ಬೆಳಗಾವಿ-14ನೇ ವಿಧಾನಸಭೆ ಅವಧಿ ಮುಕ್ತಾಯಗೊಳ್ಳುವ ಕಾಲ ಸಮೀಪಿಸುತ್ತಿರುವಂತೆಯೇ ಚುನಾವಣೆ ಸಿದ್ಧತೆ ಕಾವು ರಾಜ್ಯದಲ್ಲಿ ದಿನದಿಂದ ದಿನಕ್ಕೆ ಏರುತ್ತಿದೆ. ಯಾವ ಕ್ಷೇತ್ರಕ್ಕೆ ಯಾರು ಅಭ್ಯರ್ಥಿಯಾಗಬಹುದೆಂಬ ಲೆಕ್ಕಾಚಾರ ಎಲ್ಲ ರಾಜಕೀಯ ಪಕ್ಷಗಳಲ್ಲಿ ನಿರಂತರ ಚರ್ಚೆ ವಿಷಯವಾಗಿ ಸಾಗಿದೆ. ಕೂಡಿಸುವ, ಕಳೆಯುವ, ಗುಣಿಸುವ ಈ ರಾಜಕೀಯ ಲೆಕ್ಕದಲ್ಲಿ ಯಾರಿಗೂ ನಾಲ್ಕೆರಡ್ಲೆ ಎಂಟು, ಎಂಟರಲ್ಲಿ ಎರಡು ಕಳೆದರೆ ಆರು ಎಂಬ ನಿರ್ದಿಷ್ಟ ಉತ್ತರ ಸಿಗದಂತಾಗಿರುವುದು ಪ್ರಸ್ತುತ ರಾಜಕೀಯ ಅಚ್ಚರಿಗಳಲ್ಲಿ ಒಂದಾಗಿರುವಂತೆ ಪ್ರಜ್ಞಾವಂತ ಆಸಕ್ತರಲ್ಲಿ ಗೋಚರಿಸುತ್ತಿದೆ.
ಪಕ್ಷದಿಂದ ಬೆಳಗಾವಿ ಜಿಲ್ಲೆಯಲ್ಲಿ 12ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಬೇಕೆಂದು ಶತಾಯ, ಗತಾಯ ಚಿಂತನೆಯಲ್ಲಿ ತೊಡಗಿರುವ ವಿಷಯವಂತೂ ಬಹಿರಂಗ ಸತ್ಯವಾಗಿದೆ. ಇಂಥ ಅನಿಶ್ಚಿತ ಹೊತ್ತಿನಲ್ಲಿಯೇ ಬಿಜೆಪಿ ವರಿಷ್ಠರ ತಲೆಯಲ್ಲಿ ಹೊಸ, ಹೊಸ ಚಿಂತನೆಗಳು ಸ್ಥಾನಗಳನ್ನು ಪಡೆದುಕೊಳ್ಳುತ್ತ ಸಾಗಿವೆ.
ಬಿಜೆಪಿಗೆ, ಗೆದ್ದ ಕ್ಷೇತ್ರದಲ್ಲಿ ಅಭ್ಯರ್ಥಿ ಆಯ್ಕೆ ಮಾಡುವ ವಿಚಾರ ಅಷ್ಟೇನೂ ತಲೆಕೆಡೆಸಿಕೊಳ್ಳುವಂತಾಗದಿದ್ದರೂ ಬಿದ್ದ ಅಭ್ಯರ್ಥಿಗಳ ಕ್ಷೇತ್ರಗಳಲ್ಲಿ ಮತ್ತೆ ಬಿಜೆಪಿ ಝೇಂಡಾ ಹಾರಿಸಲು ದಶದಿಕ್ಕುಗಳಲ್ಲಿ ವರಿಷ್ಠರು ಚಿಂತನೆಯನ್ನು ಮಾಡತೊಡಗಿದ್ದಾರೆ.
ವಿಷಯ ಅದೇನೆಂದರೆ… ಬಲ್ಲ ಮೂಲಗಳ ಪ್ರಕಾರ ಐತಿಹಾಸಿಕ ನಾಡಾಗಿರುವ ರಾಣಿ ಚನ್ನಮ್ಮನ ಕಿತ್ತೂರು ವಿಧಾನಸಭೆ ಕ್ಷೇತ್ರಕ್ಕೆ ಈ ಬಾರಿ ಮಹಿಳೆಗೆ ಟಿಕೆಟ್ ನೀಡಲು ಪಕ್ಷದ ದೆಹಲಿ ವರಿಷ್ಠರು ಗಂಭೀರ ಚಿಂತನೆ ನಡೆಸಿದ್ದಾರಂತೆ. ತಲೆಯಲ್ಲಿ ಮೊಳೆತ ಈ ಯೋಜನೆಯನ್ನು ಅನುಷ್ಠಾನಕ್ಕೆ ತಂದರೆ ಬಿಜೆಪಿಯ ಪ್ರತಿ ಹೋರಾಟದ ನಾಮಬಲವಾಗಿರುವ ರಾಣಿ ಚನ್ನಮ್ಮನ ಹೆಸರು ಮತ್ತು ಕಿತ್ತೂರು ನೆಲಕ್ಕೆ ಇನ್ನಿಲ್ಲದ ಗೌರವ ಸಲ್ಲಿಸಿದಂತಾಗುತ್ತದೆಯೆಂದು ಪಕ್ಷದ ವರಿಷ್ಠರು ಅಂದುಕೊಂಡಿದ್ದಾರಂತೆ.
ಹಾಗೆ ನೋಡಿದರೆ ಬಿಜೆಪಿಯ ಕೆಲ ಹೋರಾಟಗಳು ಈ ನೆಲದಿಂದಲೇ ಆರಂಭವಾಗಿವೆ ಅಲ್ಲದೆ ಯಶಸ್ಸು ಪಡೆದಿವೆ ಎಂದು ಹೇಳಲಾಗುತ್ತದೆ. ಬಹಳ ವರ್ಷಗಳ ಹಿಂದೆ, ಬಿಜೆಪಿ ಅಧಿಕಾರದಿಂದ ದೂರವಿದ್ದ ಸಂದರ್ಭದಲ್ಲಿ ಈದಗಾ ಮೈದಾನದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸುವ ಹೋರಾಟ ಪರಾಕಾಷ್ಠೆ ಕಂಡಿತ್ತು. ಆ ಸಂದರ್ಭದಲ್ಲಿ ಈ ಕ್ರಾಂತಿಯ ನೆಲದಿಂದಲೇ ಧ್ವಜ ಪಡೆದುಕೊಂಡು ಹುಬ್ಬಳ್ಳಿ ಕಡೆಗೆ ಪ್ರಯಾಣ ಬೆಳೆಸಲಾಗಿತ್ತು ಎಂಬ ಸತ್ಯ ರಾಜ್ಯದ ಹಿರಿಯ ನಾಯಕರ ಮನದಾಳದಲ್ಲಿ ಈಗಲೂ ಇದೆ. ಹೀಗಾಗಿ ರಾಣಿ ಚನ್ನಮ್ಮನಿಗೆ ಗೌರವ ಸಲ್ಲಿಸಲಿಕ್ಕಾದರೂ ಈ ಕ್ಷೇತ್ರಕ್ಕೆ ಮಹಿಳೆಯೊಬ್ಬರನ್ನು ಅಭ್ಯರ್ಥಿಯಾಗಿಸಲು ಪಕ್ಷದ ಹಿರಿಯೊಬ್ಬರು ಸಲಹೆ ನೀಡಿದ್ದಾರೆ. ಇದಕ್ಕೆ ದೆಹಲಿ ವರಿಷ್ಠರು ಸಹಮತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಎರಡು ಮಹಿಳೆಗೆ ಮೀಸಲು
ಕಿತ್ತೂರು ಕ್ಷೇತ್ರಕ್ಕೆ ಮಹಿಳೆಯನ್ನು ಅಭ್ಯರ್ಥಿಯಾಗಿಸಿದರೆ ರಾಣಿ ಚನ್ನಮ್ಮನ ಜಿಲ್ಲೆಯೆಂದೇ ಗುರುತಿಸಿಕೊಂಡಿರುವ ಬೆಳಗಾವಿ ಜಿಲ್ಲೆಗೆ ಎರಡು ಸ್ಥಾನಗಳು ಲಭಿಸಿದಂತಾಗುತ್ತದೆ. ಈಗಾಗಲೇ ನಿಪ್ಪಾಣಿ ಕ್ಷೇತ್ರದಲ್ಲಿ ಶಶಿಕಲಾ ಜೊಲ್ಲೆ ಅವರನ್ನು ಕಣಕ್ಕೆ ಇಳಿಸಿದ ಬಿಜೆಪಿ, ಅದರಲ್ಲಿ ಯಶಸ್ವಿಯನ್ನೂ ಕಂಡಿತು. ಚನ್ನಮ್ಮ ಆಳಿದ ಕೇಂದ್ರಸ್ಥಾನವಾಗಿರುವ ಕಿತ್ತೂರು ಕ್ಷೇತ್ರಕ್ಕೆ ಮತ್ತೊಬ್ಬ ಮಹಿಳೆಯನ್ನು ಕಣಕ್ಕಿಳಿಸಿದರೆ ಅಲ್ಲೂ ಜಯ ನಮಗೆ ಸುಲಭವಾಗಿ ದೊರೆಯಬಹುದು ಎಂಬುದು ಅವರ ಲೆಕ್ಕಾಚಾರವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ತಲೆನೋವು ಕಡಿಮೆ
ಒಂದು ವೇಳೆ ಮಹಿಳೆಗೆ ಕಿತ್ತೂರು ಕ್ಷೇತ್ರದ ಟಿಕೆಟ್ ನೀಡಿದರೆ ಪುರುಷ ಅಭ್ಯರ್ಥಿಗಳಲ್ಲಿ ಏರ್ಪಟ್ಟಿರುವ ಸ್ಪರ್ಧೆಯನ್ನು ತಣ್ಣಗಾಗಿಸಬಹುದು. ಬಿಜೆಪಿ ಕಳೆದುಕೊಂಡಿರುವ ಕ್ಷೇತ್ರವನ್ನು ಮಹಿಳಾ ಅಭ್ಯರ್ಥಿ ಮೂಲಕ ಪುನಃ ತೆಕ್ಕೆಗೆ ತೆಗೆದುಕೊಂಡ ಹಮ್ಮುನಿಂದ ಪಕ್ಷ ಬೀಗಬಹುದು ಎಂದು ಸದ್ಯ ಅರ್ಥೈಸಲಾಗುತ್ತಿದೆ.
ಮಹಿಳೆಗೆ ಬಿಜೆಪಿ ಕಿತ್ತೂರು ಕ್ಷೇತ್ರ ಮೀಸಲಿಟ್ಟರೆ ಯಾರು ಅಭ್ಯರ್ಥಿಯಾಗಬಹುದು ಎಂಬ ಚಿಂತನೆಯೂ ಈಗೆರಡು ದಿನಗಳಿಂದ ರೆಕ್ಕೆ, ಪುಕ್ಕ ಬಿಚ್ಚಿಕೊಂಡು ಹಾರಾಡುತ್ತಿದೆ!