ಬೆಳಗಾವಿ:ಕಳಸಾ ಬಂಡೂರಿ ಹಾಗೂ ಮಹಾದಾಯಿ ನ್ಯಾಯಾಧಿಕರಣದ ಮಧ್ಯಂತರ ತೀರ್ಪು ಪ್ರಕಟವಾದ ದಿನ ಸರಕಾರದ ಮುಖ್ಯ ಸಚೇತಕ ರಾಮದುರ್ಗ ಶಾಸಕ ಅಶೋಕ ಪಟ್ಟಣ ಸ್ಥಳೀಯ ತಹಶೀಲ್ದಾರರಿಗೆ ರಾಜೀನಾಮೆ ಸಲ್ಲಿಸಿ ಅಪಾರ ಪ್ರಚಾರ ಗಿಟ್ಟಿಸಿಕೊಂಡಿದ್ದರು. ಅವರ ರಾಜೀನಾಮೆ ಪ್ರಹಸನ ಈಗ ಜಿಲ್ಲೆಯಲ್ಲಿ ಚರ್ಚೆಯ ವಿಷಯವಾಗಿದೆ.
ಮಹಾದಾಯಿ ವಿಷಯದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದ್ದನ್ನು ಖಂಡಿಸಿ ರಾಜ್ಯದ ಯಾವೊಬ್ಬ ಶಾಸಕ, ಸಂಸದನಾಗಲಿ, ಸಚಿವರಾಗಲಿ ರಾಜೀನಾಮೆ ಕೊಡುವ ಧೈರ್ಯ ಮಾಡಿರಲಿಲ್ಲ. ಆದರೆ ನ್ಯಾಯಾಧೀಕರಣದ ತೀರ್ಪು ಹೊರಬಿದ್ದ ಮಾರನೇ ದಿನ ರಾಮದುರ್ಗ ಶಾಸಕ ಅಲ್ಲಿನ ತಹಶೀಲ್ದಾರರಿಗೆ ರಾಜೀನಾಮೆ ಪತ್ರ ನೀಡಿ ಆ ದಿನ ರಾಜ್ಯದ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು.
ರಾಜೀನಾಮೆ ಪ್ರಕ್ರಿಯೆಯೇ ಇದೊಂದು ಪ್ರಹಸನವೆಂದು ಮಾಧ್ಯಮಗಳು ಹಾಗೂ ಅವರ ರಾಜಕೀಯ ವಿರೋಧಿಗಳು ಆರೋಪಿಸಿದ್ದರು. ಆದರೆ ಶಾಸಕ ಪಟ್ಟಣ ಅವರು ನಾನು ರಾಜೀನಾಂಎ ನಾಟಕ ಮಾಡಿಲ್ಲ. ಕೂಡಲೇ ಬೆಂಗಳೂರಿಗೆ ತೆರಳಿ ವಿಧಾನಸಭೆ ಸ್ಪೀಕರ್ ಅವರಿಗೆ ರಾಜೀನಾಮೆ ನೀಡುವುದಾಗಿ ಸ್ಪಷ್ಟಪಡಿಸಿ ತಮ್ಮ ಬದ್ಧತೆ ಮರೆದಿದ್ದರು.
ಆದರೆ ಅವರು ಆಡಿದ ನಾಟಕ ಮುಗಿದು ತಿಂಗಳು ಗತಿಸಿದೆ. ಸ್ಪೀಕರ್‍ಗೆ ಅಶೋಕ ಪಟ್ಟಣ ರಾಜೀನಾಮೆ ಕೊಡುವುದು ಯಾವಾಗ ಎನ್ನುವ ಪ್ರಶ್ನೆ ಕಳಸಾ ಬಂಡೂರಿ ಹೋರಾಟಗಾರರನ್ನು ಕಾಡುತ್ತಿದೆ. ನಿಜವಾಗಿಯೂ ಅವರಿಗೆರಾಜ್ಯದ ರೈತರ ಬಗ್ಗೆ ಕಾಳಜಿ ಇದ್ದರೆ ಸ್ಪೀಕರ್‍ಗೆ ರಾಜೀನಾಮೆ ನೀಡಿ ಕಳಸಾ ಬಂಡೂರಿ ಹೋರಾಟದಲ್ಲಿ ಧುಮುಕಬೇಕೆನ್ನುವುದು ರೈತರ ಅಭಿಪ್ರಾಯವಾಗಿದೆ. ಈ ಬಗ್ಗೆ ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ ಅಶೋಕ ಪಟ್ಟಣ ವಿರುದ್ದ ಕಿಡಿಕಾರಿದ್ದಾರೆ.
ರಾಜೀನಾಮೆ ಕೊಡಲಿ ಇಲ್ಲದಿದ್ದರೆ ರಾಜ್ಯದ ರೈತರಲ್ಲಿ ಬಹಿರಂಗವಾಗಿ ಕ್ಷಮೆಯಾಚಿಸಲಿ , ರೈತರನ್ನು ದಿಶಾಬುಲ ಮಾಡಲು ಯಾರಾದರೂ ಈ ರೀತಿಯ ಡ್ರಾಮಾ ಮಾಡಿದರೆ ರಾಜ್ಯದ ರೈತರು ಸುಮ್ಮನಿರಲು ಸಾಧ್ಯವಿಲ್ಲ ಎನ್ನುವುದು ರೈತ ನಾಯಕರ ಆಕ್ರೋಶವಾಗಿದೆ.
ಬಾಬಾಗೌಡಾ ಪಾಟಿಲ ಆಕ್ರೋಶ
ಅಶೋಕ ಪಟ್ಟಣ ಒಬ್ಬ ಚಾಣಾಕ್ಷ ರಾಜಕಾರಣಿಯಂಥೆ ಕಾಣುತ್ತಾರೆ. ರಾಜೀನಾಮೆ ಮಾತು ಆಡಬಾರದು, ಕೊಡುವುದಿದ್ದರೆ ಅಂಗೀಕಾರವಾಗುವಂತೆ ರಾಜೀನಾಮೆ ಕೊಡಬೇಕು. ಬರೀ ಪ್ರಚಾರಕ್ಕೆ ಹುಸಿ ಪ್ರಹಸನ ಮಾಡಬಾರದು. ಮಾನ ಮರ್ಯಾದೆ ಇದ್ದರೆ ಇಂಥದ್ದನ್ನು ಮಾತನಾಡಬಾರದು. ಈಗಲೂ ರಾಜೀನಾಮೆ ಕೊಟ್ಟು ಮಾತು ಉಳಿಸಿಕೊಳ್ಳಲಿ.ಎಂದು ಬಾಬಾಗೌಡಾ ಪಾಟಿಲ ಸಲಹೆ ನೀಡಿದ್ದಾರೆ