ಬೆಳಗಾವಿ: ಶ್ರಾವಣ ಮಾಸದ ಬಸವ ಪಂಚಮಿ ನಿಮಿತ್ತ ಕೂಡಲಸಂಗಮ ಪಂಚಮಸಾಲಿ ಜಗದ್ಗುರು ಮಹಾಪೀಠದಿಂದ ಸರ್| ಸಿದ್ದಪ್ಪ ಕಂಬಳಿ ರಾಜ್ಯಮಟ್ಟದ ವಿದ್ಯಾರ್ಥಿ ಪುರಸ್ಕಾರ ಹಾಗೂ ನೂತನ ಶಾಸಕರಿಗೆ ಅಭಿನಂದನೆ ಸಮಾರಂಭ ಸೆ. 9ರಂದು ಬೆಳಗ್ಗೆ 10ಕ್ಕೆ ಕೂಡಲಸಂಗಮದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವರು ಹಾಗೂ ಶಾಸಕರು ಪಕ್ಷಾತೀತವಾಗಿ ಆಗಮಿಸಲಿದ್ದಾರೆ. ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಸಲ್ಲಿಸಲು ಸೆ. 5 ಕೊನೆಯ ದಿನವಾಗಿದೆ. ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇ. 95ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಪ್ರತಿಭಾ ಪುರಸ್ಕಾರದೊಂದಿಗೆ ಬೆಳ್ಳಿ ಪದಕ ನೀಡಲಾಗುವುದು ಎಂದರು.
ಈಗಾಗಲೇ ವಿವಿಧ ಜಿಲ್ಲೆಗಳಲ್ಲಿ ಶ್ರಾವಣ ಮಾಸದ ನಿಮಿತ್ತ ಆ. 16ರಿಂದ ಸೆ. 9ರ ವರೆಗೆ ಪ್ರತಿದಿನ ಬೆಳಗ್ಗೆ ಇಷ್ಟಲಿಂಗ ಮಹಾಪೂಜೆ ಹಾಗೂ ಇಷ್ಟಲಿಂಗ ದೀಕ್ಷಾ ಅಭಿಯಾನ ಇದೆ ಎಂದು ತಿಳಿಸಿದರು.
ಲಿಂಗಾಯತ ಪ್ರತ್ಯೇಕ ಧರ್ಮದ ಶಿಫಾರಸ್ಸು ಅಂಗೀಕರಿಸುವಂತೆ ಪ್ರಧಾನಿ ಅವರೊಂದಿಗೆ ಪತ್ರ ವ್ಯವಹಾರ ನಡೆಸಲಾಗುವುದು. ಸಮಾನ ಮನಸ್ಕರು ಸೇರಿಕೊಂಡು ಪ್ರಧಾನಿ ಬಳಿ ಹೋಗಲಾಗುವುದು ಎಂದರು.
ನ್ಯಾಯವಾದಿ ಬಸವರಾಜ ರೊಟ್ಟಿ, ಜಗದೀಶ ನಾಗನೂರ ಸೇರಿದಂತೆ ಇತರರು ಸುದ್ದಿಗೋಷ್ಠಿಯಲ್ಲಿದ್ದರು.