ಬೆಳಗಾವಿ.ರಾಜ್ಯ ಸರ್ಕಾರ ಹಾಗೂ ರೈತ ಸಂಘಟನೆಗಳ ನಡುವೆ ಹಗ್ಗ ಜಗ್ಗಾಟ ನಡೆದಿದೆ. ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಕ್ಕರೆ ಸಚಿವ ರೈತ ನಾಯಕರ ಜೊತೆ ನಡೆಸಿದ ಸಂಧಾನ ಸಭೆ ಸಂಪೂರ್ಣವಾಗಿ ವಿಫಲವಾಗಿದ್ದು ಹೋರಾಟವನ್ನು ಮುಂದುವರೆಸಲು ರೈತ ನಾಯಕರು ನಿರ್ಧರಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಂಧಾನ ಸಭೆಯಲ್ಲಿ ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ಸೇರಿದಂತೆ ರೈತ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು. ಸರ್ಕಾರ ಕಳೆದ ಮೂರು ವರ್ಷಗಳಿಂದ ಕಬ್ಬಿಗೆ ನಿರ್ದಿಷ್ಟವಾದ ಬೆಲೆಯನ್ನು ನಿಗದಿ ಮಾಡಿಲ್ಲ. ಸರ್ಕಾರ ತಾನು ರೂಪಿಸಿದ ಎಸ್.ಎ.ಪಿ ಕಾಯ್ದೆಯನ್ನು ಅನುಷ್ಟಾನಗೊಳಿಸುಲವಲ್ಲಿ ವಿಫಲವಾಗಿದೆ. ರೈತರು ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ. ಪ್ರಸಕ್ತ ವರ್ಷದ ಕಬ್ಬ ನುರಿಸುವ ಹಂಗಾಮು ಆರಂಭವಾದರೂ ಇನ್ನೂವರೆಗೆ ಕಬ್ಬಿನ ದರ ನಿಗದಿ ಮಾಡಿಲ್ಲ ಎಂದು ರೈತ ನಾಯಕರು ಸಕ್ಕರೆ ಸಚಿವರನ್ನು ತರಾಟೆಗೆ ತೆಗದುಕೊಂಡರು.
ಸಕ್ಕರೆ ಸಚಿವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ. ನೀವೊಬ್ಬ ಸುಳ್ಳುಗಾರ, ಮೋಸಗಾರ ಎಂದು ಆಕ್ರೋಶ ವ್ಯಕ್ತಪಡಿಸಿದ ರೈತ ನಾಯಕರು ಸಕ್ಕರೆ ಸಚಿವ ಮಹದೇವ ಪ್ರಸಾದ್ ಎದುರಲ್ಲಿಯೇ ಸರ್ಕಾರದ ವಿರುದ್ಧ ಹಾಗೂ ಸಚಿವರ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶವನ್ನು ಹೊರ ಹಾಕಿದರು.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಕ್ಕರೆ ಸಚಿವ ಮಹದೇವ ಪ್ರಸಾದ್ ಸರ್ಕಾರ ರೈತರ ಸಮಸ್ಯೆಗಳನ್ನು ಆಲಿಸಲು ಬದ್ಧವಾಗಿದೆ. ಕೂಡಲೇ ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಸಭೆ ನಡೆಸಿ ಸರ್ಕಾರ ತನ್ನ ನಿಲುವನ್ನು ಗುರುವಾರ ಪ್ರಕಟಿಸಲಿದೆ ಎಂದು ತಿಳಿಸಿದರು.
ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ ರೈತರು ಹಲವಾರು ದಿನಗಳಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಹೋರಾಟ ನಡೆಸುತ್ತಿದ್ದರೂ ಸರ್ಕಾರ ಸ್ಪಂದಿಸಿಲ್ಲ . ಇಂದು ನಡೆದ ಸಭೆ ಸಂಪೂರ್ಣವಾಗಿ ವಿಫಲವಾಗಿದೆ. ಸರ್ಕಾರ ರೈತರ ಸಮಸ್ಯೆಗಳಿಗೆ ಸ್ಪಂದಿಸುವವರೆಗೂ ರೈತರ ಹೋರಾಟ ನಿಲ್ಲೋದಿಲ್ಲ ಎಂದು ಎಚ್ಚರಿಕೆ ನೀಡಿದರು.