ಬೆಳಗಾವಿ -ಕೃಷಿ ಆಧುನಿಕರಣ ಮತ್ತು ಹನಿ ನೀರಾವರಿಗೆ ಹೆಚ್ಚು ಆದ್ಯತೆ ನೀಡುರುವ ನಮ್ಮ ಸರ್ಕಾರ ಒಂದು ಲಕ್ಷ ರೈತ ಕುಟುಂಬಗಳಿಗೆ ಕೃಷಿ ಭಾಗ್ಯ ಯೋಜನೆಯನ್ನು ತಲುಪಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ಅವರು ಇಂದು ಬೆಳಿಗ್ಗೆ ಬೆಳಗಾವಿ ತಾಲೂಕಿನ ಮಾಸ್ತಮರಡಿ ಗ್ರಾಮದಲ್ಲಿ ಕೃಷಿ ಯಂತ್ರಧಾರೆ ಕೇಂದ್ರಗಳ ಮೂಲಕ ರೈತರಿಗೆ ಅತ್ಯಾಧುನಿಕ ಕಬ್ಬು ಕಟಾವು ಯಂತ್ರಗಳ ಸೇವೆ ಒದಗಿಸುವ ಯೋಜನೆಗೆ ಚಾಲನೆ ನೀಡಿ, ರೈತರನ್ನು ಉದ್ದೇಶಿಸಿ ಮಾತನಾಡಿದರು.
ಕೃಷಿಯಲ್ಲಿ ಆಧುನಿಕ ಪದ್ದತಿಯನ್ನು ಅಳವಡಿಸಿಕೊಳ್ಳಬೇಕು. ಕೃಷಿ ಲಾಭದಾಯಕವಾಗಬೇಕಾದರೆ ಉತ್ಪಾದಕತೆ ಹೆಚ್ಚಾಗಬೇಕು. ಅದರಿಂದ ಆದಾಯ ಹೆಚ್ಚುತ್ತದೆ. ಕೃಷಿಯಲ್ಲಿ ಯಂತ್ರಗಳ ಬಳಕೆ, ಹೊಸ ತಳಿಗಳ ಉಪಯೋಗ ಮತ್ತು ಸಾವಯವ ಪದ್ದತಿ ಬಳಕೆಯಿಂದ ಹೆಚ್ಚು ಲಾಭಗಳಿಸಲು ಸಾಧ್ಯವಾಗುತ್ತದೆ. ತಾಂತ್ರಿಕ ಬಳಕೆಯನ್ನು ಕೃಷಿಯಲ್ಲಿ ಪರಿಚಯಿಸಲು ಮತ್ತು ತಾಂತ್ರಿಕತೆ ಅಳವಡಿಸಿಕೊಳ್ಳಲು ಕೃಷಿ ಇಲಾಖೆ ಹೆಚ್ಚು ಪ್ರೋತ್ಸಾಹ ನೀಡುತ್ತಿದೆ ಅವರು ತಿಳಿಸಿದರು.
ಕೃಷಿ ಯಂತ್ರಧಾರೆ ಕಾರ್ಯಕ್ರಮವನ್ನು ಹೋಬಳಿ ಮಟ್ಟದಲ್ಲಿ ಕೇಂದ್ರಗಳನ್ನು ಆರಂಭಿಸುವ ಮೂಲಕ ಅನುಷ್ಠಾನಗೊಳಿಸುತ್ತಿದೆ. ಮತ್ತು ಹನಿ ನೀರಾವರಿ ಯೋಜನೆಗೆ ಶೇ. 90 ರಷ್ಟು ಸಬ್ಸಿಡಿ ಸಹಾಯಧನವನ್ನು ನೀಡಲಾಗುತ್ತಿದೆ. ಇವುಗಳ ಮೂಲಕ ಕೃಷಿಯನ್ನು ಉತ್ತಮಗೊಳಿಸಲು ಸರ್ಕಾರ ಕ್ರಮಕೈಗೊಳ್ಳುತ್ತಿದೆ. ಸರ್ಕಾರ ಅನೇಕ ರೈತ ಸ್ನೇಹಿ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿದ್ದು, ರೈತರು ಇದರ ಸದುಪಯೋಗ ಪಡೆಯಬೇಕೆಂದು ಮುಖ್ಯಮಂತ್ರಿಗಳು ರೈತರಿಗೆ ಕರೆ ನೀಡಿದರು.
ಸಮಾರಂಭದಲ್ಲಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಕೃಷಿ ಸಚಿವ ಶ್ರೀ ಕೃಷ್ಣಭೈರೆಗೌಡ, ಕಬ್ಬು ಕಟಾವು ಇಂದು ರೈತರಿಗೆ ಸಮಸ್ಯೆಯಾಗಿ ಕಾಡುತ್ತಿದೆ. ಇದಕ್ಕೆ ಮುಖ್ಯವಾಗಿ ಕಾರ್ಮಿಕರ ಕೊರತೆ ಕಾಡುತ್ತಿದೆ. ಇದರ ಪರಿಹಾರಕ್ಕಾಗಿ ಸರ್ಕಾರ ಕೃಷಿ ಯಂತ್ರಧಾರೆ ಯೋಜನೆಯಡಿ ಹೋಬಳಿ ಮಟ್ಟದಲ್ಲಿ ಕೇಂದ್ರಗಳನ್ನು ಸ್ಥಾಪಿಸಿ, ಆ ಮೂಲಕ ಎಲ್ಲ ಯಂತ್ರಗಳನ್ನು ಬಾಡಿಗೆ ಆಧಾರದ ಮೇಲೆ ರೈತರಿಗೆ ನೀಡಲಾಗಿದೆ. ಈ ವರ್ಷ ಕಬ್ಬು ಕಟಾವು ಮಾಡುವ ಹದಿನೈದು ಯಂತ್ರಗಳನ್ನು ಹದಿನೈದು ಕೇಂದ್ರಗಳಿಗೆ ಪೂರೈಸಲಾಗುತ್ತಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಫಲಾನುಭವಿಗಳಿಗೆ ಯಂತ್ರಗಳ ಕೀಲಿಯನ್ನು ಮುಖ್ಯಮಂತ್ರಿಗಳು ಹಸ್ತಾಂತರಿಸಿದರು. ಮತ್ತು ಕೃಷಿ ಇಲಾಖೆಯಿಂದ ಕ್ಷೇತ್ರ ಮಟ್ಟದಲ್ಲಿ ಆಯೋಜಿಸಿದ್ದ ಕಬ್ಬು ಕಟಾವು ಯಂತ್ರದ ಕ್ಷೇತ್ರ ಪ್ರಾತ್ಯಕ್ಷಿಕೆ ಮತ್ತು ಕಬ್ಬಿನ ರವದಿ ಪುಡಿ ಮಾಡುವ ಯಂತ್ರದ ಕ್ಷೇತ್ರ ಪ್ರಾತ್ಯಕ್ಷೀಕೆಯನ್ನು ಮುಖ್ಯಮಂತ್ರಿಗಳು ವೀಕ್ಷಿಸಿದರು.
ಸಣ್ಣ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ರಮೇಶ ಜಾರಕಿಹೊಳಿ, ಸಮಾಜ ಕಲ್ಯಾಣ ಸಚಿವ ಶ್ರೀ ಎಚ್. ಆಜಂನೇಯ, ಸರ್ಕಾರದ ಮುಖ್ಯ ಸಚೇತಕ ಶ್ರೀ ಅಶೋಕ ಪಟ್ಟಣ, ಸಂಸದಿಯ ಕಾರ್ಯದರ್ಶಿ ಗಣೇಶ ಹುಕ್ಕೇರಿ, ಶಾಸಕರಾದ ಶ್ರೀ ಡಿ.ಬಿ ಇನಾಮದಾರ, ಶ್ರೀ ಸಂಜಯ ಪಾಟೀಲ, ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ಆಶಾ ಐಹೊಳೆ, ಕೃಷಿ ಇಲಾಖೆ ಕಾರ್ಯದರ್ಶಿ ಎಂ. ಮಹೇಶ್ವರಾವ್ ಸೇರಿದಂತೆ ಇತರರು ವೇದಿಕೆಯಲ್ಲಿದ್ದರು.
ಕೃಷಿ ಇಲಾಖೆ ಆಯುಕ್ತ ಶ್ರೀ ಪಾಂಡುರಂಗ ನಾಯಕ, ಅವರು ವಂದಿಸಿದರು, ಸಹಾಯಕ ಕೃಷಿ ನಿರ್ದೇಶಕಿ ಶ್ರೀಮತಿ. ಶೈಲಜಾ ಬೆಳಂಕಿಮಠ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.
Check Also
ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ
ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …