ಗಾಂಧೀಜಿ ಮರೆದ ಕಾಂಗ್ರೆಸ್
ಐತಿಹಾಸಿಕ ಕಾಂಗ್ರೆಸ್ ಅಧಿವೇಶನದ ಸ್ಥಳಕ್ಕೆ ಭೇಟಿ ನೀಡದ ಕೈ ನಾಯಕರು
ಬೆಳಗಾವಿ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮ ಇಡೀ ದೇಶ, ರಾಜ್ಯದ ಮೂಲೆ ಮೂಲೆಯಲ್ಲೂ ಜನರಲ್ಲಿ ಮನೆ ಮಾಡಿದೆ. ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ನಡೆದ ಏಕೈಕ ಕಾಂಗ್ರೆಸ್ ಅಧಿವೇಶನ ನಡೆದ ಐತಿಹಾಸಿಕ ಸ್ಥಳವಾದ ಟಿಳಕವಾಡಿಯ ಕಾಂಗ್ರೆಸ್ ಭಾವಿ ಸ್ಥಳವನ್ನೇ ಕಾಂಗ್ರೆಸ್ ಮರೆದಿದೆ.
ಸ್ವಾತಂತ್ರ್ಯೋತ್ಸವದ ಅಂಗವಾಗಿ ಕಾಂಗ್ರೆಸ್ಸಿಗರು ಈ ಹಿಂದೆ ಕಾಂಗ್ರೆಸ್ ಭಾವಿಗೆ ಭೇಟಿ ನೀಡಿ, ಆವರಣದಲ್ಲಿರುವ ಮಹಾತ್ಮಗಾಂಧೀಜಿ ಪ್ರತಿಮೆಗೆ ಗೌರವ ಸಲ್ಲಿಸುವ ಸಂಪ್ರದಾಯ ನಡೆದುಕೊಂಡು ಬಂದಿತ್ತು. ಆದರೆ, ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂದರ್ಭದಲ್ಲೇ ಸ್ಥಳೀಯ ಕಾಂಗ್ರೆಸ್ ಘಟನಾನುಘಟಿ ನಾಯಕರಿಗೂ ಐತಿಹಾಸಿಕ ಕಾಂಗ್ರೆಸ್ ಭಾವಿ ಸ್ಥಳದ ವಿಚಾರವೇ ಮರೆತುಹೋದಂತಿದೆ.
ಜಿಲ್ಲೆಯ ಕಾಂಗ್ರೆಸ್ ನಾಯಕರೆಲ್ಲರೂ ಬೆಂಗಳೂರಿನಲ್ಲಿ ನಡೆದ ಕಾಂಗ್ರೆಸ್ ರ‌್ಯಾಲಿಯಲ್ಲಿ ಪಾಲ್ಗೊಂಡಿದ್ದರು. ಕಾಂಗ್ರೆಸ್ ನಾಯಕ ರಾಹುಲ ಗಾಂಧಿ ಅವರು ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವದಲ್ಲಿ ಭಾಗಿಯಾದ ಬಳಿಕ ಧಾರವಾಡದ ಗರಗದ ಖಾದಿ ಧ್ವಜ ಉತ್ಪಾದಿಸುವ ಕೇಂದ್ರಕ್ಕೆ ಭೇಟಿ ಕೊಟ್ಟು, ಗೌರವ ಸಲ್ಲಿಸಿದ್ದರು. ಆದರೆ, ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ನಡೆದ ಟಿಳಕವಾಡಿಯ ಕಾಂಗ್ರೆಸ್ ಅಧಿವೇಶನ ನಡೆದ ಐತಿಹಾಸಿಕ ಸ್ಥಳಕ್ಕೆ ಕಾಂಗ್ರೆಸ್‌ನ ಯಾವಬ್ಬ ನಾಯಕರು, ಕಾರ್ಯಕರ್ತರು ಭೇಟಿಕೊಟ್ಟು ಗೌರವ ಸಲ್ಲಿಸದೇ, ಗಾಂಧೀಜಿಯವರನ್ನೇ ಮರೆತುಬಿಟ್ಟಿರುವುದು ದುರ್ದೈವವಲ್ಲದೇ ಮತ್ತೇನು?