ಬೆಳಗಾವಿ ಜಿಲ್ಲಾಧಿಕಾರಿ ಎನ್. ಜಯರಾಮ್ ಅವರಿಗೆ ಬಡ- ಅಸಹಾಯಕ ಮಕ್ಕಳ ಬಗ್ಗೆ ವಿಶೇಷ ಪ್ರೀತಿ, ಮಮತೆ ಹಾಗೂ ಕಾಳಜಿ. ಕಳೆದ ವರ್ಷ ದೀಪಾವಳಿ ಹಬ್ಬವನ್ನು ನಿರ್ಗತಿಕ ಮಕ್ಕಳೊಂದಿಗೆ ಸಂಭ್ರಮಿಸಿ ಕಳೆದ ಆ ಮಕ್ಕಳ ಮನದಲ್ಲಿ ಉಲ್ಲಾಸ, ಪ್ರೋತ್ಸಾಹ ತುಂಬಿರುವ ಸನ್ನಿವೇಶ ಸಂದರ್ಭದ ನೆನಪು ಸಾರ್ವಜನಿಕರ ಮನನದಲ್ಲಿ ಹಸಿರಾಗಿದೆ. ಅಂದು ಆ ಮಕ್ಕಳನ್ನು ತಮ್ಮ ಮನೆಗೆ ಆಹ್ವಾನಿಸಿ, ಅವರೊಂದಿಗೆ ಊಟ ಮಾಡಿ, ಹಾಡು ಹೇಳಿ, ಉಭಯ ಕುಶಲೋಪರಿ ವಿಚಾರಿಸಿ, ಮಹೋನ್ನತ ಗುರಿ ಸಾಧನೆಯ ಕನಸುಗಳನ್ನು ಕಟ್ಟಿಕೊಟ್ಟು ಜೀವನದ ಆಶಾ ಭಾವನೆಯ ಹೊಸ ಬೆಳಕನ್ನೇ ತುಂಬಿ ಕಳುಹಿಸಿದರು.
ಇದರೊಟ್ಟಿಗೆ ಬಡ ಮತ್ತು ಸಹಾಯಕ ಪ್ರತಿಭಾವಂತ ಮಕ್ಕಳ ಬಗ್ಗೆ ಅವರು ಹೊಂದಿರುವ ವಿಶೇಷ ಮಾನವೀಯ ಕಾಳಜಿ ಬಹಳಷ್ಟು ಜನರಿಗೆ ಗೊತ್ತಿಲ್ಲ. ಸರಕಾರಿ ವಸತಿಗೃಹಗಳಲ್ಲಿದ್ದು, ಚನ್ನಾಗಿ ಓದಿ ಶ್ರಮವಹಿಸಿ ಪ್ರತಿಶತ 90ಕ್ಕಿಂತ ಹೆಚ್ಚು ಅಂಕಪಡೆದ ಬೆಳಗಾವಿ ಜಿಲ್ಲಾ ವ್ಯಾಪ್ತಿಯ ಮಕ್ಕಳನ್ನು ಗುರುತಿಸಿ, ಅವರಿಗೆ ತಲಾ 10 ಸಾವಿರ ರೂಪಾಯಗಳ ನಗದು ಬಹುಮಾನ ನೀಡಿ, ಗೌರವಿಸುವ ವಿಶೇಷ ಕಾರ್ಯವನ್ನು ಎನ್. ಜಯರಾಮ್ ಅವರು ಕಳೆದ ಮೂರು ವರ್ಷಗಳಿಂದ ನೆರವೇರಿಸುತ್ತ ಬಂದಿದ್ದಾರೆ. ಈ ವರ್ಷ ಮತ್ತೇ ಈ ಕಾರ್ಯಕ್ಕೆ ಮುಂದಾಗಿರುವ ಅವರು ಇದೇ ದಿನಾಂಕ 14ರಂದು ಮುಂಜಾನೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಶೇಕಡಾ 90ಕ್ಕಿಂತ ಹೆಚ್ಚು ಅಂಕಪಡೆದು ಪಾಸಾಗಿರುವ ಸರಕಾರಿ ಹಾಸ್ಟೇಲಿನಲ್ಲಿದ್ದ ಎಸ್. ಎಸ್. ಎಲ್.ಸಿ. ಹಾಗೂ ಪಿಯುಸಿಯ 600 ವಿದ್ಯಾರ್ಥಿಗಳಿಗೆ ತಲಾ 10 ಸಾವಿರ ರೂಪಾಯಿಗಳ ನಗದು ಬಹುಮಾನ ನೀಡಿ, ಪ್ರಶಂಸಾ ಪತ್ರದೊಂದಿಗೆ ಗೌರವಿಸಲಿದ್ದಾರೆ. ಮಕ್ಕಳಿಗೆ ನೀಡಿವ ನಗದು ಪುರಸ್ಕಾರದ ಹಣವನ್ನು ಹೃದಯಶ್ರೀಮಂತಿಕೆಯ ದಾನಿಗಳಿಂದ ಡಿಡಿ ಮೂಲಕವೂ ಜಿಲ್ಲಾ ಆಡಳಿತ ಪಡೆದುಕೊಂಡಿದೆ. ಇದರ ವಿಶೇಷ ಮುತವರ್ಜಿಯನ್ನು ಜಯರಾಮ್ ಸಾಹೇಬರೇ ವಹಿಸಿಕೊಂಡಿದ್ದಾರೆ.
ಈ ನಗದು ಪುರಸ್ಕಾರ ಈ ವರ್ಷ ಕೇವಲ ಪ್ರತಿಭಾವಂತರಿಗೆ ಮಾತ್ರ ಸೀಮಿತಗೊಳ್ಳದೆ, ತಂದೆ ತಾಯಿ ಇಲ್ಲದ ತಬ್ಬಲಿಗಳಾದ ಸುಮಾರು 108 ವಿದ್ಯಾಥಿಗಳನ್ನು ಗುರುತಿಸಿ, ಅವರ ಶೈಕ್ಷಣಿಕ ಸಾಧನೆಯನ್ನು ಕಡಿಮೆ ಎಂಬುದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಅವರಿಗೂ ತಲಾ 10 ಸಾವಿರ ನಗದು ಬಹುಮಾನ ನೀಡಲಾಗುತ್ತಿದೆ. ಜೊತೆಗೆ ಬೆಳಗಾವಿ ಜಿಲ್ಲೆಯ ಹಿರಿಯ ಒಬ್ಬೊಬ್ಬ ಅಧಿಕಾರಿಗೆ ಈ ಮಕ್ಕಳ ಜವಾಬ್ದಾರಿಯನ್ನು ಆಸಕ್ತಿ ಮೇರೆಗೆ ನೀಡಲು ಉದ್ದೇಶಿಸಲಾಗಿದೆ. ಆಸಕ್ತ ಅಧಿಕಾರಿಗಳು ಭವಿಷ್ಯದಲ್ಲಿ ಈ ತಬ್ಬಲಿ ಮಕ್ಕಳ ಖರ್ಚು ವೆಚ್ಚ ಮತ್ತು ಕೈಲಾದ ಸಹಾಯ ಮಾಡಲು ಮುಂದೆ ಬಂದಿದ್ದಾರೆ. ಇದರೊಂದಿಗೆ ಪೊಲೀಸ್ ಮಕ್ಕಳ ಬಗ್ಗೆಯೂ ವಿಶೇಷ ಆದರ ಜಿಲ್ಲಾಡಳಿತ ಹೊಂದಿದ್ದು, ಪಿಎಸ್‍ಐ ಕೆಳಹಂತದ ಸಾಧಕರ ಮಕ್ಕಳಿಗೆ ವಿಶೇಷ ಪುರಸ್ಕಾರ ನೀಡಲಿದೆ.
ಈ ಮಕ್ಕಳೊಂದಿಗೆ ಈ ವರ್ಷ ಅಪರೂಪದ ಸನ್ಮಾನ ಕಾರ್ಯಕ್ರಮದಲ್ಲಿ ಸಿವಿಲ್ ಸರ್ವಿಸ್ ಸೇರಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಸಾದ ಬೆಳಗಾವಿ ಜಿಲ್ಲೆಯ 46ಜನ ಸಾಧಕರನ್ನು ಗೌರವಿಸುವ ಕಾರ್ಯಕ್ರವನ್ನು ಇಟ್ಟುಕೊಳ್ಳಲಾಗಿದೆ. ಆತ್ಮೀಯ ಹೃದಯಸ್ಪರ್ಶಿಯ ಈ ಕಾರ್ಯಕ್ರಮಕ್ಕೆ ಯುಪಿಎಸ್‍ಸಿ ಪರೀಕ್ಷೆಯಲ್ಲಿ ದೇಶದಲ್ಲಿಯೇ ಪ್ರಥಮ ರ್ಯಾಂಕ್ ಪಡೆದ ಕೋಲಾರದ ನಂದಿನಿ ಕೆ.ಆರ್. ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಸಾಕ್ಷಿಯಾಗಲಿದ್ದಾರೆ. ಈ ಬಡ ಅಸಹಾಯಕ ತಬ್ಬಲಿ ಮಕ್ಕಳ ಭವಿಷ್ಯದ ಸಾಧನೆಗೆ ಪ್ರೇರಣೆ ನೀಡಲಿರುವ ನಂದಿನಿ ಅವರು ಸಾಧನೆಯ ದಾರಿಗೆ ದೀಪ ಹಿಡಿಯಲಿದ್ದಾರೆ.
ಸರಕಾರಿ ಅಧಿಕಾರಿಗಳೆಂದರೆ ಕುರ್ಚಿಯ ಮೇಲೆ ಗತ್ತುಗಮ್ಮತ್ತಿನಿಂದ ಕುಳಿತು, ಗವಾನಿಯಂತ್ರಿಕ ವಾಹನಗಳಲ್ಲಿ ಸಂಚರಿಸಿ ಸಾರ್ವಜನಿಕರ ಗಮನ ಸೆಳೆಯುವ ವರ್ಗಕ್ಕೆ ಎನ್. ಜಯರಾಮ್ ಅವರು ಸಾಮಾಜಿಕ ಕಳಕಳಿಯ ಮಾನವೀಯ ಮಿಡಿತ ಒಂದು ಮಾದರಿಯಾಗಿ ನಿದರಶನ ಹಾಗೂ ನಿರ್ದೇಶನವಾಗಲಿದೆ. ಜೀವನದ ನೋವು ನಲಿವುಗಳನ್ನು ಕಂಡುಂಡ ಅಧಿಕಾರಿಗಳು ಸಾಮಾಜಿಕ ಕಳಕಳಿಯ ಇಂಥ ಕಾರ್ಯಕ್ರಮಗಳತ್ತ ಒಲು ತೋರಿದರೆ ಅಧಿಕಾರಿಗಳ ಬಗ್ಗೆ ಸಾರ್ವಜನಿಕರಲ್ಲಿ ವಿಶೇಷವಾದ ಗೌರವ ಹೆಚ್ಚಾಗುವಲ್ಲಿ ಸಂಶಯವಿಲ್ಲ. ಇದಕ್ಕೆ ಬೆಳಗಾವಿ ಜಿಲ್ಲಾಧಿಕಾರಿ ಎನ್. ಜಯರಾಮ್ ಅವರು ಒಂದು ವಿಶಿಷ್ಟ ಮಾರ್ಗ ಹಾಕಿಕೊಟ್ಟಿರುವುದು ಶ್ಲಾಘನೀಯವಾದದ್ದು.
ಜೊತೆಗೆ ಇನ್ನೊಂದು ಮಾತು ಹೇಳಲೇ ಬೇಕು ಜಿಲ್ಲಾಧಿಕಾರಿ ಎನ್ ಜಯರಾಂ ಅವರ ಹೆಗಲಿಗೆ ಹೆಗಲು ಹಚ್ಚಿ sslc ಟಾಪರ್ ಗಳನ್ನು ಸಹಾಯ ಮಾಡುವ ಡೋನರ್ ಗಳನ್ನು ಹುಡಕಿದ್ದೇ ನಮ್ಮ ಹೆಮ್ಮೆಯ ADC ಸುರೇಶ್ ಇಟ್ನಾಳ್ ಅನ್ನೋದನ್ನು ಮರೆಯಬಾರದು
ಸುದ್ಧಿ ತಡವಾದರೂ ಸಮಗ್ರ ಮತ್ತು ವಿಶೇಷ ಅನ್ನೋದನ್ನು ಮರೆಯಬೇಡಿ ಇದು ನಿಮ್ಮ ಬೆಳಗಾವಿ ಸುದ್ಧಿ