Breaking News

ಮುಸ್ಲಿಂ ಮನೆತನವಿಲ್ಲ! ಆದರೂ ಹಿಂದೂ ಬಾಂಧವರಿಂದಲೇ ಮಸೀದಿ ನಿರ್ಮಾಣ

ಬೆಳಗಾವಿ: ಇದೊಂದು ಕುಗ್ರಾಮ.  ಆದರೂ, ಭಾವೈಕ್ಯತೆ ಎಂದರೆ ಹೇಗಿರಬೇಕು ಎಂಬುದನ್ನು ಈ ಗ್ರಾಮಸ್ಥರಿಂದ ಕಲಿಯಬೇಕು. ಈ ಗ್ರಾಮದಲ್ಲಿ ಒಂದೇ ಒಂದು ಮುಸ್ಲಿಂ ಮನೆತನ ನೆಲೆಸಿಲ್ಲ.  ಆದರೂ,  ಗ್ರಾಮದ ಹಿಂದೂ ಬಾಂಧವರೇ ಹಣ ಸಂಗ್ರಹಿಸಿ ಮಸೀದಿ ನಿರ್ಮಿಸುವ ಜತೆಗೆ, ಅದೇ ಮಸೀದಿಯಲ್ಲಿ ಪ್ರತಿವರ್ಷ ಮೊಹರಂ ಆಚರಿಸಸುವ ಮೂಲಕ ರಾಷ್ಟ್ರದ ಗಮನ ಸೆಳೆದಿದ್ದಾರೆ.

ಹೀಗೆ ಭಾವೈಕ್ಯತೆ ಸಾರುತ್ತಿರುವುದು ಯಾವ ಗ್ರಾಮ ಗೊತ್ತೇ?

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಯಲ್ಲಮ್ಮನಗುಡ್ಡದಿಂದ ಐದೇ ಕಿ.ಮೀ. ಅಂತರದಲ್ಲಿರುವ ಹರ್ಲಾಪುರ ಎಂಬ ಪುಟ್ಟ ಗ್ರಾಮ.

‘ಹರ್ಲಾಪುರ’ ಸುಮಾರು ಒಂದು ಸಾವಿರ ಜನಸಂಖ್ಯೆ ಹೊಂದಿದ ಪುಟ್ಟ ಗ್ರಾಮ. ಆದರೆ, ಭಾವೈಕ್ಯದ ವಿಷಯದಲ್ಲಿ ಎತ್ತರದ ಸ್ಥಾನದಲ್ಲಿದೆ. ಗ್ರಾಮದ ಹಿಂದೂ ಧರ್ಮೀಯರು ಜಾತಿ– ಬೇಧವನ್ನು ಮರೆತು ಪರಂಪರಾಗತವಾಗಿ ಮೊಹರಂ ಹಬ್ಬವನ್ನು ಆಚರಿಸಿಕೊಂಡು ಬಂದಿದ್ದಾರೆ. ಇಲ್ಲಿ ದೇವರನ್ನು (ಪಂಝಾ) ಪ್ರತಿಷ್ಠಾಪಿಸುವುದರಿಂದ ಹಿಡಿದು, ಹೊಳೆಗೆ ಕಳುಹಿಸುವವರೆಗೆ ಎಲ್ಲ ಜವಾಬ್ದಾರಿಗಳನ್ನೂ ನಿರ್ವಹಿಸುವವರು ಹಿಂದೂಗಳೇ ಎಂಬುದು
ಇನ್ನೊಂದು ವಿಶೇಷ.

ಹರ್ಲಾಪುರ ಗ್ರಾಮಸ್ಥರು ಮೊಹರಂ ಹಬ್ಬ ಸಮೀಪಿಸುತ್ತಲೇ ತಮ್ಮ ಮನೆಗಳನ್ನು ಸಿಂಗರಿಸುತ್ತಾರೆ. ಪ್ರತಿದಿನ ಕೆಲ ಸಮಯವನ್ನು ಮೀಸಲಿಟ್ಟು ಪರಸ್ಪರರು ಹಬ್ಬದ ಸಿದ್ಧತೆಯಲ್ಲಿ ಕೈಜೋಡಿಸುತ್ತಾರೆ. ಯಾವೊಬ್ಬ ಮುಸ್ಲಿಂ ಸಮುದಾಯದವರ ಸಹಾಯವನ್ನೂ ಪಡೆಯದೇ ವಿಜೃಂಭಣೆಯಿಂದ ಮೊಹರಂ ಆಚರಿಸುತ್ತಾರೆ. ಈ ಸಂಭ್ರಮದ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ವಿವಿಧ ಜಿಲ್ಲೆಗಳಿಂದ ಭಕ್ತಾದಿಗಳು ಬರುವುದು ಉಂಟು!

ಗ್ರಾಮದಲ್ಲಿ ಮೊಹರಂ ಹಬ್ಬದ ಕಡೇ ದಿನ ನಡೆಯುವ ಮೆರವಣಿಗೆಯಲ್ಲಿ ಗ್ರಾಮಸ್ಥರಿಂದ ಜಾನಪದ ಕಲೆಗಳು ಅನಾವರಣಗೊಳ್ಳುತ್ತವೆ. ಲೇಜಿಮ್, ಹೆಜ್ಜೆ ಮೇಳ, ಡೊಳ್ಳುಕುಣಿತ, ಕೋಲಾಟ, ಕರಬಲ್ ಕುಣಿತ, ಭಜನೆ, ಕೀರ್ತನೆ, ಸಂಗೀತ ಸೇರಿದಂತೆ ಗ್ರಾಮೀಣ ಸಂಸ್ಕೃತಿಯನ್ನು ಬಿಂಬಿಸುವ ವಿವಿಧ ಜಾನಪದ ಶೈಲಿಯ ನೃತ್ಯಗಳು ಪ್ರದರ್ಶನಗೊಳ್ಳುತ್ತವೆ. ಇದಕ್ಕಾಗಿ ಗ್ರಾಮಸ್ಥರು ಒಂದು ತಿಂಗಳ ಮುಂಚೆಯಿಂದಲೇ ಸಿದ್ಧತೆಗಳನ್ನು ನಡೆಸುತ್ತಾರೆ.

‘ಮುಸ್ಲಿಂ ಬಾಂಧವರು ಇಲ್ಲದ ಊರಿನಲ್ಲಿ ಮೊಹರಂ ಹಬ್ಬ ಆಚರಿಸಿದರೆ ಸಮೃದ್ಧಿ ನೆಲೆಸುತ್ತದೆ ಎಂಬುದು ನಮ್ಮ ಪೂರ್ವಿಕರ ನಂಬಿಕೆ. ಈ ಹಿನ್ನೆಲೆಯಲ್ಲಿ ನಾವು ಮೊಹರಂ ಆಚರಿಸುತ್ತ ಬಂದಿದ್ದೇವೆ. ದೇವರು ಕೂಡ ನಮ್ಮ ಇಷ್ಟಾರ್ಥಗಳನ್ನು ಈಡೇರಿಸಿದ್ದರಿಂದ ನಂಬಿಕೆ ಮತ್ತಷ್ಟು ಬಲಗೊಂಡಿದೆ. ದೇವರು ನಮಗೆ ಶಕ್ತಿ ಕೊಡುವವರೆಗೂ ಈ ಸೇವೆಯನ್ನು ಮುಂದುವರಿಸುತ್ತೇವೆ. ಮುಸ್ಲಿಮರು ನಮ್ಮ ಕಾರ್ಯಕ್ಕೆ ಅಭಿನಂದಿಸುತ್ತ ಬಂದಿದ್ದಾರೆ’ ಎಂದು ಗ್ರಾಮಸ್ಥರಾದ ಮುದಕಪ್ಪ ಹಳಕಟ್ಟಿ ಮತ್ತು ಮುದೆಪ್ಪ ಹಡಪದ ಹೆಮ್ಮೆಯಿಂದ ಹೇಳುತ್ತಾರೆ.
ಮುಸ್ಲಿಂ ಸಮುದಾಯದವರ ಅನುಪಸ್ಥಿತಿಯ ನಡುವೆಯೂ ಮೊಹರಂ ಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಂಡು ಬಂದಿರುವ ಹರ್ಲಾಪುರ ಗ್ರಾಮಸ್ಥರ ಕಾರ್ಯ ಪ್ರಶಂಸನೀಯ.
ಮೊಹರಂ ಸಂದರ್ಭದಲ್ಲಿ ದೇವರನ್ನು ಪೂಜಿಸಲು ಮಾತ್ರ ಹರ್ಲಾಪುರ ಗ್ರಾಮಸ್ಥರ ಸೇವೆ ಸೀಮಿತವಾಗಿಲ್ಲ. ಇಲ್ಲಿನ ಗ್ರಾಮಸ್ಥರೆಲ್ಲರೂ ದೇಣಿಗೆ ರೂಪದಲ್ಲಿ ಹಣ ಸಂಗ್ರಹಿಸಿ, ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಮಸೀದಿ ಸಹ ನಿರ್ಮಿಸಿದ್ದಾರೆ. ಈ ಮೂಲಕ ಸಮಾಜಕ್ಕೆ ವಿಶಿಷ್ಟ ಸಂದೇಶ ಸಾರಿದ್ದಾರೆ. ದಕ್ಷಿಣ ಭಾರತದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಯಲ್ಲಮ್ಮನಗುಡ್ಡದಿಂದ ಕೇವಲ 4 ಕಿ.ಮೀ. ಹಾಗೂ ಹಿರೇಕುಂಬಿಯ ಮಕ್ತುಮ್‌ಹುಸೇನಿ ದರ್ಗಾದಿಂದ 5 ಕಿ.ಮೀ. ಅಂತರದಲ್ಲಿ ಹರ್ಲಾಪುರ ಗ್ರಾಮವಿದೆ. ಈ ಗ್ರಾಮದ ಸುತ್ತಮುತ್ತಲಿನಲ್ಲಿ ಹತ್ತು– ಹಲವು ಧಾರ್ಮಿಕ ಕ್ಷೇತ್ರಗಳೂ ಇವೆ.

ವಿಶಿಷ್ಟ ಬೇವಿನ ಮರ
ಈ ಗ್ರಾಮದ ಮಸೀದಿಯ ಪಕ್ಕದಲ್ಲೊಂದು ಬೇವಿನ ಮರವಿದೆ. ಈ ಮರದ ತಪ್ಪಲು ತಿನ್ನಿಸಿದರೆ, ಯಾವುದೇ ವಿಷಸರ್ಪದಿಂದ ಕಡಿತಕ್ಕೊಳಗಾದ ವ್ಯಕ್ತಿ ಕ್ಷಣ ಮಾತ್ರದಲ್ಲಿ ಗುಣಮುಖನಾಗುತ್ತಾನೆ ಎಂಬ ನಂಬಿಕೆಯಿದೆ. ಪ್ರಚಾರದ ಕೊರತೆಯಿಂದಾಗಿ ಈ ಮರದ ಮಹತ್ವ ಅಷ್ಟಾಗಿ ಎಲ್ಲರಿಗೂ ತಿಳಿದಿಲ್ಲ.

‘ಹರ್ಲಾಪುರ ಗ್ರಾಮದ ಬೇವಿನ ಮರಕ್ಕೆ ವಿಶಿಷ್ಟ ಶಕ್ತಿಯಿದೆ. ಈ ಮರದ ತಪ್ಪಲು ತಿಂದು ವಿಷಸರ್ಪದಿಂದ ಕಡಿತಕ್ಕೊಳಗಾದ ನೂರಾರು ಜನರು ಕೆಲಹೊತ್ತಿನಲ್ಲೇ ಚೇತರಿಸಿಕೊಂಡಿದ್ದಾರೆ. ಆದರೆ, ಈ ತಪ್ಪಲು ತಿಂದ ನಂತರ 24 ಗಂಟೆಗಳ ಕಾಲ ನಿದ್ರೆ ಮಾಡಬಾರದು. ಉಪಹಾರ ಸೇವಿಸಬಾರದು. ನೂರಾರು ಜನರಿಗೆ ಮರುಜೀವ ಈ ಮರವನ್ನು ನಾವೆಲ್ಲ ಭಕ್ತಿಯಿಂದ ಪೂಜಿಸುತ್ತೇವೆ’ ಎಂದು ಎನ್ನುತ್ತಾರೆ ಗ್ರಾಮಸ್ಥ ನಾಗಪ್ಪ ವಕ್ಕುಂದ.

 

Check Also

ಲಕ್ಷ ರೂ ಸಾಲದಲ್ಲಿ, ಫಿಫ್ಟೀ ,ಗುಳುಂ, ಸಾವಿರಾರು ಮಹಿಳೆಯರು ಗರಂ….!!!!

ಮನೆಗೆ ಬಂದು ಒಂದು ಲಕ್ಷ ರೂ ಸಾಲ ಕೊಡ್ತಿವಿ ಅಂತಾ ಹೇಳಿದ್ರೆ ಯಾರಾದ್ರೂ ಬೇಡ ಅಂತಾರಾ…? ಮೈಕ್ರೋ ಫೈನಾನ್ಸ್ ಮೂಲಕ …

Leave a Reply

Your email address will not be published. Required fields are marked *