ಬೆಳಗಾವಿ
ಶಾಲೆಗಳ ದುರಸ್ತಿಗೆ ಸಂಬಂಧಿಸಿದಂತೆ ಒತ್ತಡ ಹಾಕಿದ ಹಿನ್ನೆಲೆಯಲ್ಲಿ ಸಿಎಂ ವಿಶೇಷ ಅನುದಾನ ನೀಡಿದ್ದಾರೆ. ಗಡಿಭಾಗದ ಕನ್ನಡ ಶಾಲೆಗಳ ಅಭಿವೃದ್ಧಿಗೆ ಪ್ರಾಧಿಕಾರ ಬದ್ದವಾಗಿದೆ ಎಂದು ಕನ್ನಡ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಹೇಳಿದರು.
ಬುಧವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಶಾಲೆಗಳು ಬಿಳುವ ಪರಿಸ್ಥಿತಿಯಲ್ಲಿ ಇರುವುದು ಎಲ್ಲವೂ ನನ್ನ ಗಮನಕ್ಕೆ ಇದೆ. ಎಲ್ಲ ಶಾಲೆಗಳ ಪರಿಶೀಲನೆ ನಡೆಸಲಾಗಿದೆ. ಹತ್ತು ಕೋಟಿ ಅನುದಾನದಲ್ಲಿ ಆರು ಕೋಟಿ ಅನುದಾನ ಕಟ್ ಮಾಡುವುದು ಬೇಡ ಎಂದು ಸಿಎಂಗೆ ಮನವರಿಕೆ ಮಾಡಿಕೊಡಲಾಗಿದೆ ಎಂದರು.
ನೇರವಾಗಿ ಅನುದಾನ ಖರ್ಚು ಮಾಡಲು ಪ್ರಾಧಿಕಾರಕ್ಕೆ ಅನುಮತಿಯಿಲ್ಲ. ಅದು ಗಡಿ ಪ್ರಾಧಿಕಾರಕ್ಕೆ ಅಧಿಕಾರ ಇರುತ್ತದೆ.
ನಾನು ಕಣ್ಣುಮುಚ್ಚಿ ಕುಳಿತುಕೊಂಡಿಲ್ಲ. ನಾನು ಅಧ್ಯಕ್ಷನಾದ ಮೇಲೆ ಬೆಳಗಾವಿಗೆ ಬರುವುದು ವಿಳಂಭವಾಗಿದ್ದು ಸತ್ಯ. ಆದರೆ ಕೆಲಸವನ್ನು ಮಾಡಿದ್ದೇನೆ ಎಂದರು.
ಬೆಳಗಾವಿ ರಾಜ್ಯೋತ್ಸವಕ್ಕೆ ಸರಕಾರದಿಂದ ಶಾಶ್ವತವಾಗಿ ಹೆಚ್ಚಿನ ಅನುದಾನ ಕೊಡುವ ಹಾಗೆ ಬೆಳಗಾವಿ ಅಧಿವೇಶನದಲ್ಲಿ ಎಲ್ಲ ಕನ್ನಡ ಮುಖಂಡರ ಜತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು. ಈ ಕುರಿತು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಸರ್ಕಾರದ ಗಮನ ಹರಿಸುವದಾಗಿ ಪ್ರಾಧಿಕಾರದ ಅಧ್ಯಕ್ಷರು ಭರವಸೆ ನೀಡಿದರು
18 ಜಿಲ್ಲೆಗಳ ಜಿಲ್ಲಾಡಳಿತದಲ್ಲಿ ಕನ್ನಡ ಅನುಷ್ಠಾನ ಯಾವ ರೀತಿ ನಡೆದಿದೆ ಎಂದು ಪ್ರಗತಿಪರಿಶೀಲನೆ ನಡೆಸಿ ಬಂದಿದ್ದೇನೆ.
ತಂತ್ರಜ್ಞಾನದಲ್ಲಿ ಆದ ಲೋಪಗಳನ್ನು ಸರಿಪಡಿಸಲು ಕೆ.ನರಸಿಂಹಮೂರ್ತಿ ಅವರನ್ನು ಕರೆದುಕೊಂಡು ಪರಿಶೀಲನೆ ನಡೆಸಲಾಗಿದೆ ಎಂದರು.
ಕನ್ನಡ ಜಾಗೃತಿ ಸಮಿತಿ ರಚಿಸಲು ಪ್ರಾಧಿಕಾರ ಚಿಂತನೆ ನಡೆಸಲಾಗುತ್ತಿದೆ. ಜಾಗೃತಿ ಸಮಿತಿ 15 ಜಿಲ್ಲೆಗೆ ಸೀಮಿತವಾಗಿತ್ತು. ಸದ್ಯ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು ಸಮಿತಿ ಸದಸ್ಯರೊಡನೆ ಸಭೆ ನಡೆಸಿ ಲೋಪದೋಷದ ಕುರಿತ ವರದಿ ಸಲ್ಲಿಸುವಂತೆ ಸೂಚನೆ ನೀಡಲಾಗಿತ್ತು.
ಕನ್ನಡ ಪ್ರಾಧಿಕಾರದ ರಾಜ್ಯಮಟ್ಟದ ಸದಸ್ಯರನ್ನು ಕೆಡಿಪಿ ಸಭೆಗೆ ಆಹ್ವಾನಿಸಿ ಅಲ್ಲಿ ನಡೆಯುವ ಚರ್ಚೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ನೀಡಬೇಕೆಂದು ನಿರ್ಣಯ ಮಾಡಲಾಗಿದೆ.
ಬೆಳಗಾವಿ ಜಿಲ್ಲಾಧಿಕಾರಿಗೆ ಅಭಿನಂದನೆಗಳು. 17 ಜಿಲ್ಲೆಗಳಲ್ಲಿ ಕನ್ನಡ ವೆಬ್ ಸೈಟ್ ನಲ್ಲಿ ಕನ್ನಡದ ಮಾಹಿತಿ ಹಾಕಿದ್ದಾರೆ. ಆಯ್ಕೆ ಭಾಷೆಯನ್ನಾಗಿ ಇಂಗ್ಲಿಷ್ ಭಾಷೆ ಹಾಕಿದ್ದಾರೆ ಎಂದರು.
ಆದರೆ ಮೂರು ಇಲಾಖೆಯಲ್ಲಿ ಕನ್ನಡ ಭಾಷೆ ಬಳಸಿಲ್ಲ. ಪೊಲೀಸ್ ಇಲಾಖೆ, ಜಿಪಂ ಹಾಗೂ ಮಹಾನಗರ ಪಾಲಿಕೆಯಲ್ಲಿ ಮುಖಪುಟದಲ್ಲಿ ಕನ್ನಡ ಭಾಷೆ ಆಯ್ಕೆ ಮಾಡಿಕೊಳ್ಳಲು ಏಳು ದಿನದಲ್ಲಿ ಸರಿಪಡಿಸಿಕೊಳ್ಳಲು ಸೂಚನೆ ನೀಡಿದ್ದೇನೆ.ಇಲ್ಲದಿದ್ದಲ್ಲಿ ಸರಕಾರಕ್ಕೆ ಈ ಮೂರು ಇಲಾಖೆಯ ಮೇಲೆ ಕ್ರಮ ಕೈಗೊಳ್ಳಲು ಸರಕಾರಕ್ಕೆ ಪತ್ರ ಬರೆಯಲಾಗುವುದು ಎಂದರು.
ಬೆಳಗಾವಿಯಲ್ಲಿ ನಾಮಫಲಕದಲ್ಲಿ ವಡೋಫೋನ ಕಂಪನಿ ರಾಜ್ಯಾದ್ಯಂತ ಇಂಗ್ಲಿಷ್ ನಲ್ಲಿ ಬಳಕೆ ಮಾಡಿದ್ದ ಹಿನ್ನೆಲೆಯಲ್ಲಿ ಹತ್ತು ಸಾವಿರ ರು. ದಂಡ ವಿಧಿಸಲಾಗಿತ್ತು. ಆಗ ಅವರು ಕೋಟ್ ೯ಗೆ ಹೋಗಿದ್ದರು. ನಂತರ ಅದರ ಜವಾಬ್ದಾರಿಯನ್ನು ಕನ್ನಡ ಮತ್ತು ಸಂಸ್ಕೃತ ಇಲಾಖೆಗೆ ನೀಡಲಾಗಿದೆ ಎಂದರು.
ಒಂದರಿಂದ ಹತ್ತನೆ ತರಗತಿ ವರೆಗೆ ಸರಕಾರಿ/ ಖಾಸಗಿ ಶಾಲೆಯಲ್ಲಿ ಕನ್ನಡವನ್ನು ಪ್ರಥಮ ಭಾಷೆಯಲ್ಲಿ ಅಳವಡಿಸಿಕೊಳ್ಳಲು ಸೂಚನೆ ನೀಡಿದರೂ ಯಾರು ಸರಿಯಾದ ರೀತಿಯಲ್ಲಿ ಪಾಲನೆ ಮಾಡುತ್ತಿರಲಿಲ್ಲ. ಪ್ರಾಧಿಕಾರದ ಸೂಚನೆ ಮೆರೆಗೆ ಅದನ್ನು ಪಾಲಿಸಲು ಒತ್ತಡ ಹಾಕಿದ್ದೇವೆ ಎಂದರು.
ಬೆನಕನಹಳ್ಳಿ ಕನ್ನಡ ಶಾಲೆಯ ಆಟದ ಮೈದಾನವನ್ನ ಬೇರೆ ಶಾಲೆಯವರು ಒತ್ತುವರಿ ಮಾಡಿಕೊಂಡರುವುದು ಪ್ರಾಧಿಕಾರದ ಗಮನಕ್ಕೆ ಬಂದಿದೆ. ಕೂಡಲೇ ಜಿಪಂ ಸಿಇಒಗೆ ಸೂಚನೆ ನೀಡಲಾಗಿದೆ ಅದನ್ನು ಪರಿಶೀಲನೆ ನಡೆಸಿ ಕ್ರಮಕೈಗೊಳ್ಳಬೇಕೆಂದು ಎಚ್ಚರಿಕೆ ನೀಡಿದ್ದೇನೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಸದಸ್ಯರಾದ ಡಾ.ಸರಜೂ ಕಾಟ್ಕರ್, ರತ್ನಾಕರ್ ಶೆಟ್ಟಿ, ಅನಂತ ಬ್ಯಾಕೂಡ ಸೇರಿದಂತೆ ಮೊದಲಾದವರು ಹಾಜರಿದ್ದರು.