ಬೆಳಗಾವಿ-ಕುಂದಾ ನಗರಿ ಬೆಳಗಾವಿಯಲ್ಲಿ ಇಂದಿನಿಂದ ಚಳಿಗಾಲದ ಅಧಿವೇಶನ ಆರಂಭವಾಗಿದ್ದು. ಅಧಿವೇಶನಕ್ಕೆ ವಿರುದ್ಧವಾಗಿ ಎಂಇಎಸ್ ಮಹಾಮೇಳ ಆಯೋಜಿಸಿತ್ತು, ಮಹಾಮೇಳದಲ್ಲಿ ಪಾಲ್ಗೊಂಡ ಶಿವಸೇನೆ ಮುಖಂಡ ಎರಡು ರಾಜ್ಯಗಳ ನಡುವೆ ಸಾಮರಸ್ಯ ಹಾಳು ಮಾಡುವ ಹೇಳಿಕೆ ನೀಡಿದ್ದಾರೆ. ಮಹಾರಾಷ್ಟ್ರದಲ್ಲಿ ಉಡುಪಿ ಹೋಟೆಲ್ ಗಳನ್ನು ಟಾರ್ಗೆಟ್ ಮಾಡುವ ಎಚ್ಚರಿಕೆ ನೀಡಿದ್ದಾರೆ. ಅನಮತಿ ಇಲ್ಲದೇ ನಡೆದ ಮಹಾಮೇಳ ತಡೆಯುವಲ್ಲಿ ಸರ್ಕಾರ ವಿಫಲವಾಗಿದೆ.
ಕುಂದಾ ನಗರಿ ಬೆಳಗಾವಿಯಲ್ಲಿ ಮತ್ತೆ ಎಂಇಎಸ್ ನಾಡವಿರೋಧಿ ಚಟುವಟಿಕೆ ಮಾಡಿದೆ. ರಾಜ್ಯೋತ್ಸವಕ್ಕೆ ವಿರುದ್ಧವಾಗಿ ಕರಾಳ ದಿನ ಆಚರಣೆ ಮಾಡಿದ್ದ ಎಂಇಎಸ್ ಇದೀಗ ಅಧಿವೇಶನಕ್ಕೆ ವಿರುದ್ಧವಾಗಿ ಮಹಾಮೇಳ ಆಯೋಜನೆ ಮಾಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ. ಇಂದು ನಡೆದ ಮಹಾಮೇಳಕ್ಕೆ ಪೊಲೀಸ್ ಇಲಾಖೆ ಅನುಮತಿ ನೀಡಿರಲಿಲ್ಲ. ಆದರು ಎಂಇಎಸ್ ಕಾರ್ಯಕರ್ತರು ನಗರದ ವ್ಯಾಕ್ಸನ್ ಡಿಪೋ ಮೈದಾನದಲ್ಲಿ ಅನಧಿಕೃತವಾಗಿ ಮಹಾಮೇಳ ಆಯೋಜನೆ ಮಾಡಿದ್ರು. ಬೆಳಗ್ಗೆಯಿಂದಲೇ ಮೇಳಕ್ಕೆ ಸಿದ್ಧತೆ ನಡೆಯುತ್ತಿದ್ದರು ಪೊಲೀಸರು ಇದನ್ನು ತಡೆಯುವಲ್ಲಿ ವಿಫಲರಾದ್ರು. ಇನ್ನೂ ಎಂಇಎಸ್ ಶಾಸಕರಾದ ಸಂಭಾಜೀ ಪಾಟೀಲ್, ಅರವಿಂದ ಪಾಟೀಲ್ ವಿಧಾನಸಭೆ ಕಲಾಪ ಬಹಿಷ್ಕರಿಸಿ ಮಹಾಮೇಳಕ್ಕೆ ಹಾಜರಾಗಿದ್ದರು. ಜತೆಗೆ ಮೇಳಕ್ಕೆ ಮಾಹರಾಷ್ಟ್ರದ ಮುಖಂಡ ಎನ್.ಡಿ ಪಾಟೀಲ್, ಶಿವಸೇನೆಯ ಕೊಲ್ಹಾಫುರ ಜಿಲ್ಲಾಧ್ಯಕ್ಷ ವಿಜಯ ದೆವಣೆ ಆಗಮಿಸಿದ್ದರು. ಎಂಇಎಸ್ ಮಹಾಮೇಳದಲ್ಲಿ ಮಾತನಾಡಿದ ಶಿವಸೇನೆ ಮುಖಂಡ ವಿಜಯ ದೆವಣೆ ಕರ್ನಾಟಕ, ಮಹಾರಾಷ್ಟ್ರದ ನಡುವಿನ ಸಾಮರಸ್ಯ ಹಾಳು ಮಾಡುವ ಉದ್ಧಟನೆ ಹೇಳಿಕೆ ನೀಡಿದ್ರು. ವಿಜಯ ದೆವಣಿ ಮಾತನಾಡಿ, ಕರಾಳ ದಿನ ಆಚರಣೆಯಲ್ಲಿ ನಕಲಿ ಬಂದೂಕು ತೋರಿಸಿದ್ದಕ್ಕೆ ಸರ್ಕಾರ ಹೆದರಿದೆ. ಕರ್ನಾಟಕ ಸರ್ಕಾರ ಹಾಗು ಪೊಲೀಸರು ನಪುಂಸಕರಿದ್ದಾರೆ. ಅಸಲಿ ಬಂದೂಕು ಹಿಡಿದು ನಿಮ್ಮನ್ನು ಓಡಿಸಲು ಬಹಳ ಸಮಯ ಬೇಕಿಲ್ಲ. ಕರ್ನಾಟಕದ ಜನತೆ ಮೇಲೆ ಗುಂಡು ಹಾರಿಸಲು ಕೇಂದ್ರ ಬಳಿ ಅಸಲಿ ಬಂದೂಕಿಗೆ ಅನುಮತಿ ಕೇಳಬೇಕಿದೆ. ಎಂಇಎಸ್ ಕಾರ್ಯಕರ್ತರ ನೆರವಿಗೆ ಮಹಾರಾಷ್ಟ್ರ ಸರ್ಕಾರ ಬರಬೇಕಿದೆ. ಮಹಾರಾಷ್ಟ್ರ ಸಾರಿಗೆ ಮಂತ್ರಿಗೆ ನಾನು ಒತ್ತಾಯ ಮಾಡುತ್ತೇನೆ. ಕರ್ನಾಟಕ-ಮಹಾರಾಷ್ಟ್ರದ ನಡುವಿನ ಸಾರಿಗೆ ಸಂಪರ್ಕ ಕಡಿತಗೊಳ್ಳಬೇಕು ಎಂದು ಸಚಿವರಿಗೆ ನಾನು ಆಗ್ರಹಿಸುತ್ತೇನೆ. ಕರ್ನಾಟಕ ಸರ್ಕಾರಕ್ಕೆ ನಾವು ಹೆದರವುದಿಲ್ಲ, ನನ್ನ ವಿರುದ್ಧ ಯಾವುದೇ ಕ್ರಮ ಕೈಗೊಂಡ್ರು ನಾನು ಹೆದರಲ್ಲ. ಮಹಾಮೇಳದ ವಿರುದ್ಧ ಕರ್ನಾಟಕ ಸರ್ಕಾರ ಕ್ರಮ ಕೈಗೊಂಡ್ರೆ ಮಹಾರಾಷ್ಟ್ರದಲ್ಲಿರುವ ಕನ್ನಡಗ ಹೋಟೆಲ್ ಧ್ವಸಂ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದ್ರು
ಮಹಾಮೇಳದ ಆಚರಣೆ ವೇಳೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವಾಗ ಎದ್ದುನಿಂತ ಎಂಇಎಸ್ ಕಾರ್ಯಕರ್ತನೊಬ್ಬ ಎಂಇಎಸ್ ಮುಖಂಡರನ್ನು ತರಾಟೆಗೆ ತೆಗೆದುಕೊಂಡ್ರು. ನೀವು ನಾಟಕ ಮಾಡುವುದನ್ನು ನಿಲ್ಲಿಸಿ, ನೈಜ್ಯವಾಗಿ ಹೋರಾಟ ಮಾಡಿ ಎಂದು ವಾಗ್ದಾಳಿ ನಡೆಸಿದ್ರು. ನಂತರ ಮಾತನಾಡಿದ ಎಂಇಎಸ್ ಶಾಸಕ ಅರವಿಂದ ಪಾಟೀಲ್. ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಿದ್ರು. ಮಹಾರಾಷ್ಟ್ರದಲ್ಲಿನ ಉಡುಪಿ ಹೋಟೆಲ್ ಗಳ ಮೇಲೆ ದಾಳಿ ಮಾಡುವ ಶಿವಸೇನೆ ಮುಖಂಡನ ಹೇಳಿಕೆಯನ್ನು ಪ್ರಸ್ತಾಪಿಸಿ, ನೀವು ಹೇಳಬೇಡಿ ಮಾಡಿ ತೋರಿಸಿ ಎಂದರು.
ಒಟ್ಟಾರೆ ಬೆಳಗಾವಿಯಲ್ಲಿ ಇಂದು ಅಧಿವೇಶನದಲ್ಲಿ ರಾಜ್ಯದ ಬರ, ಕಳಸಾ ಬಂಡೂರಿ ವಿಚಾರಗಳ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿದ್ದರೆ. ಹೊರಗೆ ಛಾಪಾಗಳು ನಾಡವಿರೋಧಿ ಕೃತ್ಯ ಎಸಗಿದ್ದಾರೆ. ಉದ್ಧಟನದ ಹೇಳಿಕೆ ನೀಡಿದ ಶಿವಸೇನೆ ಮುಖಂಡರನ ವಿರುದ್ಧ ದೂರು ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂಬುದು ಕನ್ನಡಿಗರ ಬೇಡಿಕೆಯಾಗಿದೆ. ಕರಾಳ ದಿನ ಆಚರಣೆಯಲ್ಲಿ ಪಾಲ್ಗೊಂಡ ಪಾಲಿಕೆ ಸದಸ್ಯರ ವಿರುದ್ದ ಕ್ರಮ ಕೈಗೊಳ್ಳಲು ಹಿಂದೆಟ್ಟು ಹಾಕುತ್ತಿರುವ ಸರ್ಕಾರ ಶಿವಸೇನೆ ಮುಖಂಡ ವಿರುದ್ಧ ಯಾವ ರೀತಿಯ ಕ್ರಮ ಕೈಗೊಳ್ಳಿದೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.