ಬೆಳಗಾವಿ
ಲೋಕೋಪಯೋಗಿ, ಜಲಮಂಡಳಿ ಹಾಗೂ ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಗರದ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಇದರಿಂದ ಮಹಾನಗರ ಪಾಲಿಕೆಯ ಮರ್ಯಾದೆ ಹಾಳಾಗುತ್ತಿದೆ ಎಂದು ಮೇಯರ್ ಬಸಪ್ಪ ಚಿಕ್ಕಲದಿನ್ನಿ ತರಾಟೆಗೆ ತೆಗೆದುಕೊಂಡರು.
ಶನಿವಾರ ಮಹಾನಗರ ಪಾಲಿಕೆಯ ಪರಿಷತ್ ಸಭಾಂಗಣದಲ್ಲಿ ಆಡಳಿತಾತ್ಮಕ ಸಭೆಯಲ್ಲಿ ಮಾತನಾಡಿದರು. ನಗರದಲ್ಲಿ ಗುಣಮಟ್ಟದಲ್ಲಿ ರಸ್ತೆಗಳನ್ನು ನಿರ್ಮಾಣ ಮಾಡಿದರೂ ಹೆಸ್ಕಾಂ, ಜಲಮಂಡಳಿ ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನರು ಪಾಲಿಕೆಯ ಮರ್ಯಾದೆಯನ್ನು ತೆಗೆಯುತ್ತಿದ್ದಾರೆ. ಸುಸಜ್ಜಿತವಾದ ರಸ್ತೆಯನ್ನು ಅಗೆಯುವ ಮುನ್ನ ಪಾಲಿಕೆಯ ಅನುಮತಿ ಪಡೆದುಕೊಳ್ಳಬೇಕು. ಅದನ್ನು ಬಿಟ್ಟು ಹೆಸ್ಕಾಂ ಹಾಗೂ ಜಲಮಂಡಳಿಯವರು ರಸ್ತೆಯನ್ನು ಬೇಕಾಬಿಟ್ಟಿಯಾಗಿ ತಗ್ಗು ಕೆಡವಿ ಹಾಳು ಮಾಡಿದ್ದಾರೆ ಎಂದು ಆರೋಪಿಸಿದರು.
ಪಾಲಿಕೆಯ ಎಲ್ಲ ಸದಸ್ಯರು ಸೇರಿಕೊಂಡು ಹಾಳಾದ ರಸ್ತೆಯ ದುರಸ್ತಿ ಪಡಿಸಲು ಜಿಲ್ಲಾಧಿಕಾರಿಗೆ ವಿಶೇಷ ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸುವಂತೆ ವಿನಂತಿಸಲಾಗುವುದು. ಇನ್ನು ಮುಂದೆ ರಸ್ತೆ ಅಗೆಯುವ ಸಂದರ್ಭದಲ್ಲಿ ಜಲಮಂಡಳಿ, ಹೆಸ್ಕಾಂ ಹಾಗೂ ಬಿಎಸ್‍ಎನ್‍ಎಲ್ ಅಧಿಕಾರಿಗಳು ಪಾಲಿಕೆಯ ಅನುಮತಿ ಪಡೆಯಬೇಕೆಂದು ಸೂಚಿಸಿದರು.
ಪಾಲಿಕೆಯ ಆಯುಕ್ತ ಶಶಿಧರ ಕುರೇರ ಮಾತನಾಡಿ, ರಸ್ತೆಗಳಲ್ಲಿ ಬಿದ್ದಿರುವ ತಗ್ಗಿನಿಂದ ಸಾರ್ವಜನಿಕರು ಪಾಲಿಕೆಯನ್ನು ದೂರುತ್ತಾರೆ. ಆದರೆ ದಂಡುಮಂಡಳಿ, ಲೋಕೋಪಯೋಗಿ ಬರುವ ರಸ್ತೆಗಳು ಪಾಲಿಕೆಗೆ ಬರುತ್ತವೆ ಎಂದು ನಿತ್ಯ ನೂರಾರು ದೂರುಗಳು ಬರುತ್ತಿವೆ ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸಿ ಗುತ್ತಿಗೆದಾರರಿಂದ ರಸ್ತೆ ಸುಧಾರಣೆ ಮಾಡಿಸುವ ಕಾರ್ಯವನ್ನು ಮಾಡಿಸಬೇಕೆಂದು ಸೂಚಿಸಿದರು.
ಪಾಲಿಕೆಯ ಉತ್ತರ ಕ್ಷೇತ್ರದ ಅಭಿಯಂತ ಆರ್.ಎಸ್.ನಾಯಕ ಮಾತನಾಡಿ, ಕಾಲೇಜು ರಸ್ತೆಯಲ್ಲಿ ನಾಲ್ಕೈದು ತಿಂಗಳುಗಳ ಹಿಂದೆ ಮಾಡಿದ ರಸ್ತೆಯಲ್ಲಿ ಭೂಗತ ಕೇಬಲ್ ಅಳವಡಿಕೆಗಾಗಿ ಹೆಸ್ಕಾಂ ಹಾಗೂ ಒಳಚರಂಡಿ ಕಾಮಗಾರಿಗಾಗಿ ಜಲಮಂಡಳಿಯವರು ಅಗೆದು ರಸ್ತೆಗಳನ್ನು ಹಾಳು ಮಾಡಿದ್ದಾರೆ. ಈಗಾಗಲೇ ಈ ಕುರಿತು ವಿಶೇಷ ತಜ್ಞರಿಂದ ಪರಿಶೀಲನೆ ನಡೆಸಲಾಗಿದೆ ಎಂದರು.
ಎರಡು ವರ್ಷದಲ್ಲಿ ಮಾಡಿದ ರಸ್ತೆಗಳು ಹಾಳಾಗಿದ್ದರೆ ಅದನ್ನು ಗುತ್ತಿಗೆದಾರರಿಂದಲೇ ಮಾಡಿಸಲಾಗುವುದು. ಮಳೆಯಿಂದ ನಗರದ ರಸ್ತೆಗಳಲ್ಲಿ ನೀರು ಬಾರದಂತೆ ಮುಂಜಾಗೃತ ಕ್ರಮವಾಗಿ ನಾಲೆಗಳನ್ನು ಶುಚಿಗೊಳಿಸಲಾಗಿತ್ತು. ಅದರಂತೆ ಮಳೆಯ ನೀರು ನಾಲೆಗಳಲ್ಲಿ ಹರಿಯುತ್ತಿರುವುದುರಿಂದ ಯಾವುದೇ ಹಾನಿಯುಂಟಾಗಿಲ್ಲ ಎಂದು ಸಭೆಗೆ ತಿಳಿಸಿದರು.
ದಕ್ಷಿಣ ಕ್ಷೇತ್ರದ ಅಭಿಯಂತೆ ಲಕ್ಷ್ಮೀ ನಿಪ್ಪಾಣಿಕರ ಮಾತನಾಡಿ, ಮಳೆಗಾಲದ ಸಂದರ್ಭದಲ್ಲಿ ಮಾಧವಾ ರಸ್ತೆಯ ಕುರಿತಾಗಿ ದೂರುಗಳು ಸಾಕಷ್ಟು ಬಂದಿವೆ. ಮಳೆಗಾಲದ ಮುಂಚಿತವಾಗಿ ಜಲಮಂಡಳಿಯವರು ಕಾಮಗಾರಿಗಳನ್ನು ಪ್ರಾರಂಭಿಸಿದ್ದರು. ಇದರಿಂದ ಈ ಪ್ರದೇಶದ ರಸ್ತೆಗಳು ಹಾಳಾಗಿವೆ. ಗುತ್ತಿಗೆದಾರರಿಗೆ ಹೇಳಿ ಕೆಟ್ಟ ರಸ್ತೆಗಳನ್ನು ಸರಿಪಡಿಸಲಾಗುವುದು ಎಂದರು.