ಬೆಳಗಾವಿ: ಕಂದಾಯ ಇಲಾಖೆಯಿಂದ ಅರಣ್ಯ ಇಲಾಖೆಗೆ ವರ್ಗಾವಣೆಗೊಂಡ ಜಮೀನುಗಳ ಪಹಣಿ ಪತ್ರಿಕೆಯನ್ನು ತಿದ್ದಿ ವಾಪಸ್ಸು ಪಡೆದು ಸಾಗುವಳಿದಾರ ರೈತರಿಗೆ ಹಂಚಿಕೆ ಮಾಡಬೇಕು. ಬಗರ ಹುಕುಂ ಸಾಗುವಳಿದಾರರಿಗೆ ಕೂಡಲೇ ಹಕ್ಕು ಪತ್ರ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಕುಲವಳ್ಳಿ ಭೂಮಿ ಸಾಗುವಳಿದಾರರ ಸಂಘದ ನೇತೃತ್ವದಲ್ಲಿ ಗುರುವಾರ ರೈತರು ಡಿಸಿ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಹಿಂದಿನ ಕಂದಾಯ ಸಚಿವರು ಕುಲವಳ್ಳಿ ಗ್ರಾಮಕ್ಕೆ ಭೇಟಿ ನೀಡಿ ತಮ್ಮ ಸಮಸ್ಯೆ ಆಲಿಸಿ ಸಾಗುವಳಿದಾರ ಖಾತೆ ಸರ್ವೇಯನ್ನು ಇಲಾಖೆ ನಡೆಸಲು ಆದೇಶ ನೀಡಿದ್ದರು ಸರ್ವೇ ಕಾರ್ಯ ಮುಗದಿದೆ. ಹಿಂದಿನ ಸಿಎಂ ಸಾಗುವಳಿ ರೈತರ, ಅಧಿಕಾರಿಗಳ ಜೊತೆಗೆ ಚರ್ಚಿಸಿ ಸಾಗುವಳಿ ರೈತರಿಗೆ ನ್ಯಾಯ ದೊರಕಿಸಲು ಪ್ರಯತ್ನಿಸಿದ್ದಾರೆ. ಈಗ ಸರಕಾರ ಬದಲಾದಾಗ ಇಲ್ಲಿಯ ಸ್ಥಳೀಯ ಅರಣ್ಯ ಅಧಿಕಾರಿಗಳು ರೈತರು ಬೆಳೆದ ಬೆಳೆಯನ್ನು ನಾಶಮಾಡಿ ಟ್ರೆಂಚ್ ತೆಗೆದು ಗಿಡ ಹಚ್ಚಲು ಪ್ರಯತ್ನಿಸುತ್ತಿರುವುದು ಯಾವ ನ್ಯಾಯವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಎಲ್.ಎಸ್.ನಾಯಕ, ಶಿವಮೂರ್ತಿ ಜಿಂದ್ರಾಳೆ, ನಾಗೇಶ ಅಸ್ಲಂನವರ, ಕಾಶೀಮಸಾಬ ನೇಸರಗಿ, ವೆಂಕಟೇಶ ನೇಸರಗಿ ಸೇರಿದಂತೆ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.