ಬೆಳಗಾವಿ- ವಿಶ್ವಯೋಗ ದಿನ ಅಂಗವಾಗಿ ಕಿತ್ತೂರಿನಿಂದ ಬೆಳಗಾವಿವರೆಗೆ ಸ್ಕೇಟಿಂಗ್ ರ‌್ಯಾಲಿ
5 ಗಂಟೆಯಲ್ಲಿ 55 ಕಿ.ಮೀ. ಸ್ಕೇಟಿಂಗ್ ನಡೆಸಲಿರುವ ಚಿಣ್ಣರು
ಬೆಳಗಾವಿ
ವಿಶ್ವ ಯೋಗ ದಿನಾಚರಣೆ ಅಂಗವಾಗಿ ಕಿತ್ತೂರಿನ ರಾಣಿ ಚನ್ನಮ್ಮ ವೃತ್ತದಿಂದ ಬೆಳಗಾವಿಯ ರಾಣಿ ಚನ್ನಮ್ಮ ವೃತ್ತದವರೆಗೆ 22 ಚಿಣ್ಣರು ಸ್ಕೇಟಿಂಗ್ ನಡೆಸಿ ಯೋಗದ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ.
ಜೂನ್ 21 ರಂದು ಬೆಳಗ್ಗೆ 8:30 ಗಂಟೆಗೆ ಕಿತ್ತೂರಿನ ರಾಣಿ ಚನ್ನಮ್ಮ ವೃತ್ತದಲ್ಲಿ ಸ್ಕೇಟಿಂಗ್ ರ‌್ಯಾಲಿಗೆ ಚಾಲನೆ ನೀಡಲಾಗುತ್ತಿದೆ. ಸುಮಾರು 5 ಗಂಟೆಯಲ್ಲಿ 55 ಕಿ.ಮೀ. ಕ್ರಮಿಸಲಿರುವ ಸ್ಕೇಟಿಂಗ್ ಪಟುಗಳು ಮಧ್ಯಾಹ್ನ 2 ಗಂಟೆಗೆ ಬೆಳಗಾವಿಯ ರಾಣಿ ಚನ್ನಮ್ಮ ವೃತ್ತಕ್ಕೆ ಆಗಮಿಸಲಿದ್ದಾರೆ.
ಸ್ಕೇಟಿಂಗ್ ರ‌್ಯಾಲಿಯಲ್ಲಿ ಬೆಳಗಾವಿ ರೋಲರ್ ಸ್ಕೇಟಿಂಗ್ ಅಕಾಡೆಮಿಯ 22 ಚಿಣ್ಣರು ಪಾಲ್ಗೊಳ್ಳಲಿದ್ದಾರೆ. ಸ್ಕೇಟಿಂಗ್ ರ‌್ಯಾಲಿಯಲ್ಲಿ 3 ನೇ ತರಗತಿ ವಿದ್ಯಾರ್ಥಿಗಳಿಂದ ಹಿಡಿದು ಹತ್ತನೇಯ ತರಗತಿ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಬೆಳಗಾವಿ ರೋಲರ್ ಸ್ಕೇಟಿಂಗ್ ಅಕಾಡೆಮಿಯ ಸೂರ್ಯಕಾಂತ ಹಿಂಡಲಗೇಕರ್ ರ‌್ಯಾಲಿಯ ನೇತೃತ್ವವಹಿಸಲಿದ್ದಾರೆ.
ಜೂನ್ 21 ರಂದು ಬೆಳಗ್ಗೆ 8:30 ರಂದು ಕಿತ್ತೂರಿನ ರಾಣಿ ಚನ್ನಮ್ಮ ವೃತ್ತದಿಂದ ಆರಂಭವಾಗಲಿರುವ ರ‌್ಯಾಲಿ ಎಂ.ಕೆ.ಹುಬ್ಬಳ್ಳಿ, ಹಲಗಾ, ಹಳೆ ಪಿಬಿ ರಸ್ತೆ, ಪಾಟ್ಸನ್, ಹೋಸುರು ಬಸವನಗಲ್ಲಿ, ಮಹಾತ್ಮಾಫುಲೆ ಡಬಲ್ ರಸ್ತೆ, ಗೋವಾವೇಸ್ ಸರ್ಕಲ್, ರೈಲ್ವೆ ಮೇಲ್ಸೇತುವೆ, ಬೋಗಾರವೇಸ್, ಕಾಲೇಜ್ ರೋಡ್ ಮೂಲಕ ಚನ್ನಮ್ಮ ವೃತ್ತದಲ್ಲಿ ಅಂತ್ಯವಾಗಲಿದೆ. ಈ ಎಲ್ಲ ಸ್ಥಳಗಳಲ್ಲಿ ವಿವಿಧ ಸಂಘಟನೆಯವರು ಸ್ಕೇಟಿಂಗ್ ಪಟುಗಳನ್ನು ಸ್ವಾಗತಿಸಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಚನ್ನಮ್ಮ ವೃತ್ತದಲ್ಲಿ ರ‌್ಯಾಲಿ ಅಂತ್ಯವಾಗಲಿದ್ದು, ಇಲ್ಲಿ ಗಣ್ಯರು ಸ್ವಾಗತಿಸಲಿದ್ದಾರೆ.
ಈ ರ‌್ಯಾಲಿಯನ್ನು ವಿಜಯವಾಣಿ ಹಾಗೂ ದಿಗ್ವಿಜಯ 24*7 ನ್ಯೂಸ್ ಚಾನೆಲ್ ಮಾಧ್ಯಮ ಸಹಯೋಗದಲ್ಲಿ ಜೈಂಟ್ಸ್ ಗ್ರೂಪ್ ಆಫ್ ಪರಿವಾರ, ಬೆಳಗಾವಿ ರೋಟರಿ ಕ್ಲಬ್ ಆಫ್ ವೇಣುಗ್ರಾಮ ಸ್ಪೋಟ್ಸ್ ಅಕಾಡೆಮಿ, ಯುನಿಕ್ ಸ್ಪೋರ್ಟಿಂಗ್ ಅಕಾಡೆಮಿ, ಬೆಳಗಾವಿ ರೋಲರ್ ಸ್ಕೇಟಿಂಗ್ ಅಕಾಡೆಮಿ, ಪ್ಯಾಸ್ ಫೌಂಡೇಶನ್ ಸಹಕಾರದಲ್ಲಿ ಆಯೋಜಿಸಲಾಗುತ್ತಿದೆ.