ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಉಕ್ಕಿ ಹರಿಯುತ್ತಿರುವ ನದಿಗಳ ನೀರಿನಿಂದ ನದಿ ತೀರದ ಗ್ರಾಮಗಳ ಜನಜೀವನ ಅಸ್ತವ್ಯಸ್ತವಾಗಿದೆ. ಬೆಳಗಾವಿಯಿಂದ ಗೋಕಾಕಿಗೆ ಹೋಗುವ ಬಹುತೇಕ ಎಲ್ಲ ಮಾರ್ಗಗಳು ಮುಳುಗಡೆಯಾಗಿದ್ದು ಗೋಕಾಕಿಗೆ ಹೋಗಲು, ಬರಲು ಈಗ ಒಂದೇ ಮಾರ್ಗ ಸುರಕ್ಷಿತವಾಗಿದೆ.
ಗೋಕಾಕಿನಲ್ಲಿ ಘಟಪ್ರಭೆಯ ಅಬ್ಬರ ಹೆಚ್ಚಾಗಿದ್ದು ಲೋಳಸೂರ ಸೇತುವೆ ಮತ್ತು ಗೋಕಾಕ್- ಕೊನ್ನೂರ್ ಗೆ ಹೋಗುವ ಫಾಲ್ಸ್ ರಸ್ತೆಯಲ್ಲಿರುವ ಮಾರ್ಕಂಡೆಯ ನದಿಯ ಸೇತುವೆಯೂ ಮುಳುಗಡೆಯಾಗಿದ್ದು ಈ ಎರಡೂ ಮಾರ್ಗಗಳಲ್ಲಿ ಸಂಚಾರ ಬಂದ್ ಆಗಿದೆ.
ಬೆಳಗಾವಿಯಿಂದ ಗೋಕಾಕಿಗೆ ಹೋಗಲು ಬರಲು ಈಗ ಒಂದೇ ದಾರಿ ಅದು ಯಾವುದು ಅಂದ್ರೆ, ಬೆಳಗಾವಿ- ಪಾಶ್ಚಾಪೂರ- ಶಹಾಬಂದರ್- ಗೊಡಚಿನಮಲ್ಕಿ ಗೋಕಾಕ್ ಈ ಮಾರ್ಗ ಒಂದೇ ಈಗ ಸುರಕ್ಷಿತವಾಗಿದೆ. ಇದೇ ಮಾರ್ಗದಿಂದ ಗೋಕಾಕಿನ ಜನ ಓಡಾಡಿಕೊಂಡಿದ್ದಾರೆ.
ಗೋಕಾಕ್ ನದಿ ತೀರದ ಪ್ರದೇಶಗಳಿಗೆ ನೀರು ನುಗ್ಗುತ್ತಿದೆ. ಗೋಕಾಕಿನ ಜನರಿಗೆ ಈಗ ಮತ್ತೆ ಜಲಪ್ರಳಯದ ಆತಂಕ ಶುರುವಾಗಿದ್ದು ಬೆಳಗಾವಿ ಜಿಲ್ಲಾಧಿಕಾರಿ, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಕಾಲಿಗೆ ಚಕ್ರ ಕಟ್ಟಿಕೊಂಡು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಓಡಾಡುತ್ತಿದ್ದಾರೆ.ಜನರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳುತ್ತಿದ್ದು ಪ್ರವಾಹದಿಂದ ಪೀಡಿತರಾಗುವ ಜನರ ಅನಕೂಲಕ್ಕಾಗಿ ಬೆಳಗಾವಿ ಜಿಲ್ಲಾಡಳಿತ ಸಹಾಯವಾಣಿ ಆರಂಭಿಸಿದ್ದು ಫೋನ್ ಕರೆಗಳನ್ನು ಸ್ವೀಕರಿಸಿ ಸಾರ್ವಜನಿಕರ ಸಹಾಯಕ್ಕೆ ಧಾವಿಸುತ್ತಿದ್ದಾರೆ.