ಬೆಳಗಾವಿ : ಅಪಘಾತ ಘಟನೆಯಲ್ಲಿ 6 ವರ್ಷದ ಬಾಲಕನ ಮುಖದ ಹಾಗೂ ಮಸಿಲ್ಲಾ ಭಾಗದಿಂದ ಬೇರ್ಪಟ್ಟ ಭಾಗವವನ್ನು ಶಸ್ತ್ರ ಚಿಕಿತ್ಸೆಯ ಮೂಲಕ ಬಾಲಕನಿಗೆ ಅಳವಡಿಸುವ ಮೂಲಕ ವಿಜಯಾ ಅರ್ಥೋ ಟ್ರೋಮಾ ಸೇಂಟರ್‍ನ ವೈದ್ಯರು ಯಶಸ್ವಿಯಾಗಿದ್ದಾರೆ.
ಕಳೆದ ಜೂ. 13 ರಂದು ಖಾನಾಪೂರ ತಾಲೂಕಿನ ಬೆಟಗೇರಿ ಗ್ರಾಮದ 6 ವರ್ಷದ ಕಿಶನ್ ದತ್ತು ಗುರುವ ಎಂಬುವ ಯುವಕ ಆಟವಾಡುತ್ತಿರಾಗ ವಾಹನ ಹೊಡೆದ ಪರಿಣಾಮ ಮುಖದ ಒಂದು ಭಾಗ ತುಂಡಾಗಿ ಬಾಯಿಯಲ್ಲಿನ ಹಲ್ಲುಗಳ ತುಂಡು ಒಂದು ಬೇರ್ಪಟ್ಟಿತ್ತು. ಬಾಲಕನ ಮುಖದಿಂದ ಬೇರ್ಪಟ್ಟ ಭಾಗವನ್ನು ಬಾಲಕನ ಕುಟುಂಬದವರು ತೆಗೆದುಕೊಂಡು ಇಲ್ಲಿನ ಆಸ್ಪತ್ರೆಗೆ ದಾಖಲಿಸಿದ್ದರು. ವಿಜಯಾ ಅರ್ಥೋ ಟ್ರೋಮಾ ಸೇಂಟರ್‍ನ ಡಾ. ಕೌಸ್ತುಬ ದೇಸಾಯಿ ನೇತೃತ್ವದ ವೈದ್ಯರ ತಂಡ ಯಶಸ್ವಿ ಶಸ್ತ್ರ ಚಿಕಿತ್ಸೆ ಮೂಲಕ ಅಳವಡಿಸಿದ್ದಾರೆ. ಬಾಲಕನಿಗೆ ನೀರು ಇನ್ನೀತರ ಆಹಾರ ಪದಾರ್ಥಗಳನ್ನು ನೀಡಲಾಗುತ್ತಿದೆ. ಇದು ಉತ್ತರ ಕರ್ನಾಟಕದಲ್ಲಿ ಮೊದಲ ಪ್ರಕರಣ ಎನ್ನಲಾಗುತ್ತಿದೆ.
ಈ ಕುರಿತು ಆಸ್ಪತ್ರೆಯ ವೈದ್ಯ ಡಾ. ರವಿ ಪಾಟೀಲ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಯಾವುದೇ ಅಪಘಾತ ಸಂದರ್ಭದಲ್ಲಿ ಮನುಷ್ಯನ ದೇಹದ ಭಾಗದಿಂದ ಬೇರ್ಪಟ್ಟ ಭಾಗವನ್ನು ತೆಗೆದುಕೊಂಡು ಬಂದರೆ ಆತನಿಗೆ ಮರಳಿ ಅಳವಡಿಕೆ ಮಾಡಬಹುದಾಗಿದೆ. ಅಪಘಾತ ನಂತರದ 2 ಗಂಟೆಯಿಂದ ಕನಿಷ್ಠ 6 ಗಂಟೆಯೊಳಗೆ ದೇಹದ ಭಾಗಗಳನ್ನು ಮರಳಿ ವ್ಯಕ್ತಿಗೆ ಜೋಡಿಸಬಹುದಾಗಿದೆ. ಸಾರ್ವಜನಿಕರು ಅಪಘಾತ ಸಂದರ್ಭದಲ್ಲಿ ವ್ಯಕ್ತಿಗಳನ್ನು ಮಾತ್ರ ಆಸ್ಪತ್ರೆಗಳಿಗೆ ದಾಖಲಿಸುತ್ತಾರೆ ಆದರೆ ಅವರ ದೇಹದ ಭಾಗಗಳಿಂದ ಬೇರ್ಪಟ್ಟ ಭಾಗಗಳನ್ನು ತರುವುದಿಲ್ಲ. ದೇಹದ ಭಾಗಗಳನ್ನು ತೆಗೆದುಕೊಂಡು ಬಂದರೆ ಆ ವ್ಯಕ್ತಿಗೆ ಅಳವಡಿಕೆ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಡಾ. ಕೌಸ್ತುಬ ದೇಸಾಯಿ, ಡಾ. ಹಾಲೇಶ, ಡಾ. ಶ್ರೀಧರ, ಡಾ. ಶಶಿಧರ, ಬಸವರಾಜ ರೊಟ್ಟಿ ಸೇರಿದಂತೆ ಮುಂತಾದವರು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.