ದೇಶದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಭದ್ರ ಬುನಾದಿ ಹಾಕಿದ ಕಿತ್ತೂರು ಚನ್ನಮ್ಮನವರ ದೇಶಾಭಿಮಾನ ಹಾಗೂ ಹೋರಾಟದ ಕಿಚ್ಚನ್ನು ಇಂದಿನ ಯುವಪೀಳಿಗೆಗೆ ತಲುಪಿಸುವ ಅಗತ್ಯವಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮನು ಬಳಿಗಾರ ಪ್ರತಿಪಾದಿಸಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಆಶ್ರಯದಲ್ಲಿ ಕಿತ್ತೂರು ಕೋಟೆ ಆವರಣದಲ್ಲಿ ಏರ್ಪಡಿಸಲಾಗಿದ್ದ ‘ಕಿತ್ತೂರು ಉತ್ಸವ-2016’ರ ಸಮಾರೋಪ ಸಮಾರಂಭದಲ್ಲಿ ಅವರು ಸಮಾರೋಪ ನುಡಿಗಳನ್ನಾಡಿದರು.
ಬ್ರಿಟಿಷ್‍ರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ಚನ್ನಮ್ಮ ದೇಶದ ಸ್ವಾತಂತ್ರ್ಯ ಚಳವಳಿಯ ಬೆಳ್ಳಿಚುಕ್ಕಿಯಾಗಿ ಇಂದಿಗೂ ಮಿನುಗುತ್ತಿದ್ದು, ಚನ್ನಮ್ಮ ನಡೆಸಿದ ಈ ಹೋರಾಟವನ್ನು ದೇಶ ಮಾತ್ರವಲ್ಲ; ಇಡೀ ಜಗತ್ತಿಗೆ ಪರಿಚಯಿಸುವ ಅಗತ್ಯವಿದೆ ಎಂದರು.
ಜಗತ್ತಿನ ಇತಿಹಾಸದ ಪುಟಗಳನ್ನು ತೆರೆದಾಗ ಮಹಿಳಾ ಹೋರಾಟಗಾರ್ತಿಯರ ಸಂಖ್ಯೆ ಬಹಳ ಕಡಿಮೆ. ಆದರೆ ಕನ್ನಡ ನಾಡಿನ ಕಿತ್ತೂರು ಚನ್ನಮ್ಮ, ಒನಕೆ ಓಬವ್ವ, ಬೆಳವಡಿ ಮಲ್ಲಮ್ಮ, ರಾಣಿ ಅಬ್ಬಕ್ಕರಂತವರು ದೇಶಕ್ಕಾಗಿ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡಿರುವುದು ನಾವೆಲ್ಲರೂ ಅಭಿಮಾನಪಡುವ ಸಂಕೇತವಾಗಿದೆ ಎಂದರು.
ಚನ್ನಮ್ಮಳ ಕಡೆಗಣನೆ:
ಕಿತ್ತೂರು ಚನ್ನಮ್ಮಳ ಹೋರಾಟದ ಮೂವತ್ತು ವರ್ಷಗಳ ಬಳಿಕ ಹೋರಾಟಕ್ಕೆ ಧುಮುಕಿದ ಝಾನ್ಸಿ ರಾಣಿಗೆ ಸಿಕ್ಕಷ್ಟು ಮಾನ್ಯತೆ ಚನ್ನಮ್ಮಳಿಗೆ ದೊರಕಲಿಲ್ಲ ಎಂದು ಮನು ಬಳಿಗಾರ ಖೇದ ವ್ಯಕ್ತಪಡಿಸಿದರು.
ಹಿಂದಿ ಭಾಷೆಯ ಕಾರಣಕ್ಕೆ ಝಾನ್ಸಿ ರಾಣಿಯ ಹೋರಾಟ ದೇಶದ ಮೂಲೆ ಮೂಲಗೆ ತಲುಪಿತು. ಚನ್ನಮ್ಮಳ ಶೌರ್ಯ ಪರಾಕ್ರಮದ ಬಗ್ಗೆ ಸ್ವತಃ ಬ್ರಿಟಿಷ್‍ರೇ ದಾಖಲೆಗಳನ್ನು ಸೃಷ್ಟಿಸಿದ್ದಾರೆ.
ಚನ್ನಮ್ಮನ ಹೋರಾಟದ ಅನೇಕ ಅಧಿಕೃತ ದಾಖಲೆಗಳು, ಉಲ್ಲೇಖಗಳು ಲಭ್ಯವಿದ್ದು, ಇವುಗಳನ್ನು ಇಟ್ಟುಕೊಂಡು ಇಡೀ ವಿಶ್ವಕ್ಕೆ ಚನ್ನಮ್ಮನ ಸಾಹಸಗಾಥೆ ಪರಿಚಯಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಕಂದಾಯ ಸಚಿವರು ಈಗಾಗಲೇ ಕಿತ್ತೂರಿಗೆ ತಾಲ್ಲೂಕಿನ ಸ್ಥಾನಮಾನ ನೀಡಿದ್ದು, ಹೊಸ ತಾಲ್ಲೂಕು gಕಾರ್ಯಾರಂಭಿಸಿದ ತಕ್ಷಣವೇ ಕನ್ನಡ ಸಾಹಿತ್ಯ ಪರಿಷತ್ತು ಕೂಡ ಕಿತ್ತೂರು ತಾಲ್ಲೂಕು ಘಟಕವನ್ನು ರಚಿಸಲಿದೆ ಎಂದು ಮನು ಬಳಿಗಾರ ಭರವಸೆ ನೀಡಿದರು.
ಅದೇ ರೀತಿ ಕಿತ್ತೂರಿನ ನೆಲದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟದ ವಿವಿಧ ಮಜಲುಗಳು, ಇಲ್ಲಿನ ಅಪ್ರತಿಮ ದೇಶಭಕ್ತರ ಪರಾಕ್ರಮ ಹಾಗೂ ನಾಡಪ್ರೇಮದ ಮೇಲೆ ಬೆಳಕು ಚೆಲ್ಲುವ ನಿಟ್ಟಿನಲ್ಲಿ ಮುಂದಿನ ಮೂರು ತಿಂಗಳಿನಲ್ಲಿ ಕಿತ್ತೂರಿನಲ್ಲಿ ರಾಜ್ಯಮಟ್ಟದ ವಿಚಾರಸಂಕಿರಣ ಹಮ್ಮಿಕೊಳ್ಳುವುದಾಗಿ ಬಳಿಗಾರ ಹೇಳಿದರು.
ಅತಿಥಿಯಾಗಿ ಆಗಮಿಸಿದ್ದ ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ ಅವರು, ಕಿತ್ತೂರು ಉತ್ಸವದ ಯಶಸ್ಸು ಮುಂಬರುವ ದಿನಗಳಲ್ಲಿ ಇನ್ನಷ್ಟು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಪ್ರೇರಣೆಯಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಡಿ.ಬಿ.ಇನಾಮದಾರ ಅವರು, ತಾವು ನಿರಂತರವಾಗಿ ಪಟ್ಟುಹಿಡಿದು ಒತ್ತಡ ಹೇರಿದ ಪರಿಣಾಮ ಕಂದಾಯ ಸಚಿವರು ನೂತನ ತಾಲ್ಲೂಕು ಘೋಷಣೆ ಮಾಡಿದ್ದು, ಮಿನಿ ವಿಧಾನಸೌಧ ನಿರ್ಮಾಣಕ್ಕೆ ಈಗಾಗಲೇ ಜಾಗೆಯನ್ನು ಕೂಡ ಗುರುತಿಸಲಾಗಿದೆ ಎಂದರು.
ಸಚಿವರು ನೀಡಿದ ಭರವಸೆಯಿಂದ ಜನರಲ್ಲಿ ಸಾಕಷ್ಟು ನಿರೀಕ್ಷೆಗಳು ಗರಿಗೆದರಿದ್ದು, ಅವರ ನಿರೀಕ್ಷೆಗೆ ತಕ್ಕಂತೆ ಒಂದು ತಿಂಗಳೊಳಗೆ ವಿಧಾನಸೌಧ ನಿರ್ಮಾಣಕ್ಕೆ ಯೋಜನೆ ಕೂಡ ರೂಪಿಸಲಾಗುತ್ತಿದೆ ಎಂದರು.
ಜಿಲ್ಲಾಧಿಕಾರಿ ಎನ್.ಜಯರಾಮ್, ಉತ್ತರ ವಲಯ ಪೊಲೀಸ್ ಮಹಾನಿರ್ದೇಶಕ ಕೆ.ರಾಮಚಂದ್ರರಾವ್, ಮೀಸಲು ಪೊಲೀಸ್ ಪಡೆಯ ಕಮಾಂಡೆಂಟ್ ಬಸವರಾಜ, ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಶಶಿಧರ ಕುರೇರ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಆರ್.ರವಿಕಾಂತೇಗೌಡ, ಧೀರೋದಾತ್ತ ಹೋರಾಟದ ಮೂಲಕ ಬೆಳ್ಳಿಚುಕ್ಕಿಯಂತೆ ಮಿನುಗುತ್ತಿರುವ ಚನ್ನಮ್ಮನ ವಿಜಯೋತ್ಸವದ ಸವಿನೆನಪಿನಲ್ಲಿ ನಡೆಯುವ ಈ ಉತ್ಸವವು ದೇಶದ ಸಾಂಸ್ಕøತಿಕ ಪ್ರತಿಭೆಗಳಿಗೆ ವೇದಿಕೆಯಾಗಲಿ ಎಂದು ಆಶಿಸಿದರು.
ಬೈಲಹೊಂಗಲ ಉಪ ವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ಸ್ವಾಗತಿಸಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ ವಂದಿಸಿದರು.