ಸಂವಿಧಾನ ಶಿಲ್ಪಿ, ಭಾರತ ರತ್ನ, ಮಹಾಮಾನವತಾವಾದಿ ಡಾಕ್ಟರ್ ಬಾಬಾಸಾಹೇಬ ಅಂಬೇಡ್ಕರ ಅವರ ಜೀವನ ಸಾಧನೆಯೇ ಒಂದು ದೊಡ್ಡಪವಾಡ. ಒಬ್ಬ ಅಗಮ್ಯೆ ಸಾಭಿಮಾನಿ ಜನಪರ ಹೋರಾಟಗಾರನಾದಾಗ ಅದರಲ್ಲೂ ಸಾವಿರಾರು ವರ್ಷಗಳಿಂದ ತುಳತಕ್ಕೆ ಒಳಗಾದ ದಲಿತ ಸಮುದಾಯದ ಬದುಕಿನ ಹಕ್ಕಿಗಾಗಿ ಜೀವಿಸಿದ ಅಂಬೇಡ್ಕರ ಅವರದು ಅನುಕ್ಷಣ ಹೋರಾಟವೇ ಆಗಿದೆ. ಭಾರತದಲ್ಲಿ ದಲಿತ ಸಮುದಾಯದ ಹಕ್ಕಿಗಾಗಿ ಹೋರಾಟ ನಡೆಸುವುದು ಕೇವಲ ಬೆಂಕಿಕೆಂಡದ ಮೇಲೆ ನಡೆಯುವುದಲ್ಲ, ಉರಿಯ ಕೆನ್ನಾಲೆಯೊಳಗೆ ಹಾಯ್ದಂತೆ. ಹೀಗಿದ್ದೂ ಅಂಬೇಡ್ಕರ ಅವರು ತಾವು ಒಪ್ಪಿಕೊಂಡ ತತ್ವಗಳಿಗೆ ವಿರುದ್ಧವಾಗಿ ನಡೆದುಕೊಂಡವರಲ್ಲ. ಸ್ವಹಿತಾಸಕ್ತಿ ಕನಸಿನಲ್ಲೂ ಯೋಜಿಸಲಿಲ್ಲ. ಬಾಬಾಸಾಹೇಬರಿಗೆ ನಿದ್ದೆಯಲ್ಲೂ ಯಾವತ್ತೂ ಕನಸು ಕಂಡದ್ದು ದಲಿತರ ಸ್ವಾಭಿಮಾನ ಬದುಕಿನ ನಿರ್ಮಾಣ. ಎಚ್ಚರಾದಾಗ ನಡೆದ ಕ್ರಿಯೆ ಹೋರಾಟಮಯ. ನಿರಂತರ ಕ್ರಿಯಾಶೀಲರಾದ ಅಂಬೇಡ್ಕರ ಅವರು ನಿದ್ದೆ ಮಾಡಿದ್ದು ತೀರ ಕಡಿಮೆ. ಎಲ್ಲವೂ ವೈಚಾರಿಕ ನೆಲೆಯಲ್ಲಿ ತಿಳಿದುಕೊಳ್ಳುವ ತೀವ್ರ ಕುತೂಹಲ. ಜ್ಞಾನದ ಹಸಿವು. ಯಾವತ್ತೂ ಹೊಸಬಗೆಯ ಆಲೋಚನೆ. ಅವುಗಳ ಒಟ್ಟು ಸಾಕಾರಕ್ಕೆ ಒಪ್ಪಂದ ರಹಿತ ಬಿಡುವಿಲ್ಲದ ಶ್ರಮಜೀವಿ. ಭಾರತದ ದೇಶದ ಹೆಮ್ಮಯ ಪುತ್ರರಾದ ಬಾಬಾಸಾಹೇಬರು ಭಾರತದಲ್ಲಿ ಜನ್ಮ ತಾಳಿದ್ದೇ ಅದು ಅನುಪಮ ಸುಯೋಗ. ಅವರು ಕಟ್ಟಿಕೊಟ್ಟ ಸಂವಿಧಾನ ಇಡೀ ವಿಶ್ವದಲ್ಲಿಯೇ ಭಾರತ ಶಾಂತಿಯುತ ಜೀವನಕ್ರಮಕ್ಕೆ ಹೆಸರುವಾಸಿಯಾಗುವಂತಾಗಿದೆ. ದುರಂತವೆಂದರೆ ಇಂಥ ಮಹಾನುಭಾವನ್ನು ಕೋಮುವಾದಿ ಮನೋಧರ್ಮಗಳು ಇಂದಿಗೂ ಸರಿಯಾಗಿ ಅರ್ಥಮಾಡಿಕೊಳ್ಳದೇ ಇರುವುದು.
ಭಾರತ ಮಾತ್ರವಲ್ಲ ಇಡೀ ಜಗತ್ತೇ ಕಂಡ ಈ ಮಹಾ ಮಾನವತಾವಾದಿಯ ಬಗ್ಗೆ ಎಷ್ಟು ತಿಳಿದುಕೊಂಡರೂ ಓದಿದರೂ ಕಡಿಮೆ. ಅಕ್ಷರ ಪ್ರಪಂಚದಲ್ಲಿ ಇವರ ಬಗ್ಗೆ ನಿತ್ಯ ಸಾಕಷ್ಟು ಅಧ್ಯಯನಗಳು ನಿರಂತರ ನಡೆಯುತ್ತಿವೆ. ದೇಶಕ್ಕೆ ಎದುರಾಗುವ ಹೊಸ ಸವಾಲುಗಳಿಗೆ ಅಂಬೇಡ್ಕರ ಅವರು ಹೇಳಿಕೊಟ್ಟ ತತ್ವ ವಿಚಾರಗಳೇ ಅಂತಿಮವಾಗಿ ಪರಿಹಾರ ಮಾರ್ಗವಾಗಿವೆ. ದೇಶದ ಆರ್ಥಿಕ ಸಂಕಟ ಇರಹುದು; ಸಾಮಾಜಿಕ ಸಂಬಂಧ, ಸಮಸ್ಯೆಗಳಾಗಿರಬಹುದು. ರಾಜೀಯ ಬಿಕ್ಕಟ್ಟುಗಳಾಗಿರಬಹುದು, ಸ್ತ್ರೀಯರ ಹಕ್ಕು-ಸ್ವಾತಂತ್ರ್ಯವಾಗಿರಬಹುದು ಏನೇ ಇರಲಿ ಅಂಬೇಡ್ಕರ ಅವರ ತತ್ವಗಳು ಸಾರ್ವಜಿಕ ಪರಿಹಾರ ಮಾರ್ಗಗಳಾಗಿವೆ. ಯಾರು ಎಷ್ಟೇ ಹೊಟ್ಟೆಕಿಚ್ಚುಪಟ್ಟರೂ, ತುಳಿಯಲೆತ್ನಿಸಿದರೂ ಅಂಬೇಡ್ಕರ ಅವರನ್ನು ದೂರವಿಟ್ಟು ದೇಶಕಟ್ಟಲು ಸಾಧ್ಯವಿಲ್ಲ ಎಂಬುದು ಸರ್ವಸತ್ಯ.
ಇಂತಹ ಆದರ್ಶ ಹಾಗೂ ಮಾದಿರಿ ವ್ಯಕ್ತಿತ್ವವನ್ನು ಸಾಮಾನ್ಯ ಜನರಿಗೆ ಗೊತ್ತುಪಡೆಸುವ ಉದ್ಧೇಶದಿಂದ ಕನ್ನಡದ ಜಿಟಿವಿ ವಾಹಿನಿಯವರು ‘ಮಾಹಾನಾಯಕ’ ಹೆಸರಿನಲ್ಲಿ ಕಳೆದ ವಾರದಿಂದ ಪ್ರತಿ ಶನಿವಾರ ಮತ್ತು ರವಿವಾರ ಸಂಜೆ 6 ಗಂಟೆಯಿಂದ 7 ಗಂಟೆಯವರೆಗೆ ಜೀವನಚರಿತ್ರೆಯನ್ನು ಧಾರಾವಾಹಿ ರೂಪದಲ್ಲಿ ಪ್ರಸಾರ ಮಾಡುತ್ತಿದೆ. ಮೂಲ ಮರಾಠಿಯಲ್ಲಿ ರಚಿತವಾದ ಈ ಧಾರಾವಾಹಿಯನ್ನು ಜಿಟಿವಿಯವರು ಕನ್ನಡದಕ್ಕೆ ದಬ್ಬ ಮಾಡಿದ್ದಾರೆ.
ಕಳೆದ ಶನಿವಾರ ಮತ್ತು ರವಿವಾರ ಪ್ರಸಾರವಾದ ಈ ಅಂಬೇಡ್ಕರ ಜೀವನ ಚರಿತ್ರೆಯ ಧಾರವಾಹಿಯನ್ನು ಪ್ರಜ್ಞಾವಂತ ವರ್ಗ ಮಾತ್ರವಲ್ಲ ನಗರ ಗ್ರಾಮೀಣ ಪ್ರದೇಶದ ಸಾಮಾನ್ಯ ಜನರೂ ತುಂಬಾ ಅಭಿಮಾನ ಪ್ರೀತಿಯಿಂದ ವೀಕ್ಷಿಸಿದ್ದಾರೆ. ಅಂಬೇಡ್ಕರ ಅವರು ತಮ್ಮ ಬಾಲ್ಯದ ದಿನಗಳಲ್ಲಿ ಅನುಭವಿಸಿದ ಅಸ್ಪøಶ್ಯತೆಯ ಅವಮಾನ, ಅಪಮಾನ ಹಾಗೂ ಅವಕಾಶ ವಂಚಿತ ವೇದನೆಗಳು ಹಾಗೂ ಅವರ ತಂದೆ ಅನುಭವಿಸಿದ ಶೋಷಣೆ, ನೋವ, ಸಂಕಷ್ಟಗಳ ಬಗ್ಗೆ ಜೀ ಟಿವಿಯವರು ವೀಕ್ಷಕರಿಗೆ ನೀಡಿದ್ದಾರೆ. ಆ ಮೂಲಕ ಅಂಬೇಡ್ಕರ ಅವರ ಮುಂದಿನ ಬದುಕಿನ ಕ್ರಮದ ಕುತೂಹಲ ಮೂಡಿಸಿದ್ದಾರೆ. ಅಂಬೇಡ್ಕರ ಕುರಿತಾದ ಕನ್ನಡದಲ್ಲಿ ಈ ಬಗೆಯ ಪ್ರಯತ್ನ ಹೊಸದು. ಬಹುಸಂಖ್ಯಾತ ಕನ್ನಡಿಗರು ಪ್ರೀತಿಯಿಂದ ಸ್ವಾಗತಿಸಿದ್ದಾರೆ.
ಡಾಕ್ಟರ್ ಬಾಬಾಸಾಹರ ಜೀವನ ಚರಿತ್ರೆ ಮಾತ್ರವಲ್ಲ, ಭಾರತದ ಶೋಷಣೆ ರಹಿತ ಸಮಾನತೆ-ವ್ಯಕ್ತಿ ಸ್ವಾತಂತ್ರ್ಯದ ಹೊಸ ಸಮಾಜವನ್ನು ಕಟ್ಟಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿ ಹೋರಾಟಮಯ ಬದುಕು ಸಾಗಿಸಿದ ಬುದ್ಧ, ಬಸವಣ್ಣ, ಮಹಾತ್ಮಾಗಾಂಧಿ ಸೇರಿದಂತೆ ಅನೇಕ ಮಾಹಾನ್ ನಾಯಕರ ಜೀವನ ಚರಿತ್ರೆಗಳ ಈ ಬಗ್ಗೆ ಪ್ರಸಾರ ಟಿವಿಗಳಲ್ಲಿ ಸದ್ಯ ಪ್ರಸಾರ ಮಾಡುವುದರ ಮೂಲಕ ಜನ ಸಾಮಾನ್ಯರಿಗೆ ತಿಳಿಯಪಡೆಸುವ ಅಗತ್ಯವಿದೆ. ಕನ್ನಡದಲ್ಲಿಯೇ ಬಗೆಯ ವ್ಯಕ್ತಿ ಚಿತ್ರಗಳು ಸ್ವತಂತ್ರವಾಗಿ ಪ್ರಸಾರವಾದರೆ ಅದರ ಅನುಭವ ವಿಶೇಷವಾಗಿರುತ್ತದೆ. ಜನಪರ ಕಾಳಜಿಯುಳ್ಳ ದುಡ್ಡಿದ್ದವರು, ಜನಪರ ವಿಚಾರವಂತರು ಎಂದು ಫೋಜುಕೊಡುವ ಪ್ರೋಫೆಸರಗಳು, ಜನಪರ ಚಿಂತಕರ ಈ ನಿಟ್ಟಿನಲ್ಲಿ ಯೋಚನೆ ಮಾಡುವ ಅವಶ್ಯಕತೆಯಿದೆ. ಇಂಥ ಚಿತ್ರಗಳನ್ನು ಮಾಡಲು ಕನ್ನಡದಲ್ಲಿ ಸಾಕಷ್ಟುಜನ ಪ್ರತಿಭಾವಂತ ನಿರ್ದೇಶಕರಿದ್ದಾರೆ. ಕಲಾವಿದರಿಗಂತೂ ಕೊರತೆಯಿಲ್ಲ. ಕೊರತೆ ಇರುವುದು ಈ ಬಗೆಯ ಮನಸ್ಸು ಮತ್ತು ಕ್ರಿಯಾಶೀಲತೆ!