ಬೆಳಗಾವಿ: ರಾಜ್ಯದಲ್ಲಿ 40 ಲಕ್ಷ ಜನಸಂಖ್ಯೆ ಹೊಂದಿರುವ ಉಪ್ಪಾರ ಸಮಾಜಕ್ಕೆ ಪ್ರಾತಿನಿಧ್ಯ ನೀಡಲು ಬಿಜೆಪಿಯ ರಾಜ್ಯ ಹಿಂದುಳಿದ ವರ್ಗಗಳ ಉಪಾಧ್ಯಕ್ಷರಾಗಿ ಸೇವೆ ಹಾಗೂ ಕರ್ನಾಟಕ ರಾಜ್ಯ ಉಪ್ಪಾರ ಸಂಘದ ಕಾರ್ಯಾಧ್ಯಕ್ಷರಾಗಿರುವ ಸಲ್ಲಿಸಿರುವ ಹುಬ್ಬಳ್ಳಿಯ ಲಕ್ಷ್ಮಣ ಉಪ್ಪಾರ ಅವರಿಗೆ ವಿಧಾನ ಪರಿಷತ್ ಸದಸ್ಯರನ್ನಾಗಿ ನೇಮಕ ಮಾಡಬೇಕೆಂದು ರಾಜ್ಯ ಉಪ್ಪಾರ ಯುವಕರ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ನ್ಯಾಯವಾದಿ ಮಲ್ಲಿಕಾರ್ಜುನ ಚೌಕಶಿ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಆಗ್ರಹಿಸಿದ್ದಾರೆ.
ಲಕ್ಷ್ಮಣ ಉಪ್ಪಾರ ಅವರು ಕಳೆದ 30 ವರ್ಷಕ್ಕೂ ಹೆಚ್ಚಿನ ಕಾಲದಿಂದ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಎರಡು ಬಾರಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸದಸ್ಯರಾಗಿ ಸೇವೆ ನಿರ್ವಹಿಸಿದ್ದಾರೆ. ಉಪ್ಪಾರ ಸಮಾಜವನ್ನು ಪರಿಶಿಷ್ಠ ಪಂಗಡಕ್ಕೆ ಸೇರಿಸಲು ರಾಜ್ಯದಾದ್ಯಂತ ಸಂಚರಿಸಿ ಮಹಾತ್ಮಾ ಗಾಂಧೀಜಿಯವರ ಪ್ರೇರಣೆಯಂತೆ ಉಪ್ಪಿನ ಸತ್ಯಾಗ್ರಹದ ಆಂದೋಲನ ಮಾಡುವ ಮೂಲಕ ಸಮಾಜದ ಪ್ರೀತಿಗೆ ಪಾತ್ರರಾಗಿದ್ದಾರೆ. ಅವರನ್ನು ವಿಧಾನ ಪರಿಷತ್ತಿಗೆ ನೇಮಕ ಮಾಡುವ ಮೂಲಕ ಉಪ್ಪಾರ ಸಮಾಜಕ್ಕೆ ಪ್ರಾತಿನಿಧ್ಯ ಕಲ್ಪಿಸಬೇಕೆಂದು ಚೌಕಶಿ ಅವರು ಮುಖ್ಯಮಂತ್ರಿಯಲ್ಲಿ ಮನವಿ ಮಾಡಿದ್ದಾರೆ.
ಬಿ.ಎಸ್.ಯಡಿಯೂರಪ್ಪನವರು 2006 ರಲ್ಲಿ ರಾಜ್ಯದಾದ್ಯಂತ ಪರಿವರ್ತನಾ ರ್ಯಾಲಿ ಹಮ್ಮಿಕೊಂಡು ಬೆಳಗಾವಿ ಜಿಲ್ಲೆಗೆ ಬಂದ ಸಂದರ್ಭದಲ್ಲಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ತಕ್ಷಣ ಉಪ್ಪಾರ ಸಮಾಜದ ಒಬ್ಬರನ್ನು ವಿಧಾನ ಪರಿಷತ್ತಿಗೆ ಕಳಿಸುವುದಾಗಿ ಭರವಸೆ ಕೊಟ್ಟಿದ್ದರು. ಯಡಿಯೂರಪ್ಪನವರು ತಮ್ಮ ಭರವಸೆಯನ್ನು ಉಳಿಸಿಕೊಳ್ಳಬೇಕು ಎಂದು ಮಲ್ಲಿಕಾರ್ಜುನ ಚೌಕಶಿ ಒತ್ತಾಯಿಸಿದ್ದಾರೆ.
ಉಪ್ಪಾರ ಸಮಾಜವು ಆರ್ಥಿಕವಾಗಿ, ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯ ರಂಗದಲ್ಲಿ ಹಿಂದೆ ಉಳಿದಿದ್ದು, ಮೊದಲಿನಿಂದಲೂ ಸಿಗಬೇಕಾದ ನ್ಯಾಯದಿಂದ ವಂಚಿತವಾಗಿದೆ. ಬಿಜೆಪಿ ಸರ್ಕಾರವು ಎಲ್ಲ ರೀತಿಯಿಂದ ಹಿಂದುಳಿದಿರುವ ಉಪ್ಪಾರ ಸಮಾಜಕ್ಕೆ ಪ್ರಾಶಸ್ತ್ಯ ನೀಡುವ ಮೂಲಕ ಸಾಮಾಜಿಕ ನ್ಯಾಯವನ್ನು ಕಾಪಾಡಬೇಕು ಎಂದು ಮಲ್ಲಿಕಾರ್ಜುನ ಚೌಕಶಿ ಅವರು ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ.
ಮಲ್ಲಿಕಾರ್ಜುನ ಚೌಕಶಿ
ವಕೀಲರು ಗೋಕಾಕ
9986944949