ಬೆಳಗಾವಿ- ದೆಹಲಿಯಿಂದ ತಬ್ಲಿಘಿಗಳು, ಅಜ್ಮೇರ್ ನಿಂದ ಜನರು ಹಿಂದಿರುಗಿದ ಬಳಿಕವೂ ಜಿಲ್ಲೆಯಲ್ಲಿ ಕೋವಿಡ್-೧೯ ನಿಯಂತ್ರಣಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗಿತ್ತು. ಇದೀಗ ಮಹಾರಾಷ್ಟಗರದಿಂದ ಅತೀ ಹೆಚ್ಚು ಜನರು ಬರುತ್ತಿರುವುದರಿಂದ ಇನ್ನೂ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಅಧಿಕಾರಿಗಳಿ ಸೂಚನೆ ನೀಡಿದ್ರು.
ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೋವಿಡ್-೧೯ ನಿಯಂತ್ರಣ ಹಾಗೂ ನೆರೆಹಾವಳಿ ನಿರ್ವಹಣೆಗೆ ಸಂಬಂಧಿಸಿದಂತೆ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಶಶಿಕಲಾ ಜೊಲ್ಲೆ, ರೈಲ್ವೆ ಇಲಾಖೆಯ ರಾಜ್ಯ ಸಚಿವರಾದ ಸುರೇಶ್ ಅಂಗಡಿ, ಸಂಸದ ಅಣ್ಣಾಸಾಹೇಬ್ ಜೊಲ್ಲೆ ಅವರು ಕೋವಿಡ್-೧೯ ಸೋಂಕಿತ ಮಕ್ಕಳ ಕುರಿತು ಮಾಹಿತಿಯನ್ನು ಪಡೆದುಕೊಂಡರು
ಶಾಸಕ ಸತೀಶ್ ಜಾರಕಿಹೊಳಿ ಮಾತನಾಡಿ, ಮಳೆಗಾಲ ಆರಂಭಗೊಂಡಿರುವುದರಿಂದ ರೈತರು ಹಾಗೂ ವರ್ತಕರ ಹಿತದೃಷ್ಟಿಯಿಂದ ಎಪಿಎಂಸಿ ವಹಿವಾಟು ಒಂದೇ ಕಡೆ ಆರಂಭಿಸಬೇಕು ಎಂದು ಮನವಿ ಮಾಡಿಕೊಂಡರು. ಕ್ವಾರಂಟೈನ್ ಇರುವವರನ್ನು ವರದಿ ಬರುವ ಮುಂಚೆಯೇ ಮನೆಗೆ ಕಳಿಸಿದ್ದರಿಂದ ಕೆಲವು ಭಾಗಗಳಲ್ಲಿ ಸೋಂಕು ಹರಡಿದೆ. ಇದೀಗ ತಪಾಸಣೆ ಕಡಿಮೆಗೊಳಿಸಿದರೆ ಸೋಂಕು ಮತ್ತಷ್ಟು ಹರಡುವ ಸಾಧ್ಯತೆಯಿದೆ. ಆದ್ದರಿಂದ ತಪಾಸಣೆ ಪ್ರಮಾಣ ಇನ್ನಷ್ಟು ಹೆಚ್ವಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಸಲಹೆ ನೀಡಿದರು. ಸರ್ಕಾರ ಘೋಷಿಸಿರುವ ಪ್ಯಾಕೇಜ್ ಲಾಭ ಮಾಲೀಕರ ಜತೆಗೆ ದುಡಿಯುತ್ತಿರುವ ಜನರಿಗೂ ತಲುಪಿಸಲು ಕ್ರಮ ಕೈಗೊಳ್ಳಬೇಕು ಎಂದರು.
ಶಾಸಕ ಮಹಾಂತೇಶ ದೊಡಗೌಡ್ರ, ತರಕಾರಿ ಮತ್ತು ತೋಟಗಾರಿಕೆ ಬೆಳೆಗಾರರಿಗೆ ಆಗಿರುವ ಹಾನಿ ಭರಿಸಲು ಅಗತ್ಯ ಕ್ರಮ ವಹಿಸಬೇಕು ಎಂದರು.
ದೇವಸ್ಥಾನ ಆರಂಭ ಸದ್ಯಕ್ಕೆ ಬೇಡ:
ಶಾಸಕ ದುರ್ಯೋಧನ ಐಹೊಳೆ ಮಾತನಾಡಿ, ರಾಯಬಾಗ ತಾಲ್ಲೂಕಿನ ಚಿಂಚಲಿ ಮಾಯಕ್ಕ ದೇವಸ್ಥಾನಕ್ಕೆ ಮಹಾರಾಷ್ಟ್ರದ ಭಕ್ತರು ಹೆಚ್ಚಿನ ಪ್ರಮಾಣದಲ್ಲಿ ಆಗಮಿಸುವುದರಿಂದ ದೇವಸ್ಥಾನವನ್ನು ಸದ್ಯಕ್ಕೆ ಆರಂಭಿಸಬಾರದು ಎಂದು ಮನವಿ ಮಾಡಿಕೊಂಡರು.
ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಮಹೇಶ್ ಕುಮಠಳ್ಳಿ, ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಆಶಾ ಐಹೊಳೆ, ಉಪಾಧ್ಯಕ್ಷ ಅರುಣ ಕಟಾಂಬಳೆ, ಕೋವಿಡ್-೧೯ ವಿಶೇಷ ನಿಯಂತ್ರಣಾಧಿಕಾರಿ ರಾಜೇಂದ್ರ ಚೋಳನ್, ಮೊದಲಾದವರು ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರಿಂದ ಸಮಗ್ರ ಮಾಹಿತಿ
ಕೊರೊನಾಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 97 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ 1411 ಮಾದರಿಗಳ ವರದಿ ಬರಬೇಕಿದೆ
ಜಿಲ್ಲೆಯಲ್ಲಿ ಇದುವರೆಗೆ ಒಟ್ಟಾರೆ 48 ಕಂಟೈನ್ಮೆಂಟ್ ಝೋನ್ ಘೋಷಣೆ ಮಾಡಲಾಗಿದ್ದು, 9 ಡಿನೋಟಿಫೈ ಮಾಡಲಾಗಿರುತ್ತದೆ. ಸದ್ಯಕ್ಕೆ ಇನ್ನೂ 39 ಕಂಟೈನ್ಮೆಂಟ್ ಝೋನ್ ಗಳಿವೆ ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ವಿವರಿಸಿದರು.
ಕಂಟೈನ್ಮೆಂಟ್ ಝೋನ್ ಗಳಲ್ಲಿ ಜನರ ಮನೆಬಾಗಿಲಿಗೆ ಅಗತ್ಯ ವಸ್ತುಗಳನ್ನು ಪೂರೈಸಲು ಕ್ರಮಕೈಗೊಳ್ಳಲಾಗಿದೆ.
ನೆರೆಯ ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳಿಂದ ಬೆಳಗಾವಿ ಜಿಲ್ಲೆಯ ಮೂಲಕ 45 ಸಾವಿರ ಬಜನರು 7 ಸಾವಿರ ವಾಹನಗಳು ಪ್ರಯಾಣ ಕೈಗೊಂಡಿದ್ದಾರೆ.
ಸರ್ಕಾರದ ಹೊಸ ಮಾರ್ಗಸೂಚಿವ ಪ್ರಕಾರ ಇನ್ನು ಮುಂದೆ 7 ದಿನ ಸಾಂಸ್ಥಿಕ ಕ್ವಾರಂಟೈನ್ ಹಾಗೂ ಮುಂದಿನ ಹದಿನಾಲ್ಕು ದಿನ ಹೋಮ್ ಕ್ವಾರಂಟೈನ್ ಮಾಡಲಾಗುವುದು ಎಂದು ತಿಳಿಸಿದರು.
ಎಪಿಎಂಸಿ ಜನಸಂದಣಿ ನಿರ್ವಹಣೆ ಸವಾಲು ಆಗಿತ್ತು. ಆದ್ದರಿಂದ ನಗರದ ಮೂರು ದಿಕ್ಕುಗಳಲ್ಲಿ ಪ್ರತ್ಯೇಕ ತಾತ್ಕಾಲಿಕ ಮಾರುಕಟ್ಟೆ ವ್ಯವಸ್ಥೆ ಮಾಡಲಾಗಿದೆ. ಇದೀಗ ಒಂದೇ ಕಡೆ ವಹಿವಾಟು ನಡೆಸಲು ವರ್ತಕರು ಮನವಿ ಮಾಡಿಕೊಳ್ಳುತ್ತಿದ್ದಾರೆ.
ಇದಲ್ಲದೇ ಮುಂಬರುವ ದಿನಗಳಲ್ಲಿ ದೇವಸ್ಥಾನ ಆರಂಭಗೊಳ್ಳಲಿರುವುದರಿಂದ ಹೊಸ ಸವಾಲು ಎದುರಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ವಿವರಿಸಿದರು.
ಸವದತ್ತಿ ಯಲ್ಲಮ್ಮನ ದೇವಸ್ಥಾನ, ಮತ್ತು ಚಿಂಚಲಿ ಮಾಯಕ್ಕನ ದೇವಸ್ಥಾನ ಕ್ಕೆ ಮಹಾರಾಷ್ಟ್ರದ ಭಕ್ತರು ಆಗಮಿಸುತ್ತಾರೆ.ಈ ಎರಡೂ ದೇವಸ್ಥಾನ ಓಪನ್ ಮಾಡಬಾರದು, ಈ ಕುರಿತು ಸಿಎಂ ಜೊತೆಗೂ ಮಾತಾಡಿದ್ದೇನೆ,ಎಂದು ಡಿಸಿ ಮಾಹಿತಿ ನೀಡಿದ್ರು
ರೋಗಲಕ್ಷಣ ಇಲ್ಲದಿರುವ ಸೋಂಕಿ ವ್ಯಕ್ತಿಗಳಿಂದ ಸೋಂಕು ಹರಡುವುದಿಲ್ಲ ಎಂಬ ತಜ್ಞರ ಅಭಿಪ್ರಾಯದ ಹಿನ್ನೆಲೆಯಲ್ಲಿ ಮಾದರಿ ತಪಾಸಣೆಗೆ ಸಂಬಂಧಿಸಿದಂತೆ ಕೆಲವು ಬದಲಾವಣೆ ಮಾಡಲಾಗಿದೆ ಎಂದರು.
ಪಿಪಿಇ ಕಿಟ್ ಹಾಗೂ ಔಷಧ ಸಾಮಗ್ರಿ ಸೇರಿದಂತೆ ಜಿಲ್ಲೆಯಲ್ಲಿ ಯಾವುದೇ ಕೊರತೆಯಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್. ವಿ.ಮುನ್ಯಾಳ ವಿವರಿಸಿದರು.
9 ತಾಲ್ಲೂಕು ಆಸ್ಪತ್ರೆಗಳಲ್ಲೂ ತುರ್ತು ಚಿಕಿತ್ಸೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.