ಬೆಳಗಾವಿ.- ಶಿಕ್ಷಣ ಸಚಿವ ತನ್ವೀರ್ ಸೇಠ ಬೆಳಗಾವಿ ಸುದ್ಧಿಯ ಜೊತೆ ತಮಗಾದ ವೇದನೆಯನ್ನು ಹಂಚಿಕೊಂಡಿದ್ದಾರೆ ನಾನು ಸುಸಂಸ್ಕೃತ ಮನೆತನದಲ್ಲಿ ಹುಟ್ಟಿ ಬೆಳೆದಿದ್ದೇನೆ ನಾನು ಯಾವ ತಪ್ಪು ಮಾಡಿಲ್ಲ
ಮಾಡದ ತಪ್ಪಿಗೆ ನನ್ನನ್ನು ಹೊಣೆಗಾರರನ್ನಾಗಿ ಮಾಡಬೇಡಿ. ಆ ಆರೋಪವನ್ನು ನಾನು ಹೊತ್ತುಕೊಳ್ಳುವ ಮೂರ್ಖನಲ್ಲ.ಸತ್ಯಾಂಶ ಹೊರ ಬರಲಿ ಎಂದು ಹೇಳಿಕೊಂಡಿದ್ದಾರೆ
ದಯವಿಟ್ಟು ಇಲಾಖೆಯಲ್ಲಿ ಏನಾದರೂ ಲೋಪವಿದ್ದರೆ ಹೇಳಿ. ಖಂಡಿತವಾಗಿ ಅದನ್ನು ಸುಧಾರಣೆ ಮಾಡಿ ಒಳ್ಳೆಯದನ್ನು ಮಾಡೋಣ.ಅದನ್ನು ಬಿಟ್ಟು ತಮ್ಮ ತೇಜೋವಧೆ ಮಾಡುವದು ಸರಿಯಲ್ಲ ಎಂದು ಸಚಿವ ಸೇಠ ಪ್ರತಿಪಕ್ಷಗಳ ನಾಯಕರಲ್ಲಿ ಮನವಿ ಮಾಡಿಕೊಂಡಿದ್ದಾರೆ
ಟಿಪ್ಪು ಜಯಂತಿ ದಿನದಂದು ಅಶ್ಲೀಲ ಚಿತ್ರ ವೀಕ್ಷಣೆ ಪ್ರಕರಣದ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಅವರು ಒಂದು ಕ್ಷಣ ಭಾವುಕರಾದರು. ನಾನು ಅಂತಹ ತಪ್ಪು ಮಾಡುವ ವ್ಯಕ್ತಿಯಲ್ಲ. ನನ್ನ ಸಂಸ್ಕೃತಿ ಮತ್ತು ಮನೆಯ ಹಿರಿಯರು ಅಂತಹ ಪಾಠ ಹೇಳಿಕೊಟ್ಟಿಲ್ಲ.
ನನಗೆ ನನ್ನ ಜವಾಬ್ದಾರಿ ಏನೆಂಬುದು ಗೊತ್ತಿದೆ. ಅದನ್ನು ಅರಿತುಕೊಂಡು ಮುಖ್ಯಮಂತ್ರಿಗಳು ನನಗೆ ಶಿಕ್ಷಣ ಇಲಾಖೆಯ ಜವಾಬ್ದಾರಿ ನೀಡಿದ್ದಾರೆ. ಶಿಕ್ಷಣ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ತರುವ ನಿಟ್ಟಿನಲ್ಲಿ ಯಾವುದೇ ಸಲಹೆ, ಸೂಚನೆ ಇದ್ದರೆ ಕೊಡಿ. ಮಾರ್ಗದರ್ಶನ ಕೂಡ ಮಾಡಿ. ಖಂಡಿತವಾಗಿ ಅದರ ಬಗ್ಗೆ ಸಾಧಕ, ಬಾಧಕ ಕುರಿತು ಚಚರ್ೆ ಮಾಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳೋಣ. ಅದನ್ನು ಬಿಟ್ಟು ನಾನು ಅಲ್ಪಸಂಖ್ಯಾತ ಎನ್ನುವ ಕಾರಣದಿಂದ ನನ್ನ ಮೇಲೆ ಅನಗತ್ಯ ಗೂಬೆ ಕೂರಿಸುವ ಕೆಲಸ ಮಾಡಬೇಡಿ ಎಂದು ಸಚಿವ ಸೇಠ್ ಕೇಳಿಕೊಂಡರು.
ನನ್ನನ್ನು ಮತ್ತು ನನ್ನ ತಂದೆಯನ್ನು ಕಾಂಗ್ರೆಸ್ ಪಕ್ಷ ಬೆಳೆಸಿದೆ. ಹೀಗಾಗಿ ನಾನು ಯಾವಾಗಲೂ ಪಕ್ಷಕ್ಕೆ ನಿಷೆಯಾಗಿದ್ದವನು. ಈ ನಿಟ್ಟಿನಲ್ಲಿ ಈಗಾಗಲೇ ಮುಖ್ಯಮಂತ್ರಿಗಳು ತನಿಖೆ ನಡೆಸಿದ್ದಾರೆ. ನಾನೂ ಕೂಡ ವಾಸ್ತವತೆಯನ್ನು ಹೇಳಿದ್ದೇನೆ. ಮುಖ್ಯಮಂತ್ರಿಗಳು ತೆಗೆದುಕೊಂಡ ತೀರ್ಮಾಣಕ್ಕೆ ನಾನು ಬದ್ಧನಿರುತ್ತೇನೆ ಎಂದು ಸಚಿವ ತನ್ವೀರ್ ಸೇಠ್ ಸ್ಪಷ್ಟಪಡಿಸಿದರು.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಜವಾಬ್ದಾರಿಯನ್ನು ವಹಿಸಿಕೊಂಡ ನಂತರ ಹಲವು ಕಟ್ಟು ನಿಟ್ಟಿನ ಕ್ರಮವನ್ನು ತೆಗೆದುಕೊಂಡಿದ್ದೇನೆ. ಗುಣಮಟ್ಟದ ಶಿಕ್ಷಣ ಕೊಡುವ ನಿಟ್ಟಿನಲ್ಲಿ ಯಾವುದೇ ವಿಷಯಕ್ಕೆ ರಾಜೀ ಮಾಡಿಕೊಂಡಿಲ್ಲ. ಹೀಗಾಗಿ ನನ್ನ ಏಳಿಗೆಯನ್ನು ಸಹಿಸದ ಕೆಲವರು ನನ್ನ ವರ್ಚಸ್ಸಿಗೆ ಈ ಮೂಲಕ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆಂದು ದೂರಿದರು.
21ನೇ ಶತಮಾನಕ್ಕೆ ತಕ್ಕಂತೆ ಶಿಕ್ಷಣ ಇಲಾಖೆಯಲ್ಲಿ ವರ್ಗಾವಣೆ ನೀತಿ, ನೇಮಕಾತಿ ನಿಯಮ, ಪರೀಕ್ಷಾ ವ್ಯವಸ್ಥೆ ಮೊದಲಾದವುಗಳಲ್ಲಿ ಬದಲಾವಣೆ ತರುವ ಮೂಲಕ ಸಮಗ್ರ ಸುಧಾರಣೆ ತರಲು ಮುಂದಡಿ ಇಡಲಾಗಿದೆ ಎಂದು ಸಚಿವ ತನ್ವೀರ್ ಸೇಟ್ ಹೇಳಿದರು.
ಬದಲಾದ ಸನ್ನಿವೇಶಕ್ಕೆ ಅನುಗುಣವಾಗಿ ಸಮಗ್ರವಾಗಿ ಸುಧಾರಣೆ ತರಲು 1983ರ ಶಿಕ್ಷಣ ಕಾಯ್ದೆಗೆ ತಿದ್ದುಪಡಿ ತರಲು ಉದ್ದೇಶಿಸಲಾಗಿದೆ. ಜತೆಗೆ ಕರ್ನಾಟಕ ಶಿಕ್ಷಣ ನೀತಿ 2016ರನ್ನು ಜಾರಿಗೆ ತರಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್ಸೇಠ್ ತಿಳಿಸಿದ್ದಾರೆ. ಹೊಸ ಶಿಕ್ಷಣ ನೀತಿ ಜಾರಿಗೆ ತರಲು ಶಿಕ್ಷಣ ತಜ್ಞರು, ಸಾಹಿತಿಗಳು, ಖಾಸಗಿ ಶಿಕ್ಷಣ ಸಂಸ್ಥೆಗಳು ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಶಿಕ್ಷಣ ಇಲಾಖೆಯ ನಿವೃತ್ತ ಅಧಿಕಾರಿಗಳೊಂದಿಗೆ ಚರ್ಚಿಸಿ ಸಲಹೆಯನ್ನು ಕೂಡ ಪಡೆಯಲಾಗುವುದು ಎಂದರು. ಐಸಿಎಸ್ಸಿ ಹಾಗೂ ಸಿಬಿಎಸ್ಸಿ ಪಠ್ಯಕ್ರಮಕ್ಕೆ ಪೂರಕವಾಗಿ ಶೈಕ್ಷಣಿಕ ಬದಲಾವಣೆ ತರಲು ಉದ್ದೇಶಿಸಲಾಗಿದೆ. ಕೇವಲ ಅಂಕಗಳಿಕೆಗೆ ಶಿಕ್ಷಣ ಸೀಮಿತವಾಗದೆ ಸರ್ವೋತೋಮುಖ ಅಭಿವೃದ್ಧಿ ವಿದ್ಯಾರ್ಥಿಗಳಲ್ಲಿ ಕಂಡು ಬರಬೇಕು.
ಮತ್ತೊಬ್ಬರಿಗೆ ಸಹಕಾರಿಯಾಗುವ ಪರಿಪಾಠವನ್ನು ಶಿಕ್ಷಣ ನೀಡುವಂತಾಗಬೇಕು. ಶಿಕ್ಷಣ ಇಲಾಖೆಯಲ್ಲಿ ಸಮಗ್ರ ಮಾರ್ಪಾಡು ತರಲು ಹಲವು ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು
ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು. ಸಿಐಡಿ ತನಿಖೆಯ ಅಂತಿಮ ವರದಿ ಆಧರಿಸಿ ತಪ್ಪಿತಸ್ಥರ ವಿರುದ್ಧ ಯಾವುದೇ ಮುಲಾಜಿಗೆ ಒಳಗಾಗದೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಪಿಯುಸಿ ಪೂರಕ ಪರೀಕ್ಷೆ ಯಾವುದೇ ಗೊಂದಲಗಳಿಲ್ಲದೆ ಸುಗಮವಾಗಿ ನಡೆಯಿತು. 2.41 ಲಕ್ಷ ವಿದ್ಯಾರ್ಥಿಗಳು ಪೂರಕ ಪರೀಕ್ಷೆಗೆ ಹಾಜರಾಗಿದ್ದು, 5.86ಲಕ್ಷ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಹಾಗೂ ಫಲಿತಾಂಶ ಯಾವುದೇ ಸಮಸ್ಯೆಯಿಲ್ಲದೆ ಪ್ರಕಟವಾಗಿದೆ.
ಪದವಿ ಪೂರ್ವ ಪರೀಕ್ಷಾ ಮಂಡಳಿ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷಾ ಮಂಡಳಿಯಲ್ಲಿ 10 ವರ್ಷಗಳಿಗೂ ಹೆಚ್ಚು ಕಾಲ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ವರ್ಗಾವಣೆ ಮಾಡಲು ತೀರ್ಮಾನಿಸಲಾಗಿದೆ. ಅಧಿಕಾರಿ ಮತ್ತು ಸಿಬ್ಬಂದಿ ಬೆಂಗಳೂರಿನಲ್ಲೇ ಕೇಳಿದ ಸ್ಥಳಗಳಿಗೆ ವರ್ಗಾವಣೆ ಮಾಡಲಾಗುವುದು. ಪರೀಕ್ಷಾ ವ್ಯವಸ್ಥೆಯಲ್ಲಿ ಬಿಗಿಯಾದ ಹಿಡಿತ ಸಾಧಿಸುವ ಮೂಲಕ ಲೋಪ ಮರುಕಳಿಸದಂತೆ ಎಚ್ಚರಿಕೆ ವಹಿಸಲಾಗುತ್ತಿದೆ ಎಂದರು.
ಬೆಳಗಾವಿ ಜಿಲ್ಲೆ ಚಿಕ್ಕೋಡಿಯಲ್ಲಿ ಶಾಲಾ ಕಟ್ಟಡ ಕುಸಿದು ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದು, ಮೃತಪಟ್ಟ ವಿದ್ಯಾರ್ಥಿಗಳ ಪೋಷಕರಿಗೆ ತಲಾ 4 ಲಕ್ಷ ರೂ. ನೀಡಲಾಗಿದೆ. ಈ ಘಟನೆಯ ಹಿನ್ನೆಲೆಯಲ್ಲಿ ಲೋಕೋಪಯೋಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯ್ತಿ ರಾಜ್ ಇಲಾಖೆ, ನಗರಾಭಿವೃದ್ಧಿ, ರಾಷ್ಟ್ರೀಯ ಮಾಧ್ಯಮ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಶಾಲಾ ಕಟ್ಟಡದ ಸ್ಥಿತಿಗತಿ ಸಮೀಕ್ಷೆ ನಡೆಸಿ ವರದಿ ನೀಡಲು ಸೂಚಿಸಲಾಗಿದೆ. ಶಿಥಿಲಾವಸ್ಥೆ ತಲುಪಿರುವ ಕಟ್ಟಡಗಳನ್ನು ನೆಲಸಮ ಮಾಡಲು ಆದೇಶಿಸಲಾಗಿದೆ. ಕುಡಿಯುವ ನೀರು ಹಾಗೂ ಶೌಚಾಲಯ ನಿರ್ವಹಣೆ ಜವಾಬ್ದಾರಿಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ನಗರಾಭಿವೃದ್ಧಿ ಇಲಾಖೆ ವ್ಯಾಪ್ತಿಯ ಸ್ಥಳೀಯ ಸಂಸ್ಥೆಗಳಿಗೆ ವಹಿಸಿಕೊಡುವ ಪ್ರಸ್ತಾವನೆಯನ್ನು ಸರ್ಕಾರದ ಮುಂದಿಡಲಾಗಿದೆ ಎಂದು ತನ್ವೀರ್ಸೇಠ್ ತಿಳಿಸಿದರು.
ಶಾಲೆಗಳಿಗೆ ಸಂಬಂಧಿಸಿದ ಆಸ್ತಿ ಸಂರಕ್ಷಣೆಗೆ ಒತ್ತು ನೀಡಲಾಗುತ್ತಿದ್ದು, ಶಾಲೆಗಳಲ್ಲಿನ ಆಸ್ತಿಗೆ ಸಂಬಂಧಿಸಿದ ಖಾತೆ ಮತ್ತಿತರ ದಾಖಲಾತಿಗಳನ್ನು ಮಾಡಿಸಿಕೊಳ್ಳುವ ಅಭಿಯಾನವನ್ನು ಆರಂಭಿಸಲಾಗಿದೆ. ಒತ್ತುವರಿಯಾಗಿದ್ದರೆ ತೆರವಿಗೂ ಕೂಡ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು
2015ರ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ನೇಮಕಾತಿ ಸ್ಥಗಿತಗೊಳಿಸಿ ಹೊಸ ನೇಮಕಾತಿಯ ಪ್ರಕ್ರಿಯೆ ಪ್ರಾರಂಭಿಸುವುದರಿಂದ ವಯೋಮಿತಿ ಮೀರಿದ 268 ಅಭ್ಯರ್ಥಿಗಳಿಗೂ ಹೊಸ ನೇಮಕಾತಿಯಲ್ಲಿ ಅವಕಾಶ ನೀಡಲಾಗುವುದು. ಬಿಇಒ ಮತ್ತು ಪ್ರಾಂಶುಪಾಲರ ಹುದ್ದೆಗಳಿಗೆ ನೇರ ನೇಮಕಾತಿ ಮಾಡಲಾಗುವುದು. 806 ಪ್ರಾಂಶುಪಾಲರ ಹುದ್ದೆಗಳು ಖಾಲಿ ಇದ್ದು, 411 ಪ್ರಾಂಶುಪಾಲರ ಹುದ್ದೆಗೆ ಬಡ್ತಿ ಮೂಲಕ ಬಡ್ತಿ ಮಾಡಲಾಗುವುದು ಎಂದು ಸಚಿವರು ತಿಳಿಸಿದರು. ಧಾರವಾಡ ಸಂಚಾರಿ ಪೀಠವು 1727 ಪ್ರೌಢಶಾಲಾ ಶಿಕ್ಷಕರನ್ನು ರದ್ದುಪಡಿಸಿದ್ದ ಹಿನ್ನೆಲೆಯಲ್ಲಿ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಹೊಸದಾಗಿ ರೂಪಿಸಲಾಗುತ್ತಿದೆ. 2007ರ ಶಿಕ್ಷಕರ ವರ್ಗಾವಣೆ ನೀತಿಯಲ್ಲಿ ಗೊಂದಲವಿದ್ದು, ಈ ಬಾರಿ ಸರಳವಾಗಿ ವರ್ಗಾವಣೆ ಪ್ರಕ್ರಿಯೆಯನ್ನು ನಡೆಸಲಾಯಿ ಎಂದು ಸಚಿವರು ತಿಳಿಸಿದರು