ಬೆಳಗಾವಿ: ಪರದೇಶಿಗಳ ವಿರುದ್ಧ ಸಮರ ಸಾರಿ ಕೈಯಲ್ಲಿ ಖಡ್ಗವನ್ನಿಡಿದು ಕುದುರೆಯನ್ನೇರಿ ಬ್ರಿಟಿಷ್ ಕಲೆಕ್ಟರ್ ಥ್ಯಾಕ್ರೆಯ ರುಂಡ ಚೆಂಡಾಡಿದ ವೀರರಾಣಿ ಕಿತ್ತೂರು ಚನ್ನಮ್ಮನ ಶೌರ್ಯ, ಸಾಹಸ ಮತ್ತು ಕಿತ್ತೂರಿನ ಇತಿಹಾಸದ ಗತವೈಭವವನ್ನು ಬಿಂಬಿಸುವ ಸ್ವಾಭಿಮಾನದ ಉತ್ಸವಕ್ಕೆ ಅದ್ದೂರಿ ಚಾಲನೆ ಸಿಕ್ಕಿತು.
ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಚನ್ನಮ್ಮ ಕಿತ್ತೂರಿನ ಶಾಸಕ ಡಿ.ಬಿ.ಇನಾಮದಾರ, ಸರ್ಕಾರದ ಮುಖ್ಯಸಚೇತಕ ಅಶೋಕ ಪಟ್ಟಣ, ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಗಣೇಶ ಹುಕ್ಕೇರಿ, ಜಿಲ್ಲಾಧಿಕಾರಿ ಎನ್.ಜಯರಾಮ್, ಅಪರ ಜಿಲ್ಲಾಧಿಕಾರಿ ಸುರೇಶ ಇಟ್ನಾಳ, ಬೈಲಹೊಂಗಲ ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ, ಕಾಂಗ್ರೆಸ್ ಮುಖಂಡ ಬಾಬಾಸಾಹೇಬ್ ಪಾಟೀಲ ಸೇರಿದಂತೆ ಚನ್ನಮ್ಮಾಜಿಯ ಅಭಿಮಾನಿಗಳು ಕಿತ್ತೂರಿಯ ವಿಜಯಜ್ಯೋತಿಯನ್ನು ಅಭಿಮಾನದಿಂದ ಬರಮಾಡಿಕೊಂಡರು.
ನಂತರ ಕಿತ್ತೂರಿನ ಇತಿಹಾಸದ ಗತವೈಭವವನ್ನು ಸಾರುವ ನಾಡಿನ ಕಲೆ, ಸಂಸ್ಕøತಿ, ಪರಂಪರೆಯನ್ನು ಬಿಂಬಿಸುವ ಆಕರ್ಷಕ ಜಾನಪದ ಕಲಾವಾಹಿನಿಗೆ ಗಣ್ಯರು ಚಾಲನೆ ನೀಡಿದರು. ಮೆರವಣಿಗೆಯಲ್ಲಿ ನಾಡಿನ ಇತಿಹಾಸ ಸಾರುವ ವಿವಿಧ ರೂಪಕಗಳು, ಜಿಲ್ಲೆ ಹಾಗೂ ಹೊರಜಿಲ್ಲೆಗಳಿಂದ ಆಗಮಿಸಿದ ಕಲಾತಂಡಗಳು, ವೀರಗಾಸೆ, ನೃತ್ಯ ತಂಡಗಳು ವಾದ್ಯಮೇಳಗಳು ಮೆರವಣಿಗೆಗೆ ಮೆರಗು ನೀಡಿದವು. ಉತ್ಸವಕ್ಕೆ ಜನಸಾಗರವೇ ಹರಿದು ಬಂದಿತ್ತು. ಮೆರವಣಿಗೆ ಮಾರ್ಗವೂ ಪುಷ್ಪಾಲಂಕಾರ ಹಾಗೂ ರಂಗೋಲಿಯಿಂದ ಅಲಂಕಾರಗೊಂಡಿತ್ತು.
ಕಿತ್ತೂರಿಗೆ ತಾಲೂಕಿನ ಸ್ಥಾನಮಾನ:
ಮೆರವಣಿಗೆ ವೇಳೆ ಸುದ್ದಿಗಾರರೊಂದಿಗೆ ಮತಾನಾಡಿದ ಸಚಿವ ಜಾರಕಿಹೊಳಿ, ಕಿತ್ತೂರಿಗೆ ತಾಲೂಕು ಸ್ಥಾನಮಾನ ನಿಡಬೇಕೆಂದು ಈಗಾಗಲೇ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದು, ಶೀಘ್ರವೇ ನಿಮ್ಮ ಬೇಡಿಕೆ ಈಡೇರಲಿದೆ. ಮುಂಬರುವ ದಿನಗಳಲ್ಲಿ ಕಿತ್ತೂರಿನ ಸಮಗ್ರ ಅಭಿವೃದ್ಧಿ ಹೊಂದಲಿದೆ ಎಂದು ಭರವಸೆ ನೀಡಿದರು.
ಕಾಕತಿ ಉತ್ಸವ:
ಬೆಳಗ್ಗೆ 8 ಗಂಟೆಗೆ ವೀರರಾಣಿ ಕಿತ್ತೂರು ಚನ್ನಮ್ಮಾಜಿಯ ಹುಟ್ಟೂರ ಕಾಕತಿಯಲ್ಲಿ ಚನ್ನಮ್ಮಾಜಿಯ ಪ್ರತಿಮೆಗೆ ಪೂಜೆ ನೆರವೇರಿಸಿ ಕಾಕತಿ ಉತ್ಸವಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಚಾಲನೆ ನೀಡಿದರು.
ಯಮಕನಮರಡಿ ಶಾಸಕ ಹಾಗೂ ಮಾಜಿ ಸಚಿವ ಸತೀಶ ಜಾರಕಿಹೊಳಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆಶಾ ಐಹೊಳೆ, ಜಿಲ್ಲಾಧಿಕಾರಿ ಎನ್.ಜಯರಾಮ್ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಬೆಳಗಾವಿ ನಗರದ ಚನ್ನಮ್ಮ ವೃತ್ತದಲ್ಲಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ವತಿಯಿಂದ ಚನ್ನಮ್ಮನ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅದ್ದೂರಿಯಾಗಿ ಕಿತ್ತೂರು ಉತ್ಸವ ಆಚರಿಸಲಾಯಿತು.