ಬೆಳಗಾವಿ: ಆಗಸ್ಟ : 09 :(ಕರ್ನಾಟಕ ವಾರ್ತೆ): ಬೆಳಗಾವಿ ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಜಿಲ್ಲಾಧಿಕಾರಿಗಳಾದ ಶ್ರೀ ಎನ್ ಜಯರಾಮ ಅವರು ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಚಿಕ್ಕೋಡಿ ತಾಲೂಕಿನ ಮಾಂಜರಿ ಬಳಿಯ ಕೃಷ್ಣಾ ನದಿಯ ಸೇತುವೆ, ಚಂದೂರ, ಯಡೂರ ಗ್ರಾಮದ ಜಮೀನುಗಳಿಗೆ ಜಿಲ್ಲಾಧಿಕಾರಿ ಭೇಟಿ ಮಾಡಿ ಬೆಳೆಹಾನಿ ಹಾಗೂ ನದಿ ನೀರಿನ ಮಟ್ಟವನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಶಾಸಕ ಗಣೇಶ ಹುಕ್ಕೇರಿ ಅವರು ಚಿಕ್ಕೋಡಿ ವ್ಯಾಪ್ತಿಯಲ್ಲಿ ಆಗಿರುವ ಬೆಳೆಹಾನಿ ಮತ್ತಿತರ ಸಮಸ್ಯೆಗಳನ್ನು ವಿವರಿಸಿದರು.
ನಂತರ ಸುದ್ದಿಗಾರರ ಜತೆ ಮಾತನಾಡಿದ ಜಿಲ್ಲಾಧಿಕಾರಿ ಎನ್.ಜಯರಾಮ್ ಅವರು, ಜಿಲ್ಲೆಯಲ್ಲಿ ಮಳೆಯಿಂದ ಬೆಳೆಹಾನಿಯಾಗಿರುವ ಕುರಿತು ಜಂಟಿ ಸಮೀಕ್ಷೆ ನಡೆಸಲು ಕೃಷಿ, ತೋಟಗಾರಿಕೆ, ಕಂದಾಯ ಮತ್ತಿತರ ಇಲಾಖೆಗಳ ಅಧಿಕಾರಿಗಳ ತಂಡ ರಚಿಸಲಾಗಿದೆ. ವರದಿ ಬಂದ ನಂತರ ಪರಿಹಾರ ವಿತರಣೆಗೆ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ಸೇತುವೆ ಹಾಗೂ ರಸ್ತೆಗಳ ಹಾನಿಯ ಬಗ್ಗೆ ಸಮೀಕ್ಷೆ ನಡೆಸಲು ಲೋಕೋಪಯೋಗಿ ಇಲಾಖೆ ಮತ್ತು ಜಿಲ್ಲಾ ಪಂಚಾಯಿತಿಗೆ ಸೂಚನೆ ನೀಡಲಾಗಿದೆ.
ಜಿಲ್ಲೆಯ ವಿವಿಧೆಡೆ ಇರುವ ಕೆಳಹಂತದ ಸೇತುವೆಗಳ ಎತ್ತರವನ್ನು ಹೆಚ್ಚಿಸುವಂತೆ ಸಾರ್ವಜನಿಕರಿಂದ ಬೇಡಿಕೆ ಇದೆ. ಈ ಬಗ್ಗೆ ಉನ್ನತ ಮಟ್ಟದಲ್ಲಿ ನೀರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.
ಕೃಷ್ಣಾ ನದಿಯಲ್ಲಿ ಸದ್ಯ ಪ್ರವಾಹ ಸ್ಥಿತಿ ಇಲ್ಲ. ಜನರು ಆತಂಕಪಡುವ ಅಗತ್ಯವಿಲ್ಲ. 3 ಲಕ್ಷ ಕ್ಯೂಸೆಕ್ ನೀರು ಬಂದಾಗ ಮಾತ್ರ ಪ್ರವಾಹ ಉದ್ಭವಿಸುವ ಸಾಧ್ಯತೆ ಇರುತ್ತದೆ. ನದಿಯ ನೀರಿನ ಒಳಹರಿವು ಪ್ರಮಾಣವನ್ನು ನಿತ್ಯ ಗಮನಿಸಲಾಗುತ್ತಿದ್ದು, ಅದೇ ಪ್ರಮಾಣದ ನೀರನ್ನು ಹಿಪ್ಪರಗಿ ಹಾಗೂ ಆಲಮಟ್ಟಿ ಜಲಾಶಯದಿಂದ ಬಿಡುಗಡೆ ಮಾಡಲಾಗುತ್ತಿರುವುದರಿಂದ ಪ್ರವಾಹ ಪರಿಸ್ಥಿತಿಯ ಭೀತಿ ಇಲ್ಲ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಇದಕ್ಕೂ ಮುಂಚೆ ಯಡೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಶಾಸಕ ಗಣೇಶ ಹುಕ್ಕೇರಿ, ಪ್ರತಿವರ್ಷ ಮುಳುಗಡೆಯಾಗುವ ಯಡೂರ-ಕಲ್ಲೋಳ ಹೊಸ ಸೇತುವೆ ನಿರ್ಮಾಣಕ್ಕೆ ಸರ್ಕಾರಕ್ಕೆ 31 ಕೋಟಿ ರೂಪಾಯಿ ವೆಚ್ಚದ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಶೀಘ್ರ ಮಂಜೂರಾತಿಯ ನಿರೀಕ್ಷೆ ಇದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಚಿಕ್ಕೋಡಿ ಉಪ ವಿಭಾಗಾಧಿಕಾರಿಗಳಾದ ಗೀತಾ ಕೌಲಗಿ, ಚಿಕ್ಕೋಡಿ ತಹಶೀಲ್ದಾರ ಕುಲಕರ್ಣಿ, ಇತರ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
Check Also
ಲಕ್ಷ ರೂ ಸಾಲದಲ್ಲಿ, ಫಿಫ್ಟೀ ,ಗುಳುಂ, ಸಾವಿರಾರು ಮಹಿಳೆಯರು ಗರಂ….!!!!
ಮನೆಗೆ ಬಂದು ಒಂದು ಲಕ್ಷ ರೂ ಸಾಲ ಕೊಡ್ತಿವಿ ಅಂತಾ ಹೇಳಿದ್ರೆ ಯಾರಾದ್ರೂ ಬೇಡ ಅಂತಾರಾ…? ಮೈಕ್ರೋ ಫೈನಾನ್ಸ್ ಮೂಲಕ …