ಬೆಂಗಳೂರು: ಮಂಗಳೂರು ಐಜಿಪಿ ಕಚೇರಿಯ ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಿಧಾನಸಭೆಯಲ್ಲಿ ಸುಮಾರು 4 ಗಂಟೆಗಳ ಕಾಲ ಸುದೀರ್ಘ ಉತ್ತರ ನೀಡಿದ ಸಿಎಂ ಸಿದ್ದರಾಮಯ್ಯ, ಗಣಪತಿ ಪ್ರಕರಣವನ್ನು ಸಿಬಿಐಗೆ ಕೊಡಲ್ಲ, ನಮಗೆ ಸಿಐಡಿ ಮೇಲೆ ನಂಬಿಕೆ ಇದೆ. ಆದರೂ ಉನ್ನತ ಮಟ್ಟದ ತನಿಖೆಯ ಅಗತ್ಯವಿರುವುದರಿಂದ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸುವುದಾಗಿ ಘೋಷಿಸಿದರು.
ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಯಲಿದ್ದು, ಪ್ರಕರಣದ ತನಿಖಾ ವರದಿ ನೀಡಲು ಆರು ತಿಂಗಳು ಕಾಲಮಿತಿ ನಿಗದಿಪಡಿಸಲಾಗಿದೆ ಎಂದರು.
ಚಿಕ್ಕಮಗಳೂರು ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಹಾಗೂ ಎಂಕೆ ಗಣಪತಿ ಆತ್ಮಹತ್ಯೆಯಿಂದ ತುಂಬಾ ದುಃಖವಾಗಿದೆ. ಇಬ್ಬರೂ ಸಹ ಯಂಗ್ ಆಫೀಸರ್ಸ್ಸ್. ಇಬ್ಬರ ಸಾವಿನಿಂದ ಪೊಲೀಸ್ ಇಲಾಖೆಗೆ ನಷ್ಟವಾಗಿದೆ. ಸರ್ಕಾರದ ವತಿಯಿಂದ ಎರಡೂ ಕುಟುಂಬಗಳಿಗೆ ಸಾಂತ್ವನ ಹೇಳುತ್ತೇನೆ. ಅಲ್ಲದೇ ಆತ್ಮಹತ್ಯೆ ಯಾವುದಕ್ಕೂ ಪರಿಹಾರವಲ್ಲ ಎಂದರು.
ರಾಜ್ಯದಲ್ಲಿ ಮಳೆ, ಬೆಳೆ ಆಗಲಿಲ್ಲ ಎಂದು ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲೆಲ್ಲ ಸ್ನೇಹಿತರು, ನೆಂಟರು ಎಲ್ಲರೂ ಆತ್ಮಸ್ಥೈರ್ಯ ತುಂಬಬೇಕು. ಆತ್ಮಹತ್ಯೆ ಯಾವುದಕ್ಕೂ ಪರಿಹಾರವಲ್ಲ.ಎಲ್ಲವನ್ನೂ ಜೀವನದಲ್ಲಿ ಎದುರಿಸಬೇಕಾಗುತ್ತದೆ. ದಯಮಾಡಿ ಯಾರೂ ಆತ್ಮಹತ್ಯೆ ಮಾಡಿಕೊಳ್ಳಬೇಡಿ. ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡರೆ ಸಾವಿರ ವರ್ಷ ಆಯುಸ್ಸು ಎಂದು ಸಿದ್ದರಾಮಯ್ಯ ಹೇಳಿದರು