ಬೆಳಗಾವಿ,-( ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಸೋಮವಾರ (ಜು.29) ಖಾನಾಪೂರ ತಾಲೂಕಿನಲ್ಲಿ ಮುಳುಗಡೆಯಾಗಿರುವ ಸೇತುವೆ ವೀಕ್ಷಿಸಿ, ವಿವಿಧ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಖಾನಾಪೂರ-ಗೋವಾ ಮಾರ್ಗದ ಮಲಪ್ರಭಾ ಸೇತುವೆ, ರುಮೇವಾಡಿ ಸೇತುವೆ ವೀಕ್ಷಿಸಿ, ಗಾಡಿಕೊಪ್ಪ ಗ್ರಾಮದ ಜನರ ಸ್ಥಿತಿಗತಿಗಳ ಕುರಿತು ಪರಿಶೀಲನೆ ನಡೆಸಿದರು. ನಂತರ ಹೀರೆ ಹಟ್ಟಿಹೋಳಿ ಗ್ರಾಮಕ್ಕೆ ಭೇಟಿ ಅಲ್ಲಿನ ಗ್ರಾಮಸ್ಥರ ಅಹವಾಲುಗಳನ್ನು ಸ್ವೀಕರಿಸಿ, ಮಳೆಯಿಂದ ಮನೆ ಕಳೆದುಕೊಂಡವರಿಗೆ ಕೂಡಲೇ ಪರಿಹಾರ ನೀಡುವುದರ ಜೊತೆಗೆ ರಾಜೀವ್ ಗಾಂಧಿ ವಸತಿ ನಿಗಮದಿಂದ ಮನೆ ಮಂಜೂರು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸತತ ಮಳೆಯಿಂದಾಗಿ ಹಿರೇಹಟ್ಟಿಹೋಳಿ ಗ್ರಾಮದ ಅಕ್ಕವ್ವಾ ಕಲ್ಲಪ್ಪ ಸನದಿ ವೃದ್ಧೆಯ ಮನೆ ಸಂಪೂರ್ಣ ಹಾನಿಯಾಗಿ ಸುಮಾರು ದಿನಗಳು ಕಳೆದಿವೆ. ಆದರೆ ಯಾವೊಬ್ಬ ಅಧಿಕಾರಿಯು
ಇತ್ತ ಗಮನಹರಿಸಿಲ್ಲ. ಅಧಿಕಾರಿಗಳು ಈ ರೀತಿಯ ಬೇಜವಾಬ್ದಾರಿ ತೋರಬಾರದು. ವೃದ್ಧ ಮಹಿಳೆಗೆ ಕೂಡಲೇ ಮನೆ ಮಂಜೂರು ಮಾಡಬೇಕು. ಇಂತಹ ಪರಿಸ್ಥಿತಿಯಲ್ಲಿ ಅಧಿಕಾರಿಗಳು ನಿರ್ಲಕ್ಷ್ಯತನ ಬಿಡಬೇಕು. ಮನೆ ಮಂಜೂರಾತಿಗೆ ವಿಳಂಬ ಮಾಡಬಾರದು ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಬಳಿಕ ವೃದ್ಧ ಮಹಿಳೆಗೆ ಸ್ಥಳದಲ್ಲೇ ಹಣ ಸಹಾಯ ಮಾಡಿ, ಕೂಡಲೇ ಮನೆ ಮಂಜೂರು ಮಾಡಲಾಗುವುದು ಎಂದು ಭರವಸೆ ನೀಡಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಚಿಕ್ಕಹಟ್ಟಿಹೊಳಿ ಗ್ರಾಮದಿಂದ ಚಿಕ್ಕಮುನ್ನೊಳ್ಳಿ ಗ್ರಾಮಕ್ಕೆ ಸೇರುವ ಸೇತುವೆ ಮುಳುಗಡೆಯಾಗಿರುವ ಕಾರಣ 5 ಊರುಗಳ ಸಂಪರ್ಕ ಕಡಿತಗೊಂಡಿದೆ. ಇದಕ್ಕೆ ಪರ್ಯಾ ಮಾರ್ಗ ಕಲ್ಪಿಸುವ ಬಗ್ಗೆ ಚಿಂತನೆ ನಡೆಸಿದ್ದೇವೆ. ಕೆಲವು ಭಾಗಗಳಲ್ಲಿ ಮಳೆಯಿಂದ ಬಿದ್ದಿರುವ ಮನೆಗಳ ಕುರಿತು ವಾಸ್ತವ ಮಾಹಿತಿ ಸಿಗುತ್ತಿಲ್ಲ.
ಸರ್ಕಾರದಿಂದ ಈಗಾಗಲೇ ಬಿದ್ದಿರುವ ಮನೆಗಳನ್ನು ಗುರುತಿಸಿ, ಮನೆ ಮಂಜೂರು ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಧಿಕಾರಿಗಳು ಬಿದ್ದಿರುವ ಮನೆಗಳ ಸಮೀಕ್ಷೆ ಕಾರ್ಯ ಸಮರ್ಪಕವಾಗಿ ಮಾಡಬೇಕು. ಈ ಕುರಿತು ನಿರ್ಲಕ್ಷ್ಯ ತೋರಬಾರದು ಒಂದುವೇಳೆ ಈ ಬಗ್ಗೆ ದೂರುಗಳು ಬಂದರೆ ಕೂಲಂಕುಷವಾಗಿ ಪರಿಶೀಲಿಸಿ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಿರಿಯನಾಗರೀಕರ ಸಬಲೀಕರಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ತಿಳಿಸಿದರು.
ಬಳಿಕ ಕುಕಡೊಳ್ಳಿ, ಬೆಂಡಿಗೇರಿ, ಹಿರೇಬಾಗೇವಾಡಿ ಗ್ರಾಮಗಳ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಖಾನಾಪೂರ ತಹಶೀಲ್ದಾರ ಗಾಯಕವಾಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕ ಆರ್. ನಾಗರಾಜ, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಗಂಗಾಧರ್ ಡಿವಿಟರ್, ತಾಲೂಕಾ ಪಂಚಾಯತ್ ಅಧಿಕಾರಿಗಳು ಸೇರಿಂದತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
***