ಶಾಸಕ ಅಭಯ ಪಾಟೀಲ ಸಿಎಂ ಬೊಮ್ಮಾಯಿ ಅವರನ್ನು ತುರ್ತಾಗಿ ಭೇಟಿಯಾಗಿದ್ದು ಯಾಕೆ ಗೊತ್ತಾ…??
ಬೆಳಗಾವಿ- ಮಹಾನಗರಗಳಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಿಸುವ ವಸತಿ ಯೋಜನೆಗಳಲ್ಲಿ ಬಡವರಿಗೂ ನಿವೇಶನಗಳನ್ನು ಮೀಸಲಿಡುವ ನಿಯಮ ರೂಪಿಸುವಂತೆ ಶಾಸಕ ಅಭಯ ಪಾಟೀಲ ಅವರು ಇಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ತುರ್ತಾಗಿ ಭೇಟಿ ಮಾಡಿ ಮನವಿ ಅರ್ಪಿಸಿದ್ದಾರೆ.
ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಅವರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿ ಮಾಡಿ, ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ವಸತಿ ಯೋಜನೆಗಳಲ್ಲಿ ಅಟೋ ಚಾಲಕರು,ಕ್ಷೌರಿಕರು,ಬೀದಿ ವ್ಯಾಪಾರಿಗಳು,ಪಾನ ಬೀಡಾ ಅಂಗಡಿಕಾರರು,ಅಗಸರು,ಸಿಂಪಿಗರು ಸೇರಿದಂತೆ ದಿನನಿತ್ಯ ಕಸಬು ಆಡಿ ಬದುಕುವ ಎಲ್ಲ ವರ್ಗದವರಿಗೂ ನಿವೇಶನ ಮೀಸಲಿಡುವ ನಿಯಮ ರೂಪಿಸುವಂತೆ ಮನವಿ ಅರ್ಪಿಸಿದರು.
ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ಬುಡಾ ಹೊಸದಾಗಿ ಲೇಔಟ್ ನಿರ್ಮಿಸಿದ್ದು, ಇದರಲ್ಲಿ ನಿವೇಶನ ಹಂಚಿಕೆ ಮಾಡುವಾಗ,ಅಟೋ ಚಾಲಕರು, ಬೀದಿ ವ್ಯಾಪಾರಿಗಳು,ಅಗಸರು,ಕ್ಷೌರಿಕರು ಸಿಂಪಿಗರು,ಮತ್ತು ಪಾನಬೀಡಾ ಅಂಗಡಿಕಾರರಿಗೆ ಇಂತಿಷ್ಟು ನಿವೇಶನಗಳನ್ನು ಕಡ್ಡಾಯವಾಗಿ ನೀಡಬೇಕೆನ್ನುವ ನಿಯಮವನ್ನು ತಕ್ಷಣ ಜಾರಿಗೊಳಿಸುವಂತೆ ಶಾಸಕ ಅಭಯ ಪಾಟೀಲ ಸಿಎಂ ಬೊಮ್ಮಾಯಿ ಅವರಲ್ಲಿ ಮನವಿ ಮಾಡಿಕೊಂಡರು. ಈ ವಿಚಾರವನ್ನು ಪ್ರಸಕ್ತ ಸಾಲಿನ ಬಜೆಟ್ ನಲ್ಲಿಯೇ ಘೋಷಣೆ ಮಾಡಬೇಕೆಂದು ಒತ್ತಾಯಿಸಲಾಯಿತು.