ಬೆಳಗಾವಿ:15 ಜನರ ಹೃದಯ ಗೆದ್ದು ವಿಧಾನ ಸೌಧದ ಮೆಟ್ಟಿಲು ಏರುವ ಸಂಕಲ್ಪ ಮಾಡಿದ್ದೇನೆ ಎರಡು ಬಾರಿ ಸೋತರು ಬೆನ್ನು ತೋರಿಸಿ ಮನೆಯಲ್ಲಿ ಕುಳಿತುಕೊಂಡ ಹೆಣ್ಣು ನಾನಲ್ಲ. ಜನರ ಹೃದಯ ಗೆಲ್ಲುವ ವರೆಗೂ ನನ್ನ ರಾಜಕೀಯ ಹೋರಾಟ ಮುಂದುವರೆಯುತ್ತದೆ ಸೋತರು ಕೈಲಾದಮಟ್ಟಿಗೆ ಕ್ಷೇತ್ರ ಜನರಿಗೆ ಸಹಾಯ ಮಾಡಿದ್ದೇನೆ. ಇಲ್ಲಿಯ ಸಮಸ್ಯೆಗಳಿಗೆ ಸ್ಪಂದಿಸಿದ ಸಮಾದಾನ ನನಗಿದೆ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ಹೇಳಿದ್ದಾರೆ.
ಇಂದು ಕರ್ನಾಟಕ ರಾಜ್ಯದ ಕಾಂಗ್ರೆಸ್ ಉಸ್ತುವಾರ ಕೆ.ಸಿ. ವೇಣುಗೋಪಾಲ ಬೆಳಗಾವಿ ಗ್ರಾಮೀಣ ಕ್ಷೇತ್ರದ ಮಾರಿಹಾಳ ಮತ್ತು ಕರಡಿಗುದ್ದಿ ಗ್ರಾಮದಲ್ಲಿ ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮ ನಡೆಸಿದರು. ಕರಡಿಗುದ್ದಿ ಗ್ರಾಮದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಹೆಬ್ಬಾಳಕರ, ಬೆಳಗಾವಿ ಗ್ರಾಮೀಣ ಕ್ಷೇತ್ರ ಭೌಗೋಳಿಕವಾಗಿ ವಿಶಾಲವಾದ ಕ್ಷೇತ್ರವಾಗಿದೆ. ಯಾವುದೋ ಒಂದು ಕಾರಣಕ್ಕಾಗಿ ನಾನು ಸೋತಿದ್ದೇನೆ. ಸೋತರು ಹೆದರದೆ ಕ್ಷೇತ್ರದ ಜನರ ಮನಮುಟ್ಟುವ ಕೆಲಸ ಮಾಡಿದ್ದೇನೆ. ಕ್ಷೇತ್ರದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ನಿರಂತರ ಶ್ರಮ ವಹಿಸಿ ಮಂಜೂರಾತಿ ಪಡೆದಿದ್ದೇನೆ. ಬರುವ ವಿಧಾನ ಸಭೆಯ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾಮಗಾರಿಗೆ ಚಾಲನೆ ಕೊಡುತ್ತಾರೆ. ಕಾಮಗಾರಿ ಆರಂಭವಾಗುವ ದಿನ ನನ್ನ ಜೀವನದ ಸಂಕಲ್ಪದ ದಿನ ಎಂದು ಹೆಬ್ಬಾಳಕರ ಹೇಳಿದರು.
ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ ಮಾತನಾಡಿ, ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಜನಸಾಮಾನ್ಯರ ಹೃದಯ ಗೆದಿದ್ದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಯೋಜನೆಗಳು ಬಡವರ ಮನೆಯಲ್ಲಿ ದೀಪ ಬೆಳಗಿಸಿವೆ. ದೇಶದ ಜನರಿಗೆ ಅಂಗೈಯಲ್ಲಿ ಅರಮನೆ ತೋರಿಸಿ ಅಧಿಕಾರ ಪಡೆದಿರುವ ಬಿಜೆಪಿ ದೇಶಕ್ಕೆ ಮುಳುವಾಗಿದೆ. ಬಿಜೆಪಿಯ ಸುಳ್ಳು ಭರವಸೆಗಳು ಕೊಟ್ಟ ಆಶ್ವಾಸನೆಗಳು ಹುಸಿಯಾಗಿವೆ. ಜನರ ಮನಸ್ಸಿಗೆ ಕಲ್ಲು ಹೊಡೆದಿರುವ ಬಿಜೆಪಿ ಕರ್ನಾಟಕದಲ್ಲಿ ಅಧಿಕಾರ ಪಡೆಯುವ ಹಗಲು ಕನಸು ಕಾಣುತ್ತಿದೆ ಎಂದು ವೇಣುಗೋಪಾಲ ವ್ಯಂಗ್ಯವಾಡಿದರು.
ಇಂಧನ ಸಚಿವ ಡಿ.ಕೆ.ಶಿವಕುಮಾರ ಮಾತನಾಡಿ, ಲಕ್ಷ್ಮೀ ಹೆಬ್ಬಾಳಕರ ಅವರು ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ಪಕ್ಷದ ಸಂಘಟನೆ ಮಾಡುತ್ತಿದ್ದಾರೆ. ಅಧಿಕಾರ ಇಲ್ಲದೆ ಕ್ಷೇತ್ರದ ಹಲವಾರು ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಈ ಬಾರಿ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಒಂದು ಬಾರಿ ಅಧಿಕಾರ ಕೊಟ್ಟು ನೋಡಿ ಕ್ಷೇತ್ರದ ಚಿತ್ರಣವೇ ಬದಲಿಮಾಡುವ ತಾಕತ್ತು ಅವರಿಗೆ ಇದೆ. ಸಾಮಾಜಿಕ ಕಳಕಳಿ ಹೊಂದಿರುವ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ವಿಧಾನ ಸೌಧಕ್ಕೆ ಕಳುಹಿಸಿದರೆ ಬೆಳಗಾವಿ ಗ್ರಾಮೀಣ ಕ್ಷೇತ್ರ ಅಭಿವೃದ್ಧಿಯ ಶಿಖರಕ್ಕೆ ಏರುತ್ತದೆ ಎಂದು ಶಿವಕುಮಾರ ಹೇಳಿದರು.
ವೇಣು ಗೋಪಾಲ ಸಚಿವ ಡಿ.ಕೆ.ಶಿವಕುಮಾರ, ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ವಿನಯ ನಾವಲಗಟ್ಟಿ ಸೇರಿದಂತೆ ಬೆಳಗಾವಿ ಮುಖಂಡರು ಹಾಗೂ ಗ್ರಾಮದ ಮುಖಂಡರು ಕರಡಿಗುದ್ದಿ ಹಾಗೂ ಮಾರಿಹಾಳ ಗ್ರಾಮಗಳಲ್ಲಿ ಸಂಚರಿಸಿ ಮನೆ ಮೆನೆಗೆ ಕಾಂಗ್ರೆಸ್ ಎಂಬ ಕಾರ್ಯಕ್ರಮವನ್ನು ಯಶಸ್ವಿಗೊಳ್ಳಿಸಿದರು.ವೇಣುಗೋಪಾಲ ಹೋದಲ್ಲೆಲ್ಲ ಲಕ್ಷ್ಮೀ ಹೆಬ್ಬಾಳಕರಗೆ ಜಯವಾಗಲಿ ಎನ್ನುವ ಘೋಷಣೆಗಳು ವೇಣುಗೋಪಾಲರನ್ನು ಸ್ವಾಗತಿಸಿದ್ದು ವಿಶೇಷವಾಗಿತ್ತು