Breaking News

ಸುವರ್ಣ ಸೌಧದಲ್ಲಿ ಮಾಹಿತಿ ಆಯೋಗದ ಬೆಳಗಾವಿ ಪೀಠ ಕಾರ್ಯಾರಂಭ

ಬೆಳಗಾವಿ,- ವಿವಿಧ ಇಲಾಖೆಗಳ ರಾಜ್ಯಮಟ್ಟದ ಕಚೇರಿಗಳನ್ನು ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಿಸಬೇಕು ಎಂಬ ಉತ್ತರ ಕರ್ನಾಟಕದ ಜನರ ಬಹುದಿನಗಳ ಬೇಡಿಕೆ ಮತ್ತು ಸರ್ಕಾರದ ಆಶಯದಂತೆ ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಕರ್ನಾಟಕ ಮಾಹಿತಿ ಆಯೋಗದ ಬೆಳಗಾವಿ ಪೀಠವು ಕಾರ್ಯಾರಂಭಿಸಿದೆ.

ಈ ಕುರಿತು ಶುಕ್ರವಾರ (ಜೂ.19) ಪತ್ರಿಕಾಗೋಷ್ಠಿ ನಡೆಸಿದ ಕರ್ನಾಟಕ ಮಾಹಿತಿ ಆಯೋಗದ ಆಯುಕ್ತರಾದ ಗೀತಾ ಬಿ.ವಿ. ಅವರು, ಆಯೋಗದ ಬೆಳಗಾವಿ ಪೀಠದ ನ್ಯಾಯಾಲಯ ಕಲಾಪ ಜೂ.22 ರಿಂದ ಆರಂಭಗೊಳ್ಳಲಿದೆ ಎಂದು ಪ್ರಕಟಿಸಿದರು.

ಆಯೋಗದ ಬೆಳಗಾವಿ ಪೀಠವು ಮಾರ್ಚ್ 3 ರಂದು ಕಾರ್ಯಾರಂಭಿಸಬೇಕಿತ್ತು. ಆದರೆ ಕೊರೊನಾ ಹಿನ್ನೆಲೆಯಲ್ಲಿ ವಿಳಂಬವಾಯಿತು.

ಸರ್ಕಾರ ಮತ್ತು ಉತ್ತರ ಕರ್ನಾಟಕದ ಜನರ ಆಶೋತ್ತರದಂತೆ ಸುವರ್ಣ ವಿಧಾನಸೌಧದಲ್ಲಿ ಕಾರ್ಯ ಕಲಾಪ ಆರಂಭಿಸಲಾಗುತ್ತಿದೆ. ಈ ಭಾಗದ ಜನರ ಬಹುದಿನಗಳ ಆಶಯ ಇದೀಗ ಈಡೇರಿದಂತಾಗಿದೆ.

ಪೀಠದ ಕಾರ್ಯನಿರ್ವಹಣೆಗೆ ಅವಕಾಶ ಕಲ್ಪಿಸಿದ ಮುಖ್ಯಮಂತ್ರಿಗಳು ಹಾಗೂ ವಿಧಾನಸಭೆಯ ಅಧ್ಯಕ್ಷರಿಗೆ ಆಯುಕ್ತರು ಕೃತಜ್ಞತೆ ಸಲ್ಲಿಸಿದರು.

ಪೀಠಕ್ಕೆ ಏಳು ಜಿಲ್ಲೆಯ ವ್ಯಾಪ್ತಿ:

ಮಾಹಿತಿ ಆಯೋಗದ ಬೆಳಗಾವಿ ಪೀಠದ ವ್ಯಾಪ್ತಿಯಲ್ಲಿ ಬೆಳಗಾವಿ ವಿಭಾಗದ ಏಳು ಜಿಲ್ಲೆಗಳು ಬರಲಿದ್ದು, ಪೀಠದ ವ್ಯಾಪ್ತಿಯಲ್ಲಿ ಒಟ್ಟಾರೆ ನಾಲ್ಕು ಸಾವಿರ ಪ್ರಕರಣಗಳು ಬಾಕಿ ಉಳಿದಿರುತ್ತವೆ ಎಂದು ಆಯುಕ್ತರಾದ ಗೀತಾ ಬಿ‌.ವಿ. ತಿಳಿಸಿದರು.

ಬೆಳಗಾವಿ, ಧಾರವಾಡ, ವಿಜಯಪುರ, ಬಾಗಲಕೋಟೆ, ಗದಗ, ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಪ್ರಕರಣಗಳನ್ನು ಪೀಠ ನಿರ್ವಹಿಸಲಿದೆ.

ನಾಲ್ಕು ಸಾವಿರ ಪ್ರಕರಣಗಳು ಇರುವುದರಿಂದ ಕೊರೊನಾ ಹಿನ್ನೆಲೆಯಲ್ಲಿ ಆರಂಭದಲ್ಲಿ ಕಡಿಮೆ ಸಂಖ್ಯೆಯ ಪ್ರಕರಣಗಳನ್ನು ಕೈಗೆತ್ತಿಕೊಂಡು ಹಳೆಯ ಪ್ರಕರಣಗಳ ಇತ್ಯರ್ಥಕ್ಕೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

ಅಧಿಕಾರಿಗಳು ಮತ್ತು ಮೇಲ್ಮನವಿದಾರರ ಸಮ್ಮುಖದಲ್ಲಿ ತ್ವರಿತವಾಗಿ ಪ್ರಕರಣಗಳ ವಿಲೇವಾರಿ ಮಾಡುವ ಚಿಂತನೆ ಇದೆ.

ಅಧಿವೇಶನ ಸಂದರ್ಭದಲ್ಲಿ ಮಾಹಿತಿ ಆಯೋಗದ ಬೆಳಗಾವಿ ಪೀಠದ ಕಾರ್ಯಕಲಾಪಗಳು ನಡೆಯುವುದಿಲ್ಲ. ಈ ಅವಧಿಯಲ್ಲಿ ಪೀಠದ ವ್ಯಾಪ್ತಿಯ ಜಿಲ್ಲೆಗಳಲ್ಲಿ ಜಾಗೃತಿ ಕಾರ್ಯಾಗಾರ ಆಯೋಜಿಸಲಾವುದು.
ಕಾಯ್ದೆಯ ಬಗ್ಗೆ ಸಮರ್ಪಕ ತಿಳಿವಳಿಕೆ ನೀಡಲು ಅಧಿಕಾರಿಗಳಿಗೆ ಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸಲು ನಿರ್ಧರಿಸಲಾಗಿದೆ.

ಅದೇ ರೀತಿ ಅಧಿವೇಶನ ಸಂದರ್ಭದಲ್ಲಿ ಆಯಾ ಜಿಲ್ಲೆಗಳಲ್ಲಿ ಕಲಾಪ ನಡೆಸಲಾಗುವುದು.
ಇದಕ್ಕೂ ಮುಂಚೆ ಬೆಂಗಳೂರಿನಿಂದ ವಿಡಿಯೋ ಸಂವಾದದ ಮೂಲಕ ಪ್ರಕರಣ ವಿಲೇವಾರಿ ಮಾಡಲಾಗಿರುತ್ತದೆ.

ಪೀಠದ ಕಾರ್ಯಕಲಾಪಗಳ ಸುಮಗ ನಿರ್ವಹಣೆಗೆ ಶಾಖಾಧಿಕಾರಿ ಹಾಗೂ ಅಧೀನ ಕಾರ್ಯದರ್ಶಿಗಳ ಅಗತ್ಯವಿದ್ದು, ಇವರನ್ನು ನಿಯೋಜಿಸುವಂತೆ ಕೋರಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ.

ಸುವರ್ಣ ಸೌಧಕ್ಕೆ ಸಾರಿಗೆ ಸೌಲಭ್ಯ:

ಸುವರ್ಣ ವಿಧಾನಸೌಧ ನಗರದಿಂದ ದೂರದಲ್ಲಿರುವುದರಿಂದ ಸದ್ಯಕ್ಕೆ ಪ್ರತಿದಿನ ಮೂರು ಬಸ್ ವ್ಯವಸ್ಥೆಯನ್ನು ಸಾರಿಗೆ ಇಲಾಖೆ ಕಲ್ಪಿಸಿದೆ.
ಕಲಾಪಕ್ಕೆ ಬರಬೇಕಾದರೆ ಸಮನ್ಸ್ ಪ್ರತಿ ತೋರಿಸಿದರೆ ಮಾತ್ರ ಸುವರ್ಣ ವಿಧಾನಸೌಧದ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಮಾಹಿತಿ ಆಯುಕ್ತರಾದ ಗೀತಾ ಬಿ.ವಿ. ವಿವರಿಸಿದರು.
***

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *