ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರು ಈಗ ಫುಲ್ ಆ್ಯಕ್ಟೀವ್ ಆಗಿದ್ದಾರೆ. ಕ್ಷೇತ್ರದ ಜನತೆಗೆ ಸರ್ಕಾರದ ಸವಲತ್ತುಗಳನ್ನು ಮನೆ ಮನೆಗೆ ಮುಟ್ಟಿಸುವ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಜನತಾ ದರ್ಶನ ಆರಂಭಿಸಿದ್ದು, ಪ್ರಾಯೋಗಿಕವಾಗಿ ನಿಲಜಿ ಗ್ರಾಮದಲ್ಲಿ ಆಯೋಜಿಸಿದ ಜನತಾ ದರ್ಶನಕ್ಕೆ ನೂರಾರು ಜನ ಪಾಲ್ಗೊಂಡು ಸರ್ಕಾರದ ವಿವಿಧ ಸವಲತ್ತುಗಳಿಗಾಗಿ ತಮ್ಮ ಹೆಸರು ನೊಂದಾಯಿಸಿದ್ದಾರೆ.
ನಿಲಜಿ ಗ್ರಾಮದ ದುರ್ಗಾಮಾತಾ ಮಂಗಳ ಕಾರ್ಯಾಲಯದಲ್ಲಿ ಜರುಗಿದ ಪೆನಶನ್ ಅದಾಲತ್ ಮತ್ತು ರೇಶನ್ ಕಾರ್ಡ್‍ಗಳ ನೊಂದಣಿ ಕಾರ್ಯಕ್ರಮದಲ್ಲಿ ಶಿಂಧೋಳ್ಳಿ, ಬಸರಿಕಟ್ಟಿ ಹಾಗೂ ನಿಲಜಿ ಗ್ರಾಮಗಳ ಸಾರ್ವಜನಿಕರು ಸಂಧ್ಯಾ ಸುರಕ್ಷಾ, ವಿಕಲಾಂಗ ವೇತನ, ಬಿಪಿಎಲ್ ಕಾರ್ಡ್, ಆಶ್ರಯ ಮನೆ ಸೇರಿದಂತೆ ವಿವಿಧ ಯೋಜನೆಗಳಿಗಾಗಿ ಅರ್ಜಿ ಸಲ್ಲಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ನಿಮ್ಮ ಸೇವೆ ಮಾಡಲು ನನಗೆ ಅಧಿಕಾರ ಕೊಟ್ಟಿದ್ದಿರಾ, ಜೀವನ ಪೂರ್ತಿ ನಿಮ್ಮ ಸೇವೆ ಮಾಡುವ ಸಂಕಲ್ಪ ಮಾಡಿದ್ದೇನೆ. ಕ್ಷೇತ್ರದ ಜನ ಸರ್ಕಾರದ ಯಾವುದೇ ಸವಲತ್ತುಗಳಿಂದ ವಂಚಿತರಾಗಬಾರದು. ಮನೆ ಮನೆಗೂ ಸವಲತ್ತುಗಳನ್ನು ತಲುಪಿಸಬೇಕೆಂಬ ಸದುದ್ಧೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಿದ್ದೇನೆ ಎಂದರು.
ಕ್ಷೇತ್ರದಲ್ಲಿ ಸಂಚಾರ ಮಾಡಿದಾಗ ಹಲವಾರು ಜನ ತಾಯಂದಿರುಗಳು ನನಗೆ ಪೆನಶನ್ ಬಂದಿಲ್ಲ, ಬಡವರು ನನಗೆ ಮನೆಯಿಲ್ಲ, ಇನ್ನು ಕೆಲವರು ನನಗೆ ರೇಶನ್ ಕಾರ್ಡ್ ಇಲ್ಲಾ ಎಂದು ದೂರುವುದನ್ನು ಗಂಭೀರವಾಗಿ ಗಮನಿಸಿದ್ದೇನೆ. ನಿಮ್ಮ ಮನೆಯ ಮಗಳಾಗಿ ಸರ್ಕಾರದ ಎಲ್ಲ ಸವಲತ್ತುಗಳನ್ನು ನಿಮಗೆ ತಲುಪಿಸುತ್ತೇನೆ. ಪೆನಶನ್ ಅದಾಲತ್ ಮತ್ತು ರೇಶನ್ ಕಾರ್ಡ್‍ಗಳ ನೊಂದಣಿ ಕಾರ್ಯಕ್ರಮವನ್ನು ಹಂತ ಹಂತವಾಗಿ ಕ್ಷೇತ್ರದ ಹಳ್ಳಿ ಹಳ್ಳಿಗಳಲ್ಲೂ ಆಯೋಜಿಸುತ್ತೇನೆ ಎಂದು ಶಾಸಕಿ ಹೆಬ್ಬಾಳಕರ ಭರವಸೆ ನೀಡಿದರು.
ಬೆಳಗಾವಿ ಉಪವಿಭಾಗಾಧಿಕಾರಿ ಕವಿತಾ ಯೋಗಪ್ಪನವರ ಮಾತನಾಡಿ ಪ್ರತಿ ವಾರ ಜಿಲ್ಲಾಡಳಿತದ ವತಿಯಿಂದ ಅಧಿಕಾರಿಗಳು ಕೂಡಾ ಇಂತಹ ಕಾರ್ಯಕ್ರಮ ಆಯೋಜಿಸುತ್ತಾರೆ. ಆದರೆ ಕಾರ್ಯಕ್ರಮಗಳಿಗೆ ಜನ ಹೆಚ್ಚಿನ ಸಂಖ್ಯೆಯಲ್ಲಿ ಬರುವುದೇ ಇಲ್ಲ. ಆದರೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರು ಆಯೋಜಿಸಿರುವ ಮಹತ್ವದ ಕಾರ್ಯಕ್ರಮದಲ್ಲಿ ನೂರಾರು ಸಂಖ್ಯೆಯಲ್ಲಿ ಜನ ಸೇರಿರುವುದು ಸಂತಸದ ಸಂಗತಿ. ಸಾರ್ವಜನಿಕರು ಏಜೆಂಟರ ಹಾವಳಿಗೆ ತುತ್ತಾಗದೇ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ನೇರವಾಗಿ ಅರ್ಜಿ ಸಲ್ಲಿಸಿದರೇ ಸರ್ಕಾರದ ಸವಲತ್ತುಗಳನ್ನು ಮನೆ ಮನೆಗೂ ತಲುಪಿಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.
ಆಹಾರ ಪೂರೈಕೆ ಇಲಾಖೆಯ ಉಪ ನಿರ್ದೇಶಕಿ ಆಫ್ರೀನ್ ಬಳ್ಳಾರಿಯವರು ಪಡಿತರ ಚೀಟಿ ಮತ್ತು ಸರ್ಕಾರ ನೀಡುತ್ತಿರುವ ಅಡುಗೆ ಅನಿಲ ಯೋಜನೆಯ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿದರು.
ನಿಲಜಿ ಗ್ರಾಮಸ್ಥರ ವತಿಯಿಂದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಸತ್ಕರಿಸಲಾಯಿತು. ತಹಶೀಲ್ದಾರ ಮಂಜುಳಾ ನಾಯ್ಕ, ನಾಗೇಶ ದೇಸಾಯಿ, ಸಿ.ಸಿ.ಪಾಟೀಲ ಸೇರಿದಂತೆ ಹಲವಾರು ಜನ ಮುಖಂಡರು, ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಗ್ರಾಮದ ಹಿರಿಯರು ಉಪಸ್ಥಿತರಿದ್ದರು.
ಬಾಕ್ಸ್:
ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರು ನಿಲಜಿ ಗ್ರಾಮದಲ್ಲಿ ಆಯೋಜಿಸಿದ ಪೆನಶನ್ ಹಾಗೂ ರೇಶನ್ ಕಾರ್ಡ್ ನೊಂದಣಿ ಕಾರ್ಯಕ್ರಮದಲ್ಲಿ ನೂರಾರು ಸಂಖ್ಯೆಯಲ್ಲಿ ಜನ ಸೇರಿದರು. ಬಿಪಿಎಲ್ ಕಾರ್ಡ್‍ಗಳಿಗಾಗಿ 300 ಕ್ಕೂ ಹೆಚ್ಚು, ವೃದ್ಧಾಪ್ಯ ವೇತನಕ್ಕಾಗಿ 200 ಕ್ಕೂ ಹೆಚ್ಚು ಅರ್ಜಿಗಳು, ಅಂಗವಿಕಲರ ವೇತನ, ವಿಧವಾ ವೇತನ ಸೇರಿದಂತೆ ವಿವಿಧ ಸವಲತ್ತುಗಳನ್ನು ಪಡೆಯಲು ಸಾರ್ವಜನಿಕರು ಒಟ್ಟು ಒಂದು ಸಾವಿರಕ್ಕೂ ಹೆಚ್ಚು ಅರ್ಜಿಗಳನ್ನು ಸಲ್ಲಿಸಿದ್ದಾರೆ.
Check Also
ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??
ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …