ಬೆಳಗಾವಿ : ಕಳಸಾ-ಬಂಡೂರಿ ಹಾಗೂ ಮಹದಾಯಿ ವಿವಾದ ಇತ್ಯಥ೯ ಪ್ರಕರಣದ ತೀಪು೯ ನೀಡಲು ಮುಂದಾಗಿರುವ ನ್ಯಾಯಾಧಿಕರಣ ಮಂಡಳಿ ನಿಣ೯ಯಕ್ಕೆ ದಿನಗಣನೆ ಆರಂಭಗೊಂಡ ಸಮಯದಲ್ಲಿ ಪದೇ ಪದೇ ಗೋವಾ ರಾಜ್ಯದ ನೀರಾವರಿ ಇಲಾಖೆಯ ಅಧಿಕಾರಿಗಳು ಕಳಸಾ ಯೋಜನೆಯ ಪ್ರದೇಶಕ್ಕೆ ಭೇಟಿ ನೀಡುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯ ಖಾನಾಪೂರ ತಾಲೂಕಿನ ಕಣಕುಂಬಿ ಪ್ರದೇಶದಲ್ಲಿ ರಾಜ್ಯ ಪೊಲೀಸರು ಹದ್ದಿನ ಕಣ್ಣು ಇಟ್ಟಿದ್ದಾರೆ.
ಬುಧವಾರ ಗೋವಾದ ಅಧಿಕಾರಿಗಳ ತಂಡ ಭೇಟಿ ನೀಡಿದಾಗ ಪೊಲೀಸ್ ಇಲಾಖೆ ಪತ್ರ ಬರೆಯಿಸಿಕೊಂಡು ಕಳಿಸಿರುವ ಘಟನೆಯ ನಂತರ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಕಮಲ ಪಂತ್ ಕಳಸಾ ಯೋಜನಾ ಪ್ರದೇಶಕ್ಕೆ ಭೇಟಿ ನೀಡಿ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿರುವ ಹಿನ್ನಲೆಯಲ್ಲಿ ಕಣಕುಂಬಿ ಪ್ರದೇಶಕ್ಕೆ ಭೇಟಿ ನೀಡುವ ಪ್ರತಿಯೊಬ್ಬರ ಮೇಲೆ ನಿಗಾ ವಹಿಸುವಂತೆ ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ.
ಗೋವಾದಿಂದ ಕಣಕುಂಬಿ ಮಾರ್ಗವಾಗಿ ರಾಜ್ಯಕ್ಕೆ ಪ್ರವೇಶಿಸುವ ವಾಹನಗಳನ್ನು ತಪಾಸಣೆ ನಡೆಸುವಂತೆ ಕಣಕುಂಬಿ ಹೊರವಲಯದಲ್ಲಿರುವ ಅಬಕಾರಿ ಇಲಾಖೆಯ ಚೇಕ್ ಪೋಸ್ಟ್ ಸಿಬ್ಬಂದಿಗಳಿಗೂ ಸೂಚನೆ ನೀಡಿದ್ದಾರೆ. ಗುರುವಾರ ರಾತ್ರಿಯಿಂದ ಚೆಕ್ ಪೋಸ್ಟ್ ನಲ್ಲಿ ವಾಹನ ತಪಾಸಣೆ ಕಡ್ಡಾಯಗೊಳಿಸಲಾಗಿದೆ ಎಂದು ಅಬಕಾರಿ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಒಂದು ವಾರದಲ್ಲಿ ಎರಡು, ಎರಡು ಸಲ ಕಳಸಾ ಯೋಜನೆಯ ಪ್ರದೇಶಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದ್ದ ಗೋವಾದ ನೀರಾವರಿ ಇಲಾಖೆಯ ಅಧಿಕಾರಿಗಳ ಮೇಲೆ ರಾಜ್ಯದ ಪೊಲೀಸರು ಹದ್ದಿನ ಕಣ್ಣಿಟ್ಟು ಕಾವಲು ಆರಂಭಿಸಿದ್ದಾರೆ.