ಕೆಂಪವಾಡ ಬಸವೇಶ್ವರ ಏತ ನೀರಾವರಿಗೆ ಇಂದು ಶಂಕು ಸ್ಥಾಪನೆ.
ಬೆಳಗಾವಿ-
ಕೃಷ್ಣಾ ನದಿಯ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಗೆ ಸೇರಿದ್ದರೂ ಕೂಡ ಜಲಕ್ಷಾಮದಿಂದ ನರಳುತ್ತಿದ್ದ ಅಥಣಿ ತಾಲೂಕಿನ ಉತ್ತರ ಭಾಗಕ್ಕೆ ನೀರಾವರಿ ಸೌಲಭ್ಯ ವಿಸ್ತರಿಸುವ ನಿಟ್ಟಿನಲ್ಲಿ ಕೈಗೆತ್ತಿಕೊಂಡಿರುವ ಕೆಂಪವಾಡ ಬಸವೇಶ್ವರ ಏತ ನೀರಾವರಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ.
ಅಥಣಿ ನಗರದ ಭೋಜರಾಜ ಮೈದಾನದಲ್ಲಿ ಶಂಕು ಸ್ಥಾಪನೆ ಸಮಾರಂಭ ನಡೆಯಲಿದ್ದು ಅಥಣಿ ತಾಲೂಕಿನಿಂದ ಸುಮಾರು 1 ಲಕ್ಷ ಜನರು ಶಂಕುಸ್ಥಾಪನೆ ಸಮಾರಂಭಕ್ಕೆ ಸಾಕ್ಷಿಯಾಗುವ ನಿರೀಕ್ಷೆ ಇದೆ.
ಮುಂದಿನ ವರ್ಷ ವಿಧಾನಸಭೆಗೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಅಥಣಿ ನಗರದಲ್ಲಿ ವಿಧಾಸಭಾ ಟಿಕೇಟ್ ಆಕಾಂಕ್ಷಿಗಳು ಸೇರಿದಂತೆ ಹಿರಿ-ಮರಿ ಪುಢಾರಿಗಳ ಕಟೌಟ್ ಗಳು ಎಲ್ಲಿ ಬೇಕೆಂದರಲ್ಲಿ ರಾರಾಜಿಸುತ್ತಿವೆ. ಟಿಕೇಟ್ ಆಕಾಂಕ್ಷಿಗಳಂತೂ ಬೀದಿ-ಬೀದಿಗಳಲ್ಲಿ ಸರ್ಕಲ್ ಗಳಲ್ಲಿ ತಮ್ಮ ಕಟೌಟ್ ಗಳ ಹಾಕು ಮುಖ್ಯಮಂತ್ರಿಯನ್ನು ಸ್ವಾಗತಿಸುವುದಕ್ಕೆ ಸಿದ್ಧರಾಗಿದ್ದಾರೆ.
ಹಲವಾರು ದಶಕಗಳ ಬೇಡಿಕೆಯಾದ ಕೆಂಪವಾಡ ಬಸವೇಶ್ವರ ಏತ ನೀರಾವರಿಗೆ ಯೋಜನೆಗೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ನಿರಂತರ ಪ್ರಯತ್ನದ ಫಲವಾಗಿ ಇದೀಗ ಕೈಗೂಡುತ್ತಿದೆ.
ಬೆಳಗಾವಿ ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ ಸೇರಿದಂತೆ ಜಿಲ್ಲೆಯ ಹಿರಿಯ ಕಾಂಗ್ರೆಸ್ ಮುಖಂಡರು ಅಥಣಿ ನಗರದಲ್ಲಿ ಬೀಡು ಬಿಟ್ಟಿದ್ದು, ದಶಕಗಳ ಕನಸಿನ ಕೂಸು ಸಾಕಾರಗೊಳ್ಳುವುದಕ್ಕೆ ನಡೆಯುತ್ತಿರುವ ಬೃಹತ್ ಸಮಾರಂಭದಲ್ಲಿ ಸುಮಾರು ಪಾಲ್ಗೊಳ್ಳುವ ಜನರಿಗಾಗಿ ಊಟದ ವ್ಯವಸ್ಥೆ ಮಾಡಲಾಗಿದೆ.