Breaking News

ರೊವಾಂಡಾ ದೇಶದಲ್ಲಿ ಜಾರಕಿಹೊಳಿ ಸ್ಪೋರ್ಟ್ಸ್ ಸಾಹುಕಾರ್ ಘೋಷಣೆ..

 

ಇಂಡಿಯನ್ ಕ್ರೀಡಾ ಶಾಲೆ ಸ್ಥಾಪನೆ: ಸಚಿವ ಸತೀಶ್ ಜಾರಕಿಹೊಳಿ

ಬೆಳಗಾವಿ,- ರೊವಾಂಡಾ ದೇಶದಲ್ಲಿ ಕೃಷಿ, ಆರೋಗ್ಯ, ಶಿಕ್ಷಣ, ಗಣಿಗಾರಿಕೆ, ಇಂಧನ ಹಾಗೂ ಮೂಲಸೌಕರ್ಯಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆಗೆ ವಿಫುಲ ಅವಕಾಶಗಳಿವೆ. ಕೈಗಾರಿಕೋದ್ಯಮಿಗಳು ಮತ್ತು ಬಂಡವಾಳ ಹೂಡಿಕೆದಾರರಿಗೆ ಅನುಕೂಲವಾಗುವಂತಹ ಉದ್ಯಮಸ್ನೇಹಿ ವಾತಾವರಣ ಹೊಂದಿದ್ದು, ಇಲ್ಲಿನ ಹೂಡಿಕೆದಾರರಿಗೆ ಮುಕ್ತ ಸ್ವಾಗತವಿದೆ ಎಂದು ಪೂರ್ವ ಆಫ್ರಿಕಾದ ರೊವಾಂಡಾ ದೇಶದ ಹೈಕಮೀಶನರ್ ಶ್ರೀಮತಿ ಜಾಕ್ವೆಲಿನ್ ಮುಕಂಜಿರಾ(Mrs.Jacqueline Mukangira) ಅವರು ತಿಳಿಸಿದರು.

ನಗರದ ಖಾಸಗಿ ಹೋಟೆಲ್ ನಲ್ಲಿ ಭಾನುವಾರ(ಸೆ.8) ಜರುಗಿದ ಸ್ಥಳೀಯ ಉದ್ಯಮಿಗಳು ಹಾಗೂ ಬಂಡವಾಳ ಹೂಡಿಕೆದಾರರ ಸಭೆಯಲ್ಲಿ ಅವರು ಮಾತನಾಡಿದರು.

ಆಫ್ರಿಕಾದಲ್ಲಿ ರೊವಾಂಡಾ ದೇಶ ಇ-ಕಾಮರ್ಸ್, ಇ-ಸರ್ವೀಸ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕ್ಷಿಪ್ರ ಪ್ರಗತಿ ಸಾಧಿಸುತ್ತಿದೆ.
ದೇಶದಲ್ಲಿ ಭ್ರಷ್ಟಾಚಾರಕ್ಕೆ ಯಾವುದೇ ಅವಕಾಶವಿಲ್ಲ; ವ್ಯಾಪಾರ-ವಹಿವಾಟು ನಡೆಸಲು ಅನುಕೂಲವಾಗುವಂತೆ ವ್ಯಾಪಾರ ಸ್ನೇಹಿ ವಾತಾವರಣವನ್ನು ದೇಶ ಹೊಂದಿದೆ.
ಬಂಡವಾಳ ಹೂಡಿಕೆಗೆ ಅನುಕೂಲವಾಗುವಂತಹ ತೆರಿಗೆ ಪದ್ಧತಿ ಜಾರಿಯಲ್ಲಿದೆ. ಪಾರದರ್ಶಕ ಹಾಗೂ ಉದ್ಯೋಗ ಸ್ನೇಹಿ ವಾತಾವರಣದ ಜತೆಗೆ ಆಫ್ರಿಕಾದಲ್ಲಿ ಅತ್ಯಂತ ಸುರಕ್ಷಿತ ದೇಶವಾಗಿದೆ.
ಆಫ್ರಿಕಾದಲ್ಲಿಯೇ ಎಕಾನಮಿ‌ ಬೆಳವಣಿಗೆಯಲ್ಲಿ‌ ಕಳೆದ ಹನ್ನೊಂದು ವರ್ಷಗಳಿಂದ ರೊವಾಂಡಾ ಮುಂಚೂಣಿಯಲ್ಲಿದೆ.

ಉದ್ಯಮ ಸ್ಥಾಪನೆಗೆ ಆರು ಗಂಟೆ ಸಾಕು:

ರೊವಾಂಡಾ ದೇಶದಲ್ಲಿ ಒಂದು‌ ಉದ್ಯಮ ಆರಂಭಿಸಲು ಕೇವಲ ಆರು ಗಂಟೆಗಳು ಸಾಕು. ಒನ್ ಸ್ಟಾಪ್ ಸೆಂಟರ್ ಮಾದರಿಯಲ್ಲಿ ಎರಡು ನೂರು ಬಗೆಯ ಸರಕಾರಿ ಅನುಮತಿಗಳನ್ನು ಉಚಿತವಾಗಿ ಸರಕಾರ ನೀಡಲಿದೆ ಎಂದು ಜಾಕ್ವೆಲಿನ್ ಮುಕಂಜಿರಾ(Mrs.Jacqueline Mukangira) ಅವರು ತಿಳಿಸಿದರು.

ಆಫ್ರಿಕಾದಲ್ಲಿ ಬಂಡವಾಳ ಹೂಡಿಕೆ ಮಾಡಲು ಬಯಸುವವ ಉದ್ಯಮಿಗಳ ಮೊದಲ‌ ಆದ್ಯತೆ ರೊವಾಂಡಾ ದೇಶ ಆಗಿರಲಿ ಎಂದರು.
ಇಂಟರ್ನೆಟ್ ಸೌಲಭ್ಯ, ವಿದ್ಯುತ್ ಸಂಪರ್ಕ, ಶುದ್ಧ ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯಗಳು ಲಭ್ಯವಿವೆ.
ದೇಶದ ಸಂವುಧಾನವು ಮಹಿಳಾ ಸಬಲೀಕರಣ ಹಾಗೂ ಲಿಂಗ ಸಮಾನತೆಗೆ ಆದ್ಯತೆಯನ್ನು ನೀಡಿರುವುದರಿಂದ ಶೇ.50 ಕ್ಕೂ ಅಧಿಕ ಮಹಿಳೆಯರು ಸಂಸದರಾಗಿದ್ದಾರೆ.
ಮೂಲಸೌಕರ್ಯ, ರಿಯಲ್ ಎಸ್ಟೇಟ್, ಕೃಷಿ, ಎನರ್ಜಿ ಟೂರಿಸಂ, ಆರೋಗ್ಯ, ಗಣಿಗಾರಿಕೆ, ಶಿಕ್ಷಣ ಮತ್ತಿತರ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆಗೆ ವಿಫುಲ ಅವಕಾಶಗಳಿವೆ.
ಭಾರತದಿಂದ ಸ್ಟೀಲ್, ಔಷಧ ಸಾಮಗ್ರಿ ಮತ್ತಿತರ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿದೆ.
ಗುಜರಾತ್, ಮಹಾರಾಷ್ಟ್ರ ರಾಜ್ಯಗಳಿಗೆ ಕಾಫಿ ಮತ್ತಿತರ ವಸ್ತುಗಳನ್ನು ರಫ್ತು ಮಾಡುತ್ತಿದೆ.

ಭಾರತ-ರೊವಾಂಡಾ ನಡುವಿನ ದ್ವಿಪಕ್ಷೀಯ ಸಂಬಂಧ ಇದೇ ರೀತಿ ಸದೃಢವಾಗಿ ಮುಂದುವರಿಯಬೇಕಿದೆ. ಎರಡೂ ದೇಶಗಳ ಸಂಬಂಧವು ಮಹತ್ವದ್ದಾಗಿದೆ.
ವ್ಯಾಪಾರ, ಕೃಷಿ, ಶಿಕ್ಷಣ, ಭದ್ರತೆ, ಇಂಧನ, ಸಂಶೋಧನಾ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆ ಮಾಡುವ ಭಾರತ ದೇಶದ ಉದ್ದಿಮೆದಾರರಿಗೆ ಮುಕ್ತ‌ ಅವಕಾಶ ನೀಡುತ್ತಿದೆ.
ಕಾಮನ್ ವೆಲ್ತ್ ಸದಸ್ಯ ರಾಷ್ಟ್ರಗಳ ಜನರಿಗೆ ವಿಸಾ ಸರಳವಾಗಿ ನೀಡುತ್ತಿದೆ. ವಿಸಾ ಆನ್ ಅರೈವಲ್ ವ್ಯವಸ್ಥೆ ಕಲ್ಪಿಸಿದೆ.

ಪೂರ್ವ ಆಫ್ರಿಕಾ ದೇಶಗಳ ಪೈಕಿ ರೊವಾಂಡಾ ದೇಶವು ವ್ಯಾಪಾರ-ವಹಿವಾಟು ಹಾಗೂ ಬಂಡವಾಳ ಹೂಡಿಕೆಗೆ ಅತ್ಯಂತ ಸೂಕ್ತವಾಗಿದೆ. ಆದ್ದರಿಂದ ಬೆಳಗಾವಿ ಜಿಲ್ಲೆಯ ಕೈಗಾರಿಕೋದ್ಯಮಿಗಳು ಇದರ ಪ್ರಯೋಜನ ಪಡೆದುಕೊಂಡು ಭಾರತ-ರೊವಾಂಡಾ ನಡುವಿನ ವ್ಯಾಪಾರ ಸಂಬಂಧವನ್ನು ಮತ್ತಷ್ಟು ಬಲಪಡಿಸಬೇಕು ಎಂದು ಆಹ್ವಾನ ನೀಡಿದರು.
ರೊವಾಂಡಾದಲ್ಲಿ ಉದ್ದಿಮೆ ಸ್ಥಾಪಿಸಲು ಮುಂದಾಗಿರುವ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಕೃತಜ್ಞತೆಯನ್ನು ಅವರು ಸಲ್ಲಿಸಿದರು.

ರೊವಾಂಡದಲ್ಲಿ ಕ್ರೀಡಾ ಶಾಲೆ ಸ್ಥಾಪನೆ-ಸಚಿವ ಸತೀಶ್ ಜಾರಕಿಹೊಳಿ:

ರೊವಾಂಡಾ ದೇಶದಲ್ಲಿ “ಇಂಡಿಯನ್ ಕ್ರೀಡಾ ಶಾಲೆ”ಯನ್ನು ಆರಂಭಿಸಲು ತಾವು ಉದ್ಧೇಶಿಸಿದ್ದು, ಇದಕ್ಕಾಗಿ ಅಗತ್ಯವಿರುವ ಜಾಗೆಯನ್ನು ಕೂಡ ಗುರುತಿಸಲಾಗಿದೆ ಎಂದು ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ತಿಳಿಸಿದರು.
ಆ ದೇಶದಲ್ಲಿ ಸಾಕಷ್ಟು ಉದ್ದಿಮೆಗಳ ಸ್ಥಾಪನೆಗೆ ಅವಕಾಶಗಳಿವೆ. ಬೆಳಗಾವಿ ಜಿಲ್ಲೆಯ ಉದ್ಯಮಿದಾರರು ಇದರ ಬಗ್ಗೆ ಆಸಕ್ತಿ ತೋರಿಸಬೇಕು ಎಂದು ಸಲಹೆ ನೀಡಿದರು.

ಆಫ್ರಿಕಾ ಇತ್ತೀಚೆಗೆ ಕೆಲವು ಕ್ಷೇತ್ರಗಳಲ್ಲಿ ಸಾಕಷ್ಟು ಅಭಿವೃದ್ಧಿ ಸಾಧಿಸಿದೆ. ಸ್ವಚ್ಛತೆ ವಿಷಯದಲ್ಲಿಯೂ ಹೆಚ್ಚಿನ ಪ್ರಗತಿ ಸಾಧಿಸಿದ್ದು, ಶಿಕ್ಷಣ ಕ್ಷೇತ್ರದಲ್ಲೂ ಸಾಧನೆಯತ್ತ ದಾಪುಗಾಲು ಹಾಕುತ್ತಿದೆ.
ರೊವಾಂಡಾ ಆರೋಗ್ಯಕರ ವಾತಾವರಣ ಹೊಂದಿದೆ. ಸಂಚಾರ ನಿಯಮಗಳನ್ನು ಜನರು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ.

ಈ ಭಾಗದ ಉದ್ಯಮಿಗಳು ಸಿಂಗಾಪುರ ಕಡೆ ಪ್ರವಾಸ ಹೋದಾಗ ರೊವಾಂಡಾ ದೇಶಕ್ಕೆ ತಪ್ಪದೇ ಭೇಟಿ ನೀಡಬೇಕು ಎಂದರು.

ಉದ್ಯಮಿದಾರರಿಗೆ ರೊವಾಂಡ ದೇಶದಲ್ಲಿ ಹೂಡಿಕೆಗೆ ಲಭ್ಯವಿರುವ ಅವಕಾಶಗಳ ಕುರಿತು ಅರಿತುಕೊಳ್ಳಲು ಉದ್ಯಮಿಗಳ ಜತೆಗಿನ‌ ಸಂವಾದ ಅನುಕೂಲವಾಗಲಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಅಭಿಪ್ರಾಯಪಟ್ಟರು.

ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಭಾರತ-ರೊವಾಂಡಾ ದೇಶಗಳ ಮಧ್ಯೆ ವ್ಯವಹಾರಿಕ ಸಂಬಂಧ ಗಟ್ಟಿಗೊಳ್ಳಲಿದೆ ಎಂದು ಆಶಿಸಿದರು.
ಕರ್ನಾಟಕ ರಾಜ್ಯ ಮತ್ತು ಬೆಳಗಾವಿ ಜಿಲ್ಲೆಯು ವಾಣಿಜ್ಯ, ಕೈಗಾರಿಕೋದ್ಯಮ ಕ್ಷೇತ್ರದಲ್ಲಿ ಅಗಾಧ ಸಾಧನೆಗೈದಿರುತ್ತವೆ. ರೊವಾಂಡಾ ದೇಶದಲ್ಲಿ ಲಭ್ಯವಿರುವ ಅವಕಾಶಗಳನ್ನು ಬಳಸಿಕೊಂಡು ಬಂಡವಾಳ ಹೂಡಿಕೆಗೆ ಸಿದ್ಧರಿದ್ದಾರೆ ಎಂದರು.

ಆರಂಭದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಸತ್ಯನಾರಾಯಣ ಭಟ್, ಬೆಳಗಾವಿ ಜಿಲ್ಲೆಯ ಕೈಗಾರಿಕೆ, ಶಿಕ್ಷಣ, ಆರೋಗ್ಯ, ಆಟೋಮೊಬೈಲ್, ಸಕ್ಕರೆ ಉದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿನ ಸಾಧನೆಯ ಕುರಿತು ವಿವರಿಸಿದರು.
ಇಲ್ಲಿನ ಕೈಗಾರಿಕೋದ್ಯಮಿಗಳು ರೊವಾಂಡಾದಲ್ಲಿ ಬಂಡವಾಳ ಹೂಡಿಕೆ ಹಾಗೂ ವಿವಿಧ ಬಗೆಯ ಉದ್ಯಮಗಳನ್ನು ಆರಂಭಿಸಲು ಉತ್ಸುಕರಾಗಿದ್ದಾರೆ ಎಂದು ತಿಳಿಸಿದರು.

ಶಾಸಕ ಆಸಿಫ್(ರಾಜು) ಸೇಠ್, ನಗರ ಪೊಲೀಸ್ ಆಯುಕ್ತರಾದ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಮತ್ತಿತರರು ಉಪಸ್ಥಿತರಿದ್ದರು.
ಬೆಳಗಾವಿ ಜಿಲ್ಲೆಯ ಕೈಗಾರಿಕೋದ್ಯಮಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
****

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *