Breaking News

ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯವಾಗಿಲ್ಲ: ಮುಖ್ಯಮಂತ್ರಿ

ನ.23:  ಕಳೆದ ನಾಲ್ಕುವರೆ ವರ್ಷಗಳಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಅನುದಾನ ಒದಗಿಸಿದ್ದು, ಉತ್ತರಕರ್ನಾಟಕ ಭಾಗಕ್ಕೆ ಯಾವುದೇ ಅನ್ಯಾಯವಾಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ತಿಳಿಸಿದರು.
ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತಾಗಿ ಗುರುವಾರ ನಡೆದ ವಿಶೇಷ ಚರ್ಚೆಗೆ ಉತ್ತರಿಸಿದ ಅವರು, ಕಳೆದ ನಾಲ್ಕುವರೆ ವರ್ಷಗಳಲ್ಲಿ ಉತ್ತರಕರ್ನಾಟಕ ಜಿಲ್ಲೆಗಳ ಅಭಿವೃದ್ಧಿಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಅಂಕಿ ಅಂಶಗಳ ಸಹಿತ ಉತ್ತರಿಸಿದರು. ಪಂಚಾಯತ್ ರಾಜ್, ಕೃಷಿ, ರಸ್ತೆಗಳ ನಿರ್ಮಾಣ, ಕುಡಿಯುವ ನೀರಿನ ಯೋಜನೆಗಳು, ಜಲಾನಯನ ಯೋಜನೆಗಳು ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಹೆಚ್ಚಿನ ಅನುದಾನ ಒದಗಿಸಲಾಗಿದೆ ಎಂದು ಅವರು ತಿಳಿಸಿದರು.
ಸಂವಿಧಾನದ 371 (ಜೆ) ತಿದ್ದುಪಡಿ ಮೂಲಕ ಹೈದ್ರಾಬಾದ್ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ದಿಟ್ಟ ಹೆಜ್ಜೆ ಇರಿಸಿದ್ದು, ಇದರಿಂದ ಆ ಜಿಲ್ಲೆಗಳಲ್ಲಿ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಅಭಿವೃದ್ಧಿ ಸಾಧ್ಯವಾಗಿದೆ. ಹೈದ್ರಾಬಾದ್ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿ ಸ್ಥಾಪನೆ ಮಾಡಿ ಅನುದಾನದ ಪ್ರಮಾಣವನ್ನು ಹೆಚ್ಚಿಸಲಾಗಿದೆ. 2014ರಿಂದ ಮಂಡಳಿಗೆ ಪ್ರತಿ ವರ್ಷ ಒಂದು ಸಾವಿರ ರೂ. ಅನುದಾನ ಒದಗಿಸಲಾಗುತ್ತಿದ್ದು, ಇದಕ್ಕೂ ಮೊದಲು ವರ್ಷಕ್ಕೆ 50ರಿಂದ 60ಕೋಟಿ ರೂ. ಅನುದಾನ ಒದಗಿಸಲಾಗುತ್ತಿತ್ತು. ಮಂಡಳಿಗೆ ಈಗಾಗಲೇ 3750ಕೋಟಿ ರೂ. ಬಿಡುಗಡೆ ಮಾಡಿದ್ದು, 1700ಕೋಟಿ ರೂ ಗಿಂತ ಹೆಚ್ಚು ವೆಚ್ಚ ಮಾಡಲಾಗಿದೆ. ಅಗತ್ಯವಿದ್ದರೆ ಅನುದಾನದ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಅವರು ತಿಳಿಸಿದರು.
ವೃತ್ತಿಶಿಕ್ಷಣ ಸೀಟು ಲಭ್ಯತೆ ಹೆಚ್ಚಳ: ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ವೈದ್ಯಕೀಯ, ಇಂಜಿನಿಯರಿಂಗ್, ದಂತ ವೈದ್ಯಕೀಯ ಸೇರಿದಂತೆ ವೃತ್ತಿಪರ ಕೋರ್ಸ್‍ಗಳಿಗೆ ಸೀಟು ಲಭ್ಯತೆ ಹೆಚ್ಚಾಗಿದೆ. 2010ರಿಂದ 2013ರ ಅವಧಿಯಲ್ಲಿ ಈ ಭಾಗದಲ್ಲಿ 1265 ವೈದ್ಯಕೀಯ ಸೀಟುಗಳು ಲಭಿಸಿದ್ದರೆ, ಕಳೆದ ಮೂರು ವರ್ಷಗಳ ಅವಧಿಯಲ್ಲಿ 3176 ಸೀಟುಗಳು ಲಭಿಸಿವೆ. ಇದೇ ರೀತಿ ವೈದ್ಯಕೀಯ ಸ್ನಾತಕೋತ್ತರ ಸೀಟುಗಳಲ್ಲೂ 688 ಹೆಚ್ಚಳವಾಗಿದೆ. ಸರ್ಕಾರಿ ಸೇವೆಗಳಲ್ಲೂ ಹೈದ್ರಾಬಾದ್ ಕರ್ನಾಟಕದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶಿಸಲು ಇದರಿಂದ ಸಾಧ್ಯವಾಗಿದೆ. ಈ ಭಾಗದಲ್ಲಿ ಖಾಲಿಯಿದ್ದ 55ಸಾವಿರ ಹುದ್ದೆಗಳ ಪೈಕಿ 19ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಾಗಿದ್ದು, 28ಸಾವಿರ ಹುದ್ದೆಗಳನ್ನು ಭರ್ತಿಗೊಳಿಸುವ ಪ್ರಕ್ರಿಯೆ ವಿವಿಧ ಹಂತದಲ್ಲಿದೆ ಎಂದರು.
ನಂಜುಂಡಪ್ಪ ವರದಿ- ಹೆಚ್ಚಿನ ಅನುದಾನ ಒದಗಿಸಲು ಸಿದ್ಧ: ನಂಜುಂಡಪ್ಪ ವರದಿಯನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲು ವಿಶೇಷ ಅಭಿವೃದ್ಧಿ ಯೋಜನೆಯನ್ನು 2015-16ನೇ ಸಾಲಿನಿಂದ 5ವರ್ಷಗಳ ಅವಧಿಗೆ ವಿಸ್ತರಿಸಿ ಕಳೆದ 3ವರ್ಷಗಳಲ್ಲಿ 8300ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ. ನಂಜುಂಡಪ್ಪ ವರದಿ ಶಿಫಾರಸುಗಳ ಅನುಷ್ಟಾನದ ಕುರಿತು ಪರಿಶೀಲನೆ ನಡೆಸಿ ವರದಿ ನೀಡಲು ಕರ್ನಾಟಕ ಮೌಲ್ಯ ಮಾಪನಾ ಪ್ರಾಧಿಕಾರಕ್ಕೆ ನೀಡಲಾಗಿದ್ದು, ವರದಿಯನ್ನು ಆಧರಿಸಿ ಹೆಚ್ಚಿನ ಅನುದಾನ ಅಗತ್ಯವಿದ್ದರೆ ಬಿಡುಗಡೆ ಮಾಡಲು ಸರ್ಕಾರ ಸಿದ್ಧವಿದೆ ಎಂದು ಅವರು ತಿಳಿಸಿದರು.
ಗ್ರಾಮೀಣಾಭಿವೃದ್ಧಿಗೆ ಒತ್ತು: ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ, ಗ್ರಾಮೀಣ ಕುಡಿಯುವ ನೀರಿನ ಯೋಜನೆ, `ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆಗಳಲ್ಲಿ ಉತ್ತರಕರ್ನಾಟಕ ಭಾಗಕ್ಕೆ ಹೆಚ್ಚಿನ ಅನುದಾನ ಒದಗಿಸಲಾಗಿದೆ ಎಂದು ಮುಖ್ಯಮಂತ್ರಿ ಅವರು ಅಂಕಿಅಂಶಗಳ ಸಹಿತ ವಿವರಿಸಿದರು.
ಸರ್ಕಾರ ಇದುವರೆಗೆ 234 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು 2271ಕೋಟಿ ರೂ. ವೆಚ್ಚದಲ್ಲಿ ಅನುಷ್ಟಾನಗೊಳಿಸಿದೆ. ಅದರಲ್ಲಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ 163 ಯೋಜನೆಗಳನ್ನು 1466 ಕೋಟಿ ರೂ. ವೆಚ್ಚದಲ್ಲಿ ಅನುಷ್ಟಾನಗೊಳಿಸಲಾಗಿದೆ. ರಾಜ್ಯದಲ್ಲಿ 10150 ಕಿರು ನೀರು ಸರಬರಾಜು ಯೋಜನೆಗಳು ಅನುಷ್ಟಾನಗೊಂಡಿದ್ದು, ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ 6573 ಯೋಜನೆಗಳನ್ನು ಅನುಷ್ಟಾನಗೊಳಿಸಲಾಗಿದೆ. ಗ್ರಾಮೀಣ ಕುಡಿಯುವ ನೀರಿನ ಯೋಜನೆಗಳಿಗೆ ಒಟ್ಟು 9291 ಕೋಟಿ ರೂ. ವೆಚ್ಚ ಮಾಡಲಾಗಿದ್ದು, ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ 4718 ಕೋಟಿ ರೂ. ವೆಚ್ಚ ಮಾಡಲಾಗಿದೆ. `ನಮ್ಮ ಗ್ರಾಮ, ನಮ್ಮ ರಸ್ತೆ’ ಯೋಜನೆಯಡಿ ಈವರೆಗೆ 4501 ಕೋಟಿ ರೂ ಗಳಲ್ಲಿ 9545 ಕಿ.ಮಿ ರಸ್ತೆ ಅಭಿವೃದ್ಧಿಪಡಿಸಿದ್ದು, ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ 2101 ಕೋಟಿ ರೂ. ವೆಚ್ಚದಲ್ಲಿ 4576 ಕಿ.ಮೀ ರಸ್ತೆ ಅಭಿವೃದ್ಧಿಪಡಿಸಲಾಗಿದೆ ಎಂದರು.
ಮಹಾದಾಯಿ ಯೋಜನೆ
ಪ್ರಧಾನಿ ಮಧ್ಯಸ್ಥಿಕೆ ವಹಿಸಿದರೆ ಮಾತ್ರ ಪರಿಹಾರ ಸಾಧ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ
ಸುವರ್ಣ ವಿಧಾನಸೌಧ ಬೆಳಗಾವಿ(ಕರ್ನಾಟಕ ವಾರ್ತೆ) ನ.23:  ಪ್ರಧಾನಮಂತ್ರಿ ಅವರು ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಮಧ್ಯಸ್ಥಿಕೆ ವಹಿಸಿದರೆ ಮಾತ್ರ ಮಹಾದಾಯಿ ಯೋಜನೆ ವಿವಾದ ಇತ್ಯರ್ಥ ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿಂದು ತಿಳಿಸಿದರು.
ಗುರುವಾರ ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತಾಗಿ ನಡೆದ ಚರ್ಚೆಗೆ ಉತ್ತರಿಸಿ ಮಾತನಾಡಿದ ಅವರು, ಮಹಾದಾಯಿ ವಿವಾದ ಇತ್ಯರ್ಥಪಡಿಸಲು ರಾಜ್ಯ ಸರ್ಕಾರ ಎಲ್ಲಾ ಪ್ರಾಮಾಣಿಕ ಪ್ರಯತ್ನಗಳನ್ನು ನಡೆಸಿದೆ. ಗೋವಾ ಮುಖ್ಯಮಂತ್ರಿ ಅವರು ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದರೂ ಹೋಗಲು ನಾವು ಸಿದ್ಧರಿದ್ದೇವೆ. ಸರ್ವಪಕ್ಷಗಳ ಸಭೆ ಕರೆದು ಪ್ರಧಾನಿ ಬಳಿಗೆ ನಿಯೋಗ ಕರೆದುಕೊಂಡು ಹೋಗಿದ್ದೇವೆ. ಆದರೆ ಇದುವರೆಗೆ ಸಮಸ್ಯೆಗೆ ಪರಿಹಾರ ದೊರೆತಿಲ್ಲ.
ಟ್ರಿಬ್ಯುನಲ್ ಹೊರಗೆ ವಿವಾದವನ್ನು ಇತ್ಯರ್ಥಪಡಿಸಬೇಕೆಂಬುದು ರಾಜ್ಯದ ಸ್ಪಷ್ಟ ನಿಲುವು. ಒಕ್ಕೂಟ ವ್ಯವಸ್ಥೆಯಲ್ಲಿ ಪರಸ್ಪರ ಮಾತುಕತೆ ಮೂಲಕ ವಿವಾದ ಇತ್ಯರ್ಥಪಡಿಸಿದರೆ ಉತ್ತಮ. ಆದರೆ ಗೋವಾ ಮುಖ್ಯಮಂತ್ರಿ ಅವರು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ. ಪ್ರಧಾನಿಯವರು ಮಧ್ಯಪ್ರವೇಶಿಸಿದರೆ ಮಾತ್ರ ವಿವಾದ ಬಗೆಹರಿಸಲು ಸಾಧ್ಯ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *