Breaking News

ಚುನಾವಣಾ ಸಿಬ್ಬಂಧಿಗೆ ಫುಲ್ ಟ್ರೇನಿಂಗ್…..ಲೋಪವೆಸಗದಂತೆ ಡಿಸಿ ಜಿಯಾವುಲ್ಲಾ ಖಡಕ್ ವಾರ್ನಿಂಗ್…..

ಪ್ರಾಯೋಗಿಕ ತರಬೇತಿ ಕಾರ್ಯಾಗಾರ
ಸುಗಮ ಚುನಾವಣೆಗೆ ಕೈಜೋಡಿಸಿ
– ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ
ಬೆಳಗಾವಿ:ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಮರ್ಥವಾಗಿ ತರಬೇತಿಯನ್ನು ಪಡೆದರೆ ಮಾತ್ರ ಚುನಾವಣಾ ಕಾರ್ಯವನ್ನು ಸುಲಭವಾಗಿ ನಿರ್ವಹಿಸಬಹುದು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಎಸ್. ಜಿಯಾವುಲ್ಲಾ ಅವರು ಹೇಳಿದರು.
ಇಲ್ಲಿನ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಮಂಗಳವಾರ (ಏ.03) ‘ವಿಧಾನಸಭಾ ಮತಕ್ಷೇತ್ರ ಮಟ್ಟದ ಮಾಸ್ಟ್‍ರ್ ಟ್ರೈನರ್’ಗಳಿಗಾಗಿ ಹಮ್ಮಿಕೊಂಡಿದ್ದ ‘ಜಿಲ್ಲಾ ಮಟ್ಟದ ಪ್ರಾಯೋಗಿಕ ತರಬೇತಿ ಕಾರ್ಯಾಗಾರ’ದಲ್ಲಿ ಅವರು ಮಾತನಾಡಿದರು.
ಅಧಿಕಾರಿಗಳು ಹಾಗೂ ಸಿಬ್ಬಂದಿ ಚುನಾವಣಾ ಆಯೋಗದ ಕ್ರಮಗಳು, ಸೂಚನೆಗಳನ್ನು ಸರಿಯಾಗಿ ತಿಳಿದುಕೊಳ್ಳಬೇಕು. ತಾಳ್ಮೆ ಹಾಗೂ ಆತ್ಮಸ್ಥೈರ್ಯದಿಂದ ಚುನಾವಣೆಯಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಸೂಚನೆ ನೀಡಿದರು.
ಇವಿಎಂ ಮತಯಂತ್ರದಲ್ಲಿ ಒಬ್ಬ ಅಭ್ಯರ್ಥಿಗೆ ಚಲಾಯಿಸಿದ ಮತ ಇನ್ನೊಬ್ಬ ಅಭ್ಯರ್ಥಿಗೆ ಹೋಗಲು ಸಾಧ್ಯವೇ ಇಲ್ಲ. ಈ ಬಗ್ಗೆ ಮತದಾರರಿಂದ ದೂರು ಬಂದರೆ ಮತಗಟ್ಟೆಯಲ್ಲಿ ಮತದಾನ ನಿಲ್ಲಿಸಿ ಜಿಲ್ಲಾ ಚುನಾವಣಾಧಿಕಾರಿಗಳ ಗಮನಕ್ಕೆ ತರಬೇಕು. ಅವರು ಇದನ್ನು ರಾಜ್ಯ ಚುನಾವಣಾಧಿಕಾರಿಗಳ ಗಮನಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳುತ್ತಾರೆ.
ಮತಯಂತ್ರವನ್ನು ಪರಿಶೀಲಿಸುವುದಕ್ಕಿಂತ ಮುಂಚೆ ಆ ರೀತಿಯ ಆರೋಪ ಮಾಡಿದ ವ್ಯಕ್ತಿಗೆ ತಮ್ಮ ಆರೋಪ ಸುಳ್ಳೆಂದು ಸಾಭೀತಾದರೆ ಆರು ತಿಂಗಳು ಶಿಕ್ಷೆ ಹಾಗೂ ದಂಡ ವಿಧಿಸಲಾಗುವುದು ಎಂದು ತಿಳಿಸಿ, ಅವರಿಂದ ಲಿಖಿತ ಹೇಳಿಕೆ ಪಡೆಯಬೇಕು ಎಂದು ತಿಳಿಸಿದರು.
ಇಂದು ಯಾವುದೇ ವದಂತಿಗಳನ್ನು ಹರಡಲು ಮಿತಿಯೆಂಬುದೇ ಇಲ್ಲವಾಗಿದ್ದು, ಊಹಾಪೋಹಗಳನ್ನು ಯಾರು ಬೇಕಾದರೂ ಸುಲಭವಾಗಿ ಹರಡುತ್ತಿದ್ದಾರೆ. ಆದ್ದರಿಂದ ಅಧಿಕಾರಿಗಳು ಎಚ್ಚರ ವಹಿಸಿ, ವದಂತಿಗಳು ಹರಡಲು ಅವಕಾಶ ನೀಡಬಾರದು ಎಂದು ತಿಳಿಸಿದರು.
ಒಂದು ಬ್ಯಾಲೆಟ್ ಯುನಿಟ್‍ನಲ್ಲಿ 15 ಅಭ್ಯರ್ಥಿಗಳ ಬಟನ್‍ಗಳಿದ್ದು, 16ನೇ ಬಟನ್ ನೋಟಾ ಆಗಿರುತ್ತದೆ. ಒಂದು ಮತಕ್ಷೇತ್ರದಲ್ಲಿ 15 (15+1) ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರೇ ಒಂದೇ ಬ್ಯಾಲೆಟ್ ಯುನಿಟ್‍ನ್ನು ಬಳಸಲಾಗುವುದು. 15 ಕ್ಕಿಂತ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದರೇ ಎರಡನೇ ಬ್ಯಾಲೆಟ್ ಯುನಿಟ್ ಬಳಸಲಾಗುವುದು ಎಂದು ತಿಳಿಸಿದರು.
ಇದೇ ಮೊದಲ ಬಾರಿಗೆ ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಇವಿಎಂ ಮತಯಂತ್ರ ಬಳಕೆ ಮಾಡಲಾಗುತ್ತಿದ್ದು, ಸುಗಮ ಚುನಾವಣೆ ನಡೆಸಲು ಅಧಿಕಾರಿಗಳು, ಸಿಬ್ಬಂದಿ ಸೇರಿದಂತೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಹೇಳಿದರು.

ಮತದಾನದ ಪ್ರಾತ್ಯಕ್ಷಿಕೆ ನಡೆಸಿ:
ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಮಚಂದ್ರನ್. ಆರ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಡಿಮೆ ಪ್ರತಿಶತ ಮತದಾನವಾದ ಮತಗಟ್ಟೆಗಳಲ್ಲಿ ಮತದಾನದ ಪ್ರಾತ್ಯಕ್ಷಿಕೆ ನಡೆಸಿ, ಜನರಲ್ಲಿ ಜಾಗೃತಿ ಮೂಡಿಸುವಂತೆ ಚುನಾವಣಾ ಆಯೋಗದಿಂದ ಸೂಚನೆ ನೀಡಲಾಗಿದೆ. ಆದ್ದರಿಂದ ಅಂತಹ ಮತಗಟ್ಟೆಗಳಲ್ಲಿ ಮತದಾನದ ಪ್ರಾತ್ಯಕ್ಷಿಕೆ ನಡೆಸಬೇಕೆಂದು ಸೂಚಿಸಿದರು.
ಜಿಲ್ಲಾದ್ಯಂತ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಮಾರುಕಟ್ಟೆ, ಸಂತೆ ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ಶೀಘ್ರದಲ್ಲೇ ಇವಿಎಂ ಹಾಗೂ ವಿವಿ ಪ್ಯಾಟ್ ಬಳಕೆಯ ಬಗ್ಗೆ ಪ್ರಾತ್ಯಕ್ಷಿಕೆ ಏರ್ಪಡಿಸಿ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ರಾಮಚಂದ್ರನ್ ಅವರು ತಿಳಿಸಿದರು.
ತರಬೇತಿಯಲ್ಲಿ ತಿಳಿಸುವ ವಿಷಯಗಳನ್ನು ಮಾಸ್ಟರ್ ಟ್ರೈನರ್‍ಗಳು ಚೆನ್ನಾಗಿ ಮನದಟ್ಟು ಮಾಡಿಕೊಂಡು, ತಮ್ಮ ವ್ಯಾಪ್ತಿಯ ಪ್ರತಿಯೊಂದು ಮತಗಟ್ಟೆಯ ಸಿಬ್ಬಂದಿಗೂ ಉತ್ತಮ ತರಬೇತಿ ನೀಡಬೇಕು ಎಂದು ಹೇಳಿದರು.

ರಾಜ್ಯಮಟ್ಟದ ಮಾಸ್ಟರ್ ಟ್ರೈನರ್ ಎನ್.ವಿ. ಶಿರಗಾವಕರ ಹಾಗೂ ಜಿಲ್ಲಾ ಮಾದರಿ ನೀತಿ ಸಂಹಿತೆ ನೋಡಲ್ ಅಧಿಕಾರಿ ಜಗದೀಶ ರೂಗಿ ಅವರು ಮಾತನಾಡಿದರು.
ಬಿಇಎಲ್ ಎಂಜಿನಿಯರ್‍ಗಳಾದ ಆರ್ಯನ್ ಹಾಗೂ ವಿನೂತ ಅವರು ಇವಿಎಂ ಮತಯಂತ್ರ ಬಳಕೆ ಕುರಿತು ಪ್ರಾಯೋಗಿಕವಾಗಿ ತರಬೇತಿ ನೀಡಿದರು.
ಅಪರ ಜಿಲ್ಲಾಧಿಕಾರಿ ಡಾ|| ಎಚ್.ಬಿ. ಬೂದೆಪ್ಪ, ಉಪವಿಭಾಗಾಧಿಕಾರಿ ಕವಿತಾ ಯೋಗಪ್ಪನವರ ಸೇರಿದಂತೆ ಇನ್ನಿತರ ಅಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ರಾಮನಗೌಡ ಕನ್ನೊಳಿ ಅವರು ನಿರೂಪಿಸಿದರು.
ಜಿಲ್ಲೆಯ ಎಲ್ಲ ವಿಧಾನಸಭಾ ಮತಕ್ಷೇತ್ರ ಮಟ್ಟದ ಮಾಸ್ಟ್‍ರ್ ಟ್ರೈನರ್‍ಗಳು ಹಾಗೂ ಇನ್ನಿತರರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *