ಬೆಳಗಾವಿ;ಹಿಂದವಾಡಿಯ ಗೋಮಟೇಶ್ ಪಾಲಿಟೆಕ್ನಿಕ್ ಆಟೋಮೊಬೈಲ್ ಎಂಜಿನಿಯರಿಂಗ್ ಕಾರ್ಯಾಗಾರದ ಶೆಡ್‌ನ್ನು ಸ್ವತಃ ತೆರವುಗೊಳಿಸಲು ಬೆಳಗಾವಿ ಮಹಾನಗರ ಪಾಲಿಕೆಯು ಸಂಸ್ಥೆಯ ಆಡಳಿತ ಮಂಡಳಿಗೆ ೧೦ ದಿನಗಳ ಕಾಲಾವಕಾಶ ನೀಡಿದೆ.
ಇಂದು ಸಂಜೆ ಪಾಲಿಕೆ ಎಂಜಿನಿಯರ್ ಲಕ್ಷ್ಮಿ ನಿಪ್ಪಾಣಕರ ನೇತೃತ್ವದ ಸಿಬ್ಬಂದಿ ಜೆಸಿಬಿ ಯಂತ್ರಗಳ ಸಮೇತ ಸ್ಥಳಕ್ಕೆ ಭೇಟಿ ನೀಡಿ, ಶೆಡ್ ತೆರವುಗೊಳಿಸಲು ಮುಂದಾದರು. ಆದರೆ, ಗೋಮಟೇಶ್ ವಿದ್ಯಾಪೀಠದ ಅಧೀಕ್ಷತಾ ಹಾಗೂ ಶಾಸಕ ಸಂಜಯ ಪಾಟೀಲ ಮತ್ತು ಅವರ ಬೆಂಬಲಿದರು ಶೆಡ್ ತೆರವು ಕಾರ್ಯಾಚರಣೆಗೆ ತೀವ್ರ ಆಕ್ಷೇಪವ್ಯಕ್ತಪಡಿಸಿದರು. ಬೆಳಗಾವಿಯ ಗಾಂಧಿನಗರ, ಬುಡಾ ಕಚೇರಿ ಪಕ್ಕದಲ್ಲೇ ನೂರಾರು ಮನೆಗಳ ಕಟ್ಟಡ ಅಕ್ರಮವಾಗಿ ತಲೆ ಎತ್ತಿವೆ. ಅವುಗಳನ್ನು ಬಿಟ್ಟು, ನಮ್ಮ ಸಂಸ್ಥೆಯ ಕಟ್ಟಡವೊಂದು ನಿಮಗೆ ಕಾಣುತ್ತದೆಯೇ ಎಂದು ಶಾಸಕ ಸಂಜಯ ಪಾಟೀಲ ಪ್ರಶ್ನಿಸಿದರು.
ಶೆಡ್ ವಿವಾದ ಪ್ರಕರಣ ನ್ಯಾಯಾಲಯದಲ್ಲಿದೆ. ಹೀಗಿರುವಾಗ ಇದನ್ನು ತೆರವುಗೊಳಿಸಲುವುದು ಸರಿಯಲ್ಲ. ಈ ಕಾರ್ಯಾಗಾರದಲ್ಲಿ ಹಲವಾರು ಯಂತ್ರಗಳಿವೆ. ನೀವು ತೆರವುಗೊಳಿಸಿದರೆ, ಈ ಎಲ್ಲ ಯಂತ್ರೋಪಕರಣಕ್ಕೆ ಧಕ್ಕೆ ಉಂಟಾಗುತ್ತದೆ. ಹಾಗಾಗಿ, ನಮಗೆ ೧೦ ದಿನ ಕಾಲಾವಕಾಶ ಕಲ್ಪಿಸಿದರೆ, ನಾವು ಶೆಡ್ ತೆರವುಗೊಳಿಸುತ್ತೇವೆ ಎಂದು ಹೇಳಿದರು. ಸ್ಥಳದಲ್ಲಿ ನೂರಾರು ಜನರು ಜಮಾಯಿಸಿದ್ದರು.
ತದನಂತರ ಪಾಲಿಕೆ ಆಯುಕ್ತ ಶಶಿಧರ ಕುರೇರ್ ಸ್ಥಳಕ್ಕೆ ಭೇಟಿ ನೀಡಿ, ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ ನಾನು ಈ ಅನಧಿಕೃತ ಶೆಡ್ ತೆರವುಗೊಳಿಸುವಂತೆ ನನ್ನ ಅಧೀನ ಅಧಿಕಾರಿಗಳಿಗೆ ಸೂಚನೆ ನೀಡಿದ್ದೆ. ಆದರೆ, ಈ ಕಟ್ಟಡದಲ್ಲಿ ಯಂತ್ರೋಪಕರಣಗಳಿವೆ. ಹಾಗಾಗಿ, ಗೋಮಟೇಶ್ ಸಂಸ್ಥೆಯ ಆಡಳಿತ ಮಂಡಳಿಗೆ ಸ್ವತಃ ಶೆಡ್‌ನ್ನು ೧೦ ದಿನದಲ್ಲಿ ತೆರವುಗೊಳಿಸುವುದಾಗಿ ಲಿಖಿತವಾಗಿ ಬರೆದು ಕೊಟ್ಟಿರುವ ಹಿನ್ನೆಲೆಯಲ್ಲಿ ನಾವು ಶೆಡ್ ತೆರವು ಕಾರ್ಯಾಚರಣೆ ಕೈಬಿಟ್ಟಿದ್ದೇವೆ ಎಂದು ಸ್ಪಷ್ಟಪಡಿಸಿದರು.