ಕೇಬಲ್ ಟಿವಿ ನಿರ್ವಹಣಾ ಸಮಿತಿ ಸಭೆ; ದೂರದರ್ಶನ ಚಾನೆಲ್ ಗಳ ಕಡ್ಡಾಯ ಪ್ರಸಾರಕ್ಕೆ ಸೂಚನೆ
———————————————————————–
ಯೂಟ್ಯೂಬ್ ಚಾನೆಲ್ ವಿರುದ್ಧ ಕ್ರಮ-ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಎಚ್ಚರಿಕೆ
ಬೆಳಗಾವಿ, ಜಿಲ್ಲೆಯ ಅನೇಕ ಕಡೆಗಳಲ್ಲಿ ಯೂಟ್ಯೂಬ್ ಚಾನೆಲ್ ಗಳ ಹಾವಳಿ ಹೆಚ್ಚಾಗಿದ್ದು, ಈ ರೀತಿಯಲ್ಲಿ ಅನಧಿಕೃತವಾಗಿ ಸುದ್ದಿ ಪ್ರಸಾರ ಮಾಡುವ ಮೂಲಕ ಸಮಾಜದ ಸ್ವಾಸ್ಥ್ಯ ಹದಗೆಡಿಸುತ್ತಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ (ಡಿ.೧೯) ನಡೆದ ಜಿಲ್ಲಾ ಮಟ್ಟದ ಕೇಬಲ್ ಟಿವಿ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೆಲವರು ಉಪಗ್ರಹ ಚಾನೆಲ್ ಗಳ ಮಾದರಿಯಲ್ಲಿ ಲೋಗೋ ಹಿಡಿದುಕೊಂಡು ಸರ್ಕಾರಿ ಕಚೇರಿಗಳಿಗೆ ಮತ್ತು ಸಭೆ-ಸಮಾರಂಭಗಳಿಗೆ ಹಾಜರಾಗುತ್ತಿರುವುದು ಕಂಡುಬಂದಿದೆ. ಇಂತಹ ಅನಧಿಕೃತ ಚಾನೆಲ್ ಗಳ ಮೇಲೆ ನಿಗಾ ಇರಿಸಲಾಗಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ದೂರದರ್ಶನ ಕಡ್ಡಾಯ ಚಾನೆಲ್ ಪ್ರಸಾರಕ್ಕೆ ಸೂಚನೆ:
ಕೇಬಲ್ ಟಿವಿ ನೆಟ್ ವರ್ಕ್(ರೆಗ್ಯುಲೇಷನ್) ಆಕ್ಟ್- ೧೯೯೫ ರ ಪ್ರಕಾರ ಸ್ಥಳೀಯ ಕೇಬಲ್ ಆಪರೇಟರ್ ಮತ್ತು ಮಲ್ಟಿ ಸಿಸ್ಟಂ ಆಪರೇಟರ್ ಗಳು ಡಿಡಿ ಚಂದನ, ಲೋಕಸಭಾ ಮತ್ತು ರಾಜ್ಯಸಭಾ ಚಾನೆಲ್ ಸೇರಿದಂತೆ ದೂರದರ್ಶನದ ಒಟ್ಟು ೨೭ ಚಾನೆಲ್ ಗಳನ್ನು ಕಡ್ಡಾಯವಾಗಿ ಪ್ರಸಾರ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಸೂಚನೆ ನೀಡಿದರು.
ಕಡ್ಡಾಯ ಚಾನೆಲ್ ಗಳನ್ನು ಪ್ರಸಾರ ಮಾಡದವರಿಗೆ ತಮ್ಮ ವಿರುದ್ದ ಯಾಕೆ ಕ್ರಮ ಕೈಗೊಳ್ಳಬಾರದು ಎಂದು ಕಾರಣ ಕೇಳಿ ಕೂಡಲೇ ತಿಳಿವಳಿಕೆ ಪತ್ರ ನೀಡಬೇಕು.
ಭವಿಷ್ಯದಲ್ಲಿ ಮತ್ತೇ ನಿಯಮ ಉಲ್ಲಂಘಿಸಿರುವುದು ಕಂಡುಬಂದರೆ ಅಂತಹ ಆಪರೇಟರ್ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಉಪ ವಿಭಾಗಾಧಿಕಾರಿಗಳಿಗೆ ತಿಳಿಸಿದರು.
ದೂರು ನಿರ್ವಹಣಾ ಕೇಂದ್ರ ಸ್ಥಾಪನೆಗೆ ಸೂಚನೆ:
ಕಳಪೆ ಗುಣಮಟ್ಟದ ಪ್ರಸಾರ ಮತ್ತು ಹೆಚ್ಚುವರಿ ಶುಲ್ಕ ವಸೂಲಿಗೆ ಸಂಬಂಧಿಸಿದಂತೆ ಚಂದಾದಾರರು ಮತ್ತು ಸಾರ್ವಜನಿಕರು ನೀಡುವ ದೂರುಗಳನ್ನು ಸಮರ್ಪಕವಾಗಿ ನಿರ್ವಹಿಸಲು ಜಿಲ್ಲೆಯ ಎಲ್ಲ ಮಲ್ಟಿ ಸಿಸ್ಟಮ್ ಆಪರೇಟರ್ ಮತ್ತು ಸ್ಥಳೀಯ ಕೇಬಲ್ ಆಪರೇಟರ್ ಗಳು ನಿರಂತರವಾಗಿ ಕಾರ್ಯನಿರ್ವಹಿಸುವ ಸುಸಜ್ಜಿತ ದೂರು ನಿರ್ವಹಣಾ ಕೇಂದ್ರ ಸ್ಥಾಪಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಹೇಳಿದರು.
ನಿಯಮಾವಳಿ ಅನ್ವಯ ಕಡ್ಡಾಯವಾಗಿ ದೂರು ನಿರ್ವಹಣಾ ಕೇಂದ್ರ ಸ್ಥಾಪಿಸುವುದರ ಜತೆಗೆ ಚಂದಾದಾರರ ದೂರುಗಳನ್ನು ಕಾಲಮಿತಿಯಲ್ಲಿ ಇತ್ಯರ್ಥಪಡಿಸುವ ಮೂಲಕ ಉತ್ತಮ ಸೇವೆ ಒದಗಿಸಬೇಕು
ಅದಕ್ಕಾಗಿ ಪ್ರತ್ಯೇಕ ರಿಜಿಸ್ಟರ್ ಹಾಗೂ ರೆಕಾರ್ಡಿಂಗ್ ಇಟ್ಟಿರಬೇಕು. ಅಧಿಕೃತ ಅಧಿಕಾರಿಗಳು ಕೇಳಿದಾಗ ಅದನ್ನು ಪರಿಶೀಲನೆಗೆ ಒಪ್ಪಿಸಬೇಕು ಎಂದರು.
ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸುವುದರಲ್ಲಿ ಯಾವುದೇ ರಾಜಿಯಿಲ್ಲ. ಶುಲ್ಕ ನಿಗದಿ ಮತ್ತು ಚಾನೆಲ್ ಸಿಗ್ನಲ್ ನೀಡುವುದಕ್ಕೆ ಸಂಬಂಧಿಸಿದಂತೆ ಪ್ರಸಾರಕರು ಹಾಗೂ ಎಂ.ಎಸ್.ಓ ನಡುವೆ ಇರುವ ವ್ಯಾವಹಾರಿಕ ಗೊಂದಲಗಳ ಬಗ್ಗೆ ಹಾಗೂ ಇದರಿಂದ ಚಂದಾದಾರರಿಗೆ ಆಗುತ್ತಿರುವ ಸಮಸ್ಯೆಗಳ ಕುರಿತು ರಾಜ್ಯಮಟ್ಟದ ಸಮಿತಿಯ ಗಮನಕ್ಕೆ ತರಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಇದೇ ವೇಳೆ ಮಾತನಾಡಿದ ಬೆಳಗಾವಿ ಪೊಲೀಸ್ ಆಯುಕ್ತ ಬಿ.ಎಸ್.ಲೋಕೇಶ್ ಕುಮಾರ್ ಅವರು, ಕೇಬಲ್ ಟಿವಿ ನೆಟ್ ವರ್ಕ್(ರೆಗ್ಯುಲೇಷನ್) ಕಾಯ್ದೆ ಪಾಲನೆ ಮತ್ತು ಅನಧಿಕೃತ ಯೂಟ್ಯೂಬ್ ಚಾನೆಲ್ ಮೇಲೆ ನಿಗಾ ವಹಿಸಲಾಗುತ್ತಿದೆ ಎಂದು ಹೇಳಿದರು.
ಇದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ದೂರುಗಳು ಬಂದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ದೂರದರ್ಶನ ಕೇಂದ್ರದ ಪ್ರಭಾರ ಉಪ ನಿರ್ದೇಶಕ ವೆಂಕಟೇಶ ದೇಶಪಾಂಡೆ ಅವರು, ದೂರದರ್ಶನ ಚಾನೆಲ್ ಗಳ ಕಡ್ಡಾಯ ಪ್ರಸಾರಕ್ಕೆ ಸಂಬಂಧಿಸಿದ ನಿಯಮಾವಳಿ ಹಾಗೂ ಪರಿಶೀಲನೆಯ ವಿಧಾನವನ್ನು ಸಭೆಯಲ್ಲಿ ತಿಳಿಸಿದರು.
ಜಿಲ್ಲಾಮಟ್ಟದ ಕೇಬಲ್ ಟೆಲಿವಿಷನ್ ನಿರ್ವಹಣಾ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ವಾರ್ತಾಧಿಕಾರಿ ಗುರುನಾಥ ಕಡಬೂರ ಸಭೆಯನ್ನು ನಿರ್ವಹಿಸಿದರು.
ಸಮಿತಿಯ ಸದಸ್ಯರಾದ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್.ಅರಸಿದ್ದಿ, ಬೆಳಗಾವಿ ಉಪ ವಿಭಾಗಾಧಿಕಾರಿ ಅಶೋಕ ತೇಲಿ, ಯುನೈಟೆಡ್ ಸೋಷಿಯಲ್ ವೆಲ್ ಫೇರ್ ಸಂಸ್ಥೆ ಮತ್ತು ಮಕ್ಕಳ ಸಹಾಯವಾಣಿ(೧೦೯೮) ಕೇಂದ್ರದ ತಿಪ್ಪೇಸ್ವಾಮಿ ಬಿ.ಓ., ಮಹಿಳಾ ಕಲ್ಯಾಣ ಸಂಸ್ಥೆಯ ಸುರೇಖಾ ಪಾಟೀಲ, ಸರ್ಕಾರಿ ಮಹಿಳಾ ಮಹಾವಿದ್ಯಾಲಯದ ಪ್ರಾಚಾರ್ಯ ಸಿ.ಈಶ್ವರಚಂದ್ರ ಹಾಗೂ ಬಿಮ್ಸ್ ಮನೋಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ.ಸರಸ್ವತಿ ಎನ್. ಉಪಸ್ಥಿತರಿದ್ದರು.
ಜಿಲ್ಲೆಯ ಮಲ್ಟಿ ಸಿಸ್ಟಮ್ ಆಪರೇಟರ್ ಗಳಾದ ರಾಜಶೇಖರ್ ಪಾಟೀಲ್, ಅಶೋಕ್ ದೇವಡಕರ್, ಜೆ.ಬಿ.ಮೇಲಪ್ಪಗೋಳ, ಬಸವಪ್ರಭು ತಿಮ್ಮಾಪುರ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು
೨೪×೭ ದೂರು ನಿಯಂತ್ರಣ ಕೊಠಡಿ ಆರಂಭ
ಕೇಬಲ್ ಟಿವಿ ಹಾಗೂ ಉಪಗ್ರಹ ಚಾನೆಲ್ ಗಳ ಪ್ರಸಾರದ ಕುರಿತು ಸಾರ್ವಜನಿಕರಿಗೆ ದೂರು ಸಲ್ಲಿಸಲು ಅನುಕೂಲವಾಗುವಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ರಾಜ್ಯಮಟ್ಟದ ೨೪×೭ ನಿಯಂತ್ರಣ ಕೊಠಡಿ ಆರಂಭಿಸಲಾಗಿದೆ.
ಪ್ರಸಾರಕ್ಕೆ ಸಂಬಂಧಿಸಿದಂತೆ ಯಾವುದೇ ದೂರುಗಳು ಇದ್ದರೆ ದೂರವಾಣಿ ಸಂಖ್ಯೆ ೦೮೦-೨೨೦೨೮೦೧೩ ಅಥವಾ ವಾಟ್ಸಾಪ್ ಸಂಖ್ಯೆ ೯೪೮೦೮೪೧೨೧೨ ಗೆ ಅಥವಾ [email protected] ಮೂಲಕ ನೇರವಾಗಿ ದೂರು ಸಲ್ಲಿಸಬಹುದು.
ಕಾರ್ಯಕ್ರಮ ಸಂಹಿತೆ ಹಾಗೂ ಜಾಹೀರಾತು ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ದೂರುಗಳನ್ನು ನೀಡಬಹುದು.
ಅದೇ ರೀತಿಯಲ್ಲಿ ಜಿಲ್ಲಾಮಟ್ಟದ ಕೇಬಲ್ ಟಿವಿ ನಿರ್ವಹಣಾ ಸಮಿತಿಯು ವಾರ್ತಾಭವನದಲ್ಲಿ (೦೮೩೧-೨೪೨೦೩೪೪) ದೂರು ಕೋಶವಾಗಿ ಕೆಲಸ ನಿರ್ವಹಿಸುತ್ತಿದ್ದು, ಜಿಲ್ಲೆಯ ಜನರು ಇಲ್ಲಿಯೂ ದೂರು ನೀಡಬಹುದು ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ತಿಳಿಸಿದರು.
******