ಏಪ್ರಿಲ್ 15ಕ್ಕೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಎಐಸಿಸಿ ಕಾರ್ಯದರ್ಶಿ ಮಾಣಿಕಂ ಠಾಕೂರ್ ತಿಳಿಸಿದರು
ಅವರು ಬುಧವಾರ ನಗರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ, ಕರ್ನಾಟಕದ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ಸಕಲ ಸಿದ್ಧತೆ ಮಾಡಿಕೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಐದು ವರ್ಷದ ಆಡಳಿತದಲ್ಲಿ ಸಾಕಷ್ಟು ಜನಪರ ಯೋಜನೆಗಳನ್ನು ನೀಡಿದ್ದಾರೆ. ಈ ಸಲವೂ ಕಾಂಗ್ರೆಸ್ ಅಧಿಕಾರ ಹಿಡಿಯುವುದು ನಿಶ್ಚಿತ ಎಂದರು.
ಕರ್ನಾಟಕದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ 13 ದಿನಗಳಲ್ಲಿ 82 ಮತಕ್ಷೇತ್ರದಲ್ಲಿ ಜನಾಶೀರ್ವಾದ ಯಾತ್ರೆಯಲ್ಲಿ ಭಾಗಿಯಾಗಿ ಜನರಿಗೆ ಕಾಂಗ್ರೆಸ್ ಸರಕಾರದ ಕೊಡುಗೆಗಳನ್ನು ತಿಳಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ, ರಾಮದುರ್ಗ ಹಾಗೂ ಸವದತ್ತಿಯಲ್ಲಿಯೂ ಜನಾಶೀರ್ವಾದ ಯಾತ್ರೆಯಲ್ಲಿ ಭಾಗಿಯಾಗಿ 18 ವಿಧಾನಸಭಾ ಕ್ಷೇತ್ರದಿಂದ ಈ ಬಾರಿ ಹೆಚ್ಚು ಕ್ಷೇತ್ರಗಳನ್ನು ಕಾಂಗ್ರೆಸ್ ವಶಪಡಿಸಿಕೊಳ್ಳಲಿದೆ ಎಂದರು.
ಲಿಂಗಾಯತ ಧರ್ಮವನ್ನು ಪ್ರತ್ಯೇಕ ಮಾಡುವುದರ ಕುರಿತಾಗಿ ಸುಮಾರು ವರ್ಷಗಳಿಂದ ಹೋರಾಟ ನಡೆದಿತ್ತು. ಲಿಂಗಾಯತ ಮಠಾಧೀಶರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ನಾಗಮೋಹನದಾಸ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿ ಆ ವರದಿಯನ್ನು ಕೇಂದ್ರ ಸರಕಾರಕ್ಕೆ ಶಿಪಾರಸ್ಸು ಮಾಡಿದೆ. ಇದರಲ್ಲಿ ರಾಜಕೀಯ ಮಾಡುವ ಮಾತೇ ಇಲ್ಲ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಪ್ರಧಾನಕಾರ್ಯದರ್ಶಿ ಪಿ.ವಿ.ಮೋಹನ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ವೇಳೆ ವಿನಯ ನಾವಲಗಟ್ಟಿ, ನಗರಾಧ್ಯಕ್ಷ ರಾಜು ಸೇಠ್, ಮೋಹನ್ ರೆಡ್ಡಿ ಸೇರಿದಂತೆ ಮೊದಲಾದವರು ಹಾಜರಿದ್ದರು.