 15 ದಿನ ಈ ಹುಲಿಯನ್ನು ಕ್ವಾರಂಟೈನ್ ನಲ್ಲಿ ಇಡುತ್ತೇವೆ. ಎರಡು ಗಂಡು ಹುಲಿಗಳ ಪೈಕಿ ಯಾವ ಹುಲಿ ಜೊತೆಗೆ ಹೊಂದಾಣಿಕೆ ಆಗುತ್ತದೆ ಎಂಬುದನ್ನು ನೋಡಿಕೊಂಡು ಸಫಾರಿಗೆ ಬಿಡುತ್ತೇವೆ. 15 ದಿನಗಳ ಬಳಿಕ ಈ ಹುಲಿಯನ್ನು ಪ್ರವಾಸಿಗರು ಕಣ್ತುಂಬಿಕೊಳ್ಳಬಹುದು ಎಂದರು.