*ಗೋಕಾಕ್: ಕೃಷಿ ಹೊಂಡಕ್ಕೆ ಬಿದ್ದು ಒಡಹುಟ್ಟಿದ ನಾಲ್ಕು ಕಂದಮ್ಮಗಳ ದುರ್ಮರಣ ; ಸಚಿವ ರಮೇಶ್ ಜಾರಕಿಹೊಳಿ ಸಂತಾಪ*
ಬೆಳಗಾವಿ: ಕೃಷಿ ಹೊಂಡದಲ್ಲಿ ಬಿದ್ದು ಒಂದೇ ಕುಟುಂಬದ ನಾಲ್ವರು ಕಂದಮ್ಮಗಳು ಮೃತಪಟ್ಟಿರುವ ಮನ ಕಲಕುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಅಜ್ಜನಕಟ್ಟಿ ಗ್ರಾಮದಲ್ಲಿ ನಡೆದಿದೆ.
ಅಜ್ಜನಕಟ್ಟಿ ಗ್ರಾಮದ ಕರೆಪ್ಪ ಜಕ್ಕನ್ನವರ ಹಾಗೂ ಮಹಾದೇವಿ ದಂಪತಿಯ ನಾಲ್ವರು ಮಕ್ಕಳು ಮೃತ ದುರ್ದೈವಿಗಳು. ಭಾಗವ್ವ ಜಕ್ಕನ್ನವರ(6), ತಾಯಮ್ಮ ಜಕ್ಕನ್ನವರ (5), ಮಾಳಪ್ಪ ಜಕ್ಕನ್ನವರ (4) ಹಾಗೂ ರಾಜಶ್ರೀ ಜಕ್ಕನ್ನವರ (2) ಮೃತಪಟ್ಟ ಮಕ್ಕಳು.
ಕೊರೊನಾ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಗ್ರಾಮದಲ್ಲಿನ ಮನೆ ತೊರೆದು ಜಕ್ಕನ್ನವರ ಕುಟುಂಬ ತೋಟದ ಮನೆಗೆ ಶಿಫ್ಟ್ ಆಗಿತ್ತು. ಕೃಷಿಗಾಗಿ ಕರೆಪ್ಪ ಜಕ್ಕನ್ನವರ ತೋಟದಲ್ಲಿ ಕೃಷಿ ಹೊಂಡ ನಿರ್ಮಿಸಿದ್ದರು. ಮೊಬೈಲ್ನಲ್ಲಿ ಆಟ ಆಡುತ್ತ ಕಂದಮ್ಮಗಳು ಕೃಷಿ ಹೊಂಡದ ಕಡೆ ಹೋಗಿದ್ದಾರೆ. ಮೊಬೈಲ್ ಕೈಯಿಂದ ಜಾರಿ ಹೊಂಡದಲ್ಲಿ ಬಿದ್ದಿದೆ. ನೀರಿನಲ್ಲಿ ಬಿದ್ದ ಮೊಬೈಲ್ ತೆಗೆದುಕೊಳ್ಳಲು ಹೋಗಿ ಒಬ್ಬರ ಮೇಲೊಬ್ಬರು ಬಿದ್ದು ನಾಲ್ಕೂ ಮಕ್ಕಳು ಮೃತಪಟ್ಟಿದ್ದಾರೆ. ಗೋಕಾಕ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಲ್ಕು ಮಕ್ಕಳನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ. ಈ ದುರ್ಘಟನೆಗೆ ಜಲಸಂಪನ್ಮೂಲ ಸಚಿವರಾದ *ಶ್ರೀ ರಮೇಶ್ ಜಾರಕಿಹೊಳಿ* ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.