Breaking News

ಫ್ರಾನ್ಸ್ ನಲ್ಲಿ ಮತ್ತೆ ಇಸಿಸ್ ಅಟ್ಟಹಾಸ; ಸ್ಫೋಟಕ ತುಂಬಿದ್ದ ಟ್ರಕ್ ಹರಿಸಿ 80 ಮಂದಿ ಹತ್ಯೆ

ಫ್ರಾನ್ಸ್ ರಾಷ್ಟ್ರೀಯ ದಿನಾಚರಣೆಯಂದೇ ನೀಸ್ ನಗರದಲ್ಲಿ ಉಗ್ರರ ಕುಕೃತ್ಯ, ಹಲವು ಅಮಾಯಕ ಮಕ್ಕಳ ಸಾವು

ಪ್ಯಾರಿಸ್: ಫ್ರಾನ್ಸ್ ನಲ್ಲಿ ಮತ್ತೆ ಭೀಕರ ಉಗ್ರ ದಾಳಿ ಸಂಭವಿಸಿದ್ದು, ರಾಷ್ಟ್ರೀಯ ದಿನಾಚರಣೆ ಸಂಭ್ರಮಾಚರಣೆ ವೇಳೆ ನೀಸ್ ನಗರದ ಬೀಚ್ ರೆಸಾರ್ಟ್ ನಲ್ಲಿ ಸಿಡಿಮದ್ದು ಪ್ರದರ್ಶನದ ವೇಳೆ  ಉಗ್ರಗಾಮಿ ಚಾಲಕನೋರ್ವ ಭಾರಿ ಗಾತ್ರ ಸ್ಫೋಟಕ ತುಂಬಿದ ಟ್ರಕ್ ಅನ್ನು ಜನರ ಮೇಲೆ ಹರಿಸಿದ್ದಾನೆ. ಪರಿಣಾಮ ಸ್ಥಳದಲ್ಲಿಯೇ 80 ಮಂದಿ ಧಾರುಣವಾಗಿ ಸಾವನ್ನಪ್ಪಿದ್ದಾರೆ ಎಂದು  ತಿಳಿದುಬಂದಿದೆ.ನಿನ್ನೆ ರಾತ್ರಿ ಸುಮಾರು 11 ಗಂಟೆ ವೇಳೆಯಲ್ಲಿ ನೀಸ್ ನಗರದ ಬೀಚ್ ರೆಸಾರ್ಟ್ ರಿವೀರಾ ನಲ್ಲಿ ಸಿಡಿಮದ್ದು ಪ್ರದರ್ಶನವೇರ್ಪಟ್ಟಿತ್ತು. ಈ ವೇಳೆ ಸಾವಿರಾರು ಮಂದಿ ಸಂಭ್ರಮಾಚರಣೆಗಾಗಿ ಅಲ್ಲಿ  ನೆರೆದಿದ್ದರು. ಇದೇ ಸಂದರ್ಭದಲ್ಲಿ ಉಗ್ರರು ತಮ್ಮ ಕುಕೃತ್ಯಕ್ಕೆ ಬಳಸಿಕೊಂಡಿದ್ದು, ಭಾರಿ ಪ್ರಮಾಣದ ಸ್ಫೋಟಕಗಳನ್ನು ತುಂಬಿದ್ದ ಟ್ರಕ್ ಅನ್ನು ಏಕಾಏಕಿ ಜನರಿದ್ದ ಪ್ರದೇಶಕ್ಕೆ ನುಗ್ಗಿಸಿದ್ದಾನೆ.  ಘಟನೆಯಲ್ಲಿ ಮಕ್ಕಳು ಮತ್ತು ಮಹಿಳೆಯರು ಸೇರಿದಂತೆ ಬರೊಬ್ಬರಿ 80 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೆ 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ  ದಾಖಲು ಮಾಡಲಾಗಿದೆ.ಪ್ರತ್ಯಕ್ಷ ದರ್ಶಿಗಳು ಹೇಳುವಂತೆ ಸ್ಫೋಟಕ ತುಂಬಿದ್ದ ಟ್ರಕ್ ಅನ್ನು ಉಗ್ರ ಸುಮಾರು 2 ಕಿ.ಮೀಟರ್ ಗೂ ಅಧಿಕ ದೂರ ಮನಬಂದಂತೆ ನುಗ್ಗಿಸಿ ದಾಳಿ ನಡೆಸಿದ್ದಾನೆ. ಟ್ರಕ್ನಲ್ಲಿ ಅಪಾರ ಪ್ರಮಾಣದ  ಶಸ್ತ್ರಾಸ್ತ್ರ ಮತ್ತು ಗ್ರೆನೇಡ್ಗಳನ್ನು ಇರಿಸಿಕೊಂಡಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪೊಲೀಸರು ಟ್ರಕ್ ಮೇಲೆ ದಾಳಿ ನಡೆಸುತ್ತಿದ್ದಂತೆಯೇ ತನ್ನ ಕೈನಲ್ಲಿದ್ದ ಬಂದೂಕಿನಿಂದ ಗುಂಡಿನ  ಮಳೆಗರೆದಿದ್ದಾನೆ ಎಂದು ತಿಳಿದುಬಂದಿದೆ. ಫ್ರಾನ್ಸ್ ನ ರಾಷ್ಟ್ರೀಯ ದಿನಾಚಣೆ ಬ್ಯಾಸ್ಟೀಲ್ ಡೇ ಆಚರಿಸುವ ಸಂದರ್ಭದಲ್ಲಿ ಉಗ್ರರು ದಾಳಿ ನಡೆಸಿದ್ದು, ಟ್ರಕ್ ಚಲಾಯಿಸುತ್ತಿದ್ದ ಉಗ್ರನನ್ನು  ಹೊಡೆದುರುಳಿಸುವಲ್ಲಿ ಫ್ರಾನ್ಸ್ ಸೇನೆ ಯಶಸ್ವಿಯಾಗಿದೆ.ದಾಳಿ ಹೊಣೆ ಹೊತ್ತ ಇಸಿಸ್ ಉಗ್ರಇನ್ನು ಈ ಭೀಕರ ದಾಳಿ ಹೊಣೆಯನ್ನು ಪ್ಯಾರಿಸ್ ದಾಳಿ ಮಾಡಿದ್ದ ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಸಂಘಟನೆ ಹೊತ್ತಿದ್ದು, ಹೋರಾಟದಲ್ಲಿ ಸತ್ತ ಯೋಧ ತನ್ನ ಪಡೆಯವನೇ ಎಂದು ತನ್ನ ವೆಬ್  ಸೈಟಿನಲ್ಲಿ ಹೇಳಿಕೊಂಡಿದೆ. ಅಲ್ಲದೆ ಇಂತಹ ಹಲವು ದಾಳಿಗಳನ್ನು ಸಂಘಟಿಸುವುದಾಗಿ ಎಚ್ಚರಿಕೆ ನೀಡಿದೆ. ಇದೀಗ ಈ ಘಟನೆಯಿಂದ ನೈಸ್ ನಗರ ಅಕ್ಷರಶಃ ತತ್ತರಿಸಿ ಹೋಗಿದ್ದು, ಸದಾಕಾಲ  ಜನರಿಂದ ತುಂಬಿ ತುಳುಕುತ್ತಿದ್ದ ಖ್ಯಾತ ಬೀಚ್ ರೆಸಾರ್ಟ್ ನಲ್ಲಿ ಸೂತಕಧ ಛಾಯೆ ಆವರಿಸಿದೆ. ಬೀಚ್ ನಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿರುವ ಹೆಣಗಳು ಒಂದೆಡೆಯಾದರೆ ಸ್ನೇಹಿತರು ಮತ್ತು  ಸಂಬಂಧಿಕರ ಸಾವಿನಿಂದಾಗಿ ಸಂಬಂಧಿಕ ಆಕ್ರಂಧನ ಮತ್ತೊಂದೆಡೆ ಕೇಳಿಸುತ್ತಿದೆ.ತುರ್ತು ಸಭೆ ಕರೆದ ಅಧ್ಯಕ್ಷ ಹೊಲಾಂಡೆನೀಸ್ ನಗರದಲ್ಲಿ ಉಗ್ರರು ದಾಳಿ ನಡೆಸಿದ ವಿಚಾರ ತಿಳಿಯುತ್ತಿದ್ದಂತೆಯೇ ಫ್ರಾನ್ಸ್ ಅಧ್ಯಕ್ಷ  ಹೊಲಾಂಡೆ ತುರ್ತು ಸಭೆ ಕರೆದಿದ್ದು, ಭದ್ರತಾ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಅಲ್ಲದೆ  ಘಟನಾ ಪ್ರದೇಶ ಸೇರಿದಂತೆ ದೇಶಾದ್ಯಂತ ತೀವ್ರ ಕಟ್ಟೆಚ್ಚರದಿಂದ ಇರುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಂತೆಯೇ ಘಟನಾ ಪ್ರದೇಶದಲ್ಲಿ ಫ್ರಾನ್ಸ್ ರಕ್ಷಣಾ ಪಡೆಗಳು ಕಾರ್ಯಾಚರಣೆ  ಮುಂದುವರೆಸಿದ್ದು, ಶೋಧ ನಡೆಸುತ್ತಿದ್ದಾರೆ.

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *