Breaking News

ಸಮಾಜ ಹೆಮ್ಮೆ ಪಡುವಂತಹ ಕೆಲಸ ಮಾಡಿ- ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಕರೆ

ಸಮಾಜ ಹೆಮ್ಮೆ ಪಡುವಂತಹ ಕೆಲಸ ಮಾಡಿ- ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಕರೆ

ಬೆಳಗಾವಿ, ಏಪ್ರಿಲ್ ಪ್ರಸ್ತುತ ಸಂದರ್ಭದಲ್ಲಿ ಜ್ಞಾನ, ಅಗತ್ಯ ಕೌಶಲ್ಯಗಳೊಂದಿಗೆ ಪದವಿ ಪಡೆದುಕೊಳ್ಳುತ್ತಿರುವ ಯುವ ಸಮುದಾಯ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುವ ಕಾಲ ಬಂದಿದೆ. ಕಠಿಣ ಪರಿಶ್ರಮ ಮತ್ತು ಜಾಣ್ಮೆಯಿಂದ ಕಾರ್ಯನಿರ್ವಹಿಸುವ ಮೂಲಕ ತಮ್ಮ ಪಾಲಕರು, ಸಮಾಜ ಹಾಗೂ ಮಾತೃಭೂಮಿ ಹೆಮ್ಮೆಪಡುವಂತಹ ಸಾಧನೆ ಮಾಡಬೇಕು ಎಂದು ಘನತೆವೆತ್ತ ಉಪ ರಾಷ್ಟ್ರಪತಿಗಳಾದ ಎಂ.ವೆಂಕಯ್ಯ ನಾಯ್ಡು ಕರೆ ನೀಡಿದರು.

ನಗರದ ಕೆ.ಎಲ್.ಇ. ಸಂಸ್ಥೆಯ ಜೀರಗೆ ಸಭಾಭವನದಲ್ಲಿ ಗುರುವಾರ (ಏ.25) ನಡೆದ ಕೆ.ಎಲ್.ಇ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಆಂಡ್ ರಿಸರ್ಚ್ ಸಂಸ್ಥೆಯ 9 ನೇ ಘಟಿಕೋತ್ಸವ ಸಮಾರಂಭದಲ್ಲಿ ಪದವಿ ಪ್ರದಾನ ಮಾಡಿ ಅವರು ಮಾತನಾಡಿದರು.

ವೈದ್ಯಕೀಯ ಪದವಿ ಪಡೆದು ವೃತ್ತಿ ಆರಂಭಿಸಲಿರುವ ಯುವಸಮುದಾಯ ಸಮಾಜದಲ್ಲಿ ತುಳಿತಕ್ಕೊಳಗಾದ ಜನರಿಗೆ ಅತ್ಯಂತ ಸಹಾನುಭೂತಿಯಿಂದ ಚಿಕಿತ್ಸೆ ನೀಡಬೇಕು. ಅತ್ಯಂತ ಪವಿತ್ರವಾದ ವೈದ್ಯಕೀಯ ವೃತ್ತಿಯನ್ನು ಹಣ ಗಳಿಕೆಯ ಬದಲಾಗಿ ಸಾರ್ವಜನಿಕರ ಸೇವೆಗೆ ಮೀಸಲಿಡಬೇಕು ಎಂದು ಸಲಹೆ ನೀಡಿದರು.

ಅತ್ಯುತ್ತಮ ಹಾಗೂ ಗುಣಮಟ್ಟದ ವೈದ್ಯಕೀಯ ಸೇವೆ, ಸೌಲಭ್ಯಗಳು ಸಮಾಜದ ಕಟ್ಟಕಡೆಯ ಸಾಮಾನ್ಯ ವ್ಯಕ್ತಿಗೂ ಕೈಗೆಟುಕುವಂತೆ ಒದಗಿಸಬೇಕು.
ಅದೇ ರೀತಿ ವೈದ್ಯಕೀಯ ಕ್ಷೇತ್ರದಲ್ಲಿನ ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳನ್ನು ಗ್ರಾಮೀಣ ಪ್ರದೇಶಕ್ಕೂ ತಲುಪಿಸುವ ಸವಾಲು ನಮ್ಮ ಮುಂದಿದೆ. ಇದನ್ನು ಯುವ ವೈದ್ಯರು ಆದ್ಯತೆಯ ಮೇರೆಗೆ ಒದಗಿಸಬೇಕು.

ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸುತ್ತಿದೆ. ಖಾಸಗಿ ಸಂಸ್ಥೆಗಳು ಕೂಡ ಇದರೊಂದಿಗೆ ಕೈಜೋಡಿಸುವ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಸೌಲಭ್ಯ ಒದಗಿಸಲು ಮುಂದಾಗಬೇಕಿದೆ.

ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಆರೋಗ್ಯ ಕ್ಷೇತ್ರದಲ್ಲಿ ಕ್ಷಿಪ್ರ ಬದಲಾವಣೆ ಕಾಣುತ್ತಿದೆ. ಇದರಿಂದಾಗಿ ಅನೇಕ ಕಾಯಿಲೆಗಳಿಗೆ ಉತ್ತಮ ಚಿಕಿತ್ಸೆ ಲಭಿಸುತ್ತಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.

ಸಮಾಜದಲ್ಲಿ ತುಳಿತಕ್ಕೊಳಗಾದ ಅಥವಾ ಗ್ರಾಮೀಣ ಪ್ರದೇಶದ ಜನರಿಗೆ ಅತ್ಯುತ್ತಮ ವೈದ್ಯಕೀಯ ಸೇವೆ ಒದಗಿಸುವುದು ಕೇವಲ ಸರ್ಕಾರದಿಂದ ಮಾತ್ರ ಸಾಧ್ಯವಿಲ್ಲ. ಆದ್ದರಿಂದ ಖಾಸಗಿಯವರು ಸೇರಿದಂತೆ ಪ್ರತಿಯೊಬ್ಬರೂ ಇದಕ್ಕೆ ಕೈಜೋಡಿಸಬೇಕಿದೆ.

ಬದಲಾಗುತ್ತಿರುವ ಜೀವನಶೈಲಿಯಿಂದಾಗಿ ದೈಹಿಕಶ್ರಮದ ಕೊರತೆಯಿಂದ ಇತ್ತೀಚಿನ ದಿನಗಳಲ್ಲಿ ಅನೇಕ ಬಗೆಯ ಕಾಯಿಲೆಗಳು ಕಂಡುಬರುತ್ತಿವೆ. ಆದ್ದರಿಂದ ಯೋಗ ಸೇರಿದಂತೆ ಇತರೆ ದೈಹಿಕಶ್ರಮದ ಕಡೆಗೆ ಒತ್ತು ನೀಡುವಂತೆ ತಿಳಿಸಿದರು.

ಪಾಶ್ಚಿಮಾತ್ಯ ಜೀವನಶೈಲಿಯ ಅನುಕರಣೆಯಿಂದ ದೇಶಿಯ ಆಹಾರ ಪದ್ಧತಿಯನ್ನು ನಿರ್ಲಕ್ಷಿಸುತ್ತಿರುವುದರಿಂದ ಮಕ್ಕಳು, ಯುವಕರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ನಮ್ಮ ಸಂಸ್ಕೃತಿಯ ಭಾಗವಾಗಿರುವ ರಾಗಿ ಮುದ್ದೆ, ಜೋಳದ ರೊಟ್ಟಿಯಿಂದ ಆರೋಗ್ಯಯುತ ಬದುಕು ನಮ್ಮದಾಗಿಸಿಕೊಳ್ಳಬೇಕು.

ಸ್ವಚ್ಛಭಾರತ ಎಂಬುದು ಕೇವಲ ಸರ್ಕಾರ ಅಥವಾ ಯಾವುದೇ ಪಕ್ಷದ ಕಾರ್ಯಕ್ರಮವಲ್ಲ; ಇದು ಸಾಮಾಜಿಕ ಕಾರ್ಯಕ್ರಮವಾಗಿದೆ. ನಾವೆಲ್ಲರೂ ಅದರಲ್ಲೂ ವಿಶೇಷವಾಗಿ ಯುವ ಸಮುದಾಯ ಇದಕ್ಕೆ ಸಹಕರಿಸಬೇಕು ಎಂದು ಕರೆ ನೀಡಿದರು.

ನಮ್ಮ ಭಾಷೆ ನಮ್ಮ ಅಭಿಮಾನ ಆಗಬೇಕು:
ಭಾಷೆ ಮತ್ತು ಭಾವನೆಗಳು ಒಟ್ಟೊಟ್ಟಿಗೆ ಸಾಗುತ್ತವೆ. ಆದ್ದರಿಂದ ಮಾತೃಭಾಷೆ ಬಗ್ಗೆ ಪ್ರತಿಯೊಬ್ಬರೂ ಅಭಿಮಾನ ಬೆಳೆಸಿಕೊಳ್ಳಬೇಕು. ಇತರೆ ಭಾಷೆಗಳು ಅನಿವಾರ್ಯ. ಆದರೆ ನಮ್ಮ ಮಾತೃಭಾಷೆ ನಮ್ಮ ಅಭಿಮಾನವಾಗಬೇಕು.
ತಂದೆ-ತಾಯಿ, ಮಾತೃಭಾಷೆ, ಮಾತೃಭೂಮಿ ಮತ್ತು ಗುರುಗಳನ್ನು ಗೌರವಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದರು.
ತಮ್ಮ ತಮ್ಮ ಕರ್ತವ್ಯ ನಿರ್ವಹಿಸುವುದೇ ನಿಜವಾದ ದೇಶಭಕ್ತಿ ಯಾಗಿದೆ ಎಂದರು

ಕನ್ನಡದಲ್ಲಿಯೇ ಮಾತು ಆರಂಭಿಸಿದ ಘನತೆವೆತ್ತ ಉಪರಾಷ್ಟ್ರಪತಿಗಳು, ಸಮಾರಂಭದಲ್ಲಿ ನೆರೆದಿದ್ದ ಗಣ್ಯರು, ವೈದ್ಯಕೀಯ ಪದವೀಧರರು ಹಾಗೂ ಚಿನ್ನದ ಪದಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

ಕೆ.ಎಲ್.ಇ ವಿಶ್ವವಿದ್ಯಾನಿಲಯದ ಕುಲಾಧಿಪತಿಯೂ ಆಗಿರುವ ರಾಜ್ಯಸಭಾ ಸದಸ್ಯರಾದ ಡಾ.ಪ್ರಭಾಕರ ಕೋರೆ, ಕುಲಪತಿ ಡಾ.ವಿವೇಕ ಸಾವೋಜಿ, ಕುಲಸಚಿವರಾದ ಡಾ.ವಿ.ಡಿ.ಪಾಟೀಲ ಹಾಗೂ ವಿವಿಧ ವಿಭಾಗಗಳ ಡೀನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ವಿವಿಧ ವಿಭಾಗದಲ್ಲಿ ಒಟ್ಟಾರೆ 23 ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಯಿತು.
***

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *