Breaking News

ಮೈ ಬೆಳಗಾವಿ” ಸಿಟಿಜನ್ ಮೊಬೈಲ್ ಆ್ಯಪ್

ಸ್ಮಾರ್ಟ್ ಸಿಟಿ: ಇಂಟಿಗ್ರೇಟೆಡ್ ಕಮಾಂಡ್‌ ಆ್ಯಂಡ್ ಕಂಟ್ರೋಲ್ ಸೆಂಟರ್: ಸಮನ್ವಯ ಸಭೆ

ಅತ್ಯಾಧುನಿಕ ಸೌಲಭ್ಯಗಳ ಸಮರ್ಪಕ ಬಳಕೆಗೆ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಸೂಚನೆ

ಬೆಳಗಾವಿ,): ಬೆಳಗಾವಿ ಮಹಾನಗರದಲ್ಲಿ ಈಗಾಗಲೇ 1,12,669 ಮನೆ/ಆಸ್ತಿಗಳಿಗೆ ಆರ್.ಎಫ್.ಐ.ಡಿ. ಟ್ಯಾಗ್ ಅಳವಡಿಸಲಾಗಿದೆ. ಕಸ ಸಂಗ್ರಹಕ್ಕೆ ಹೋದಾಗ ಕಡ್ಡಾಯವಾಗಿ ಟ್ಯಾಗ್ ರೀಡರ್ ಬಳಸಿದರೆ ಮಾತ್ರ ಆಯಾ ಮನೆಯ ಕಸ ಸಂಗ್ರಹದ ಖಚಿತ ಮಾಹಿತಿಯು ಲಭ್ಯವಾಗಲಿದೆ. ಆದ್ದರಿಂದ ಕಸ ಸಂಗ್ರಹಿಸುವಾಗ ಕಡ್ಡಾಯವಾಗಿ ಟ್ಯಾಗ್ ರೀಡರ್ ಬಳಸಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಪಾಲಿಕೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸ್ಮಾರ್ಟ್ ಸಿಟಿ ಯೋಜನೆಯಡಿ‌ ವಿಶ್ವೇಶ್ವರಯ್ಯ ನಗರದಲ್ಲಿ ಸ್ಥಾಪಿಸಲಾಗಿರುವ ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಇಂಟಿಗ್ರೇಟೆಡ್ ಕಮಾಂಡ್‌ ಆ್ಯಂಡ್ ಕಂಟ್ರೋಲ್ ಸೆಂಟರ್ ನಲ್ಲಿ ಮಂಗಳವಾರ (ಸೆ.14) ನಡೆದ ಸಮನ್ವಯ ಸಭೆಯಲ್ಲಿ ಅವರು ಮಾತನಾಡಿದರು.

ನಗರದ ಪ್ರತಿ ಮನೆ ಮನೆಯಿಂದ ಕಸ ಸಂಗ್ರಹವಾಗಬೇಕು ಹಾಗೂ ಕಸ ವಿಂಗಡಣೆ ಕಟ್ಟುನಿಟ್ಟಾಗಿ ಆಗಬೇಕಿದೆ. ಆದ್ದರಿಂದ ಈಗಾಗಲೇ ಅಳವಡಿಸಿರುವ ಆರ್.ಎಫ್.ಐ.ಡಿ. ಟ್ಯಾಗ್ ಸ್ಕ್ಯಾನ್ ಮಾಡಲು 300 ಕ್ಕೂ ಅಧಿಕ ರೀಡರ್ ಗಳನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ಪಾಲಿಕೆಗೆ ವಿತರಿಸಲಾಗಿದೆ. ಇವುಗಳನ್ನು ಬಳಸಲು ಮಹಾನಗರ ಪಾಲಿಕೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು.

ಸಿಟಿಜನ್ ಮೊಬೈಲ್ ಆ್ಯಪ್ ಸೇರಿದಂತೆ ಸ್ಮಾರ್ಟ್ ಸಿಟಿ ‌ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್ ಕಾರ್ಯನಿರ್ವಹಣೆ ಹಾಗೂ ಇದರಿಂದ ನಾಗರಿಕರಿಗೆ ಲಭ್ಯವಿರುವ ಸೇವೆಗಳ ಕುರಿತು ಹೆಚ್ಚಿನ ಪ್ರಚಾರ ಮಾಡಬೇಕು.
ವಿವಿಧ ಇಲಾಖೆಗೆ ಸಂಬಂಧಿಸಿದ ಕುಂದುಕೊರತೆಗಳ ದಾಖಲು ಮತ್ತು ನಿವಾರಣೆಗೆ ಆ್ಯಪ್ ನಿಂದ ತ್ವರಿತ ಪ್ರತಿಕ್ರಿಯೆ ದೊರೆತರೆ ಸಾರ್ವಜನಿಕರು ಹೆಚ್ಚಾಗಿ “ಮೈ ಬೆಳಗಾವಿ ಸಿಟಿಜನ್ ಆ್ಯಪ್” ಡೌನಲೋಡ್ ಮಾಡಿಕೊಂಡು ಬಳಸುತ್ತಾರೆ. ಆದ್ದರಿಂದ ಈ ಬಗ್ಗೆ ಎಲ್ಲ ಇಲಾಖೆಗಳು ಗಮನಹರಿಸಬೇಕು.

ಪೊಲೀಸ್, ಸಾರಿಗೆ, ಮಹಾನಗರ ಪಾಲಿಕೆ, ಆರೋಗ್ಯ, ಅಗ್ನಿಶಾಮಕ ಇಲಾಖೆಗಳು ಕಮಾಂಡ್ ಸೆಂಟರ್‌ ನಲ್ಲಿ ಇರುವ ಅತ್ಯಾಧುನಿಕ ಸೌಲಭ್ಯಗಳನ್ನು ಬಳಸಿಕೊಂಡು ನಾಗರಿಕರಿಗೆ ಉತ್ತಮ ಸೇವೆ ಒದಗಿಸಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು.

ಸ್ಮಾರ್ಟ್ ಸಿಟಿ ಯೋಜನೆಯ ಎಲ್ಲ ಕಾಮಗಾರಿಗಳು ಪೂರ್ಣಗೊಂಡ ಬಳಿಕ ಸಂಬಂಧಿಸಿದ ಇಲಾಖೆಗಳಿಗೆ ಸೌಲಭ್ಯಗಳನ್ನು ಹಸ್ತಾಂತರಿಸಲಾಗುತ್ತದೆ. ಆದ್ದರಿಂದ ಎಲ್ಲ ಇಲಾಖೆಗಳು ಪರಸ್ಪರ ಸಮನ್ವಯದೊಂದಿಗೆ ಕಮಾಂಡ್ ಸೆಂಟರ್ ನ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಬೆಳಗಾವಿ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಪ್ರವೀಣ ಬಾಗೇವಾಡಿ, ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸಿದ ಉದ್ಯಾನ, ಕೆರೆ, ಆಸ್ಪತ್ರೆ ಕಟ್ಟಡಗಳು, ಡಿಜಿಟಲ್ ಫಲಕಗಳು ಸೇರಿದಂತೆ ಬಹುತೇಕ ಸೌಲಭ್ಯಗಳನ್ನು ಮಹಾನಗರ ಪಾಲಿಕೆ ಹಾಗೂ ಸಂಬಂಧಿಸಿದ ಇಲಾಖೆಗಳಿಗೆ ಹಸ್ತಾಂತರಿಸಲಾಗಿದೆ ಎಂದು ವಿವರಿಸಿದರು.
ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸಲಾಗಿರುವ ಇಂಟಿಗ್ರೇಟೆಡ್ ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್ ನಲ್ಲಿ ಲಭ್ಯವಿರುವ ಅತ್ಯಾಧುನಿಕ ಸೌಲಭ್ಯಗಳನ್ನು ಬಳಸಿಕೊಂಡು ಪೊಲೀಸ್, ಸಾರಿಗೆ, ಮಹಾನಗರ ಪಾಲಿಕೆ, ಆರೋಗ್ಯ ಮತ್ತಿತರ‌ ಇಲಾಖೆಗಳು ಸಾರ್ವಜನಿಕರಿಗೆ ಉತ್ತಮ‌ ಸೇವೆ ಒದಗಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಸಂಬಂಧಿಸಿದ ಇಲಾಖೆಗಳು ಇದರ ಪ್ರಯೋಜನ ಪಡೆದುಕೊಂಡು ನಾಗರಿಕರಿಗೆ ತ್ವರಿತವಾಗಿ ಗುಣಮಟ್ಟದ ಸೇವೆ ಒದಗಿಸಬಹುದು ಎಂದು ಡಾ.ಪ್ರವೀಣ ಬಾಗೇವಾಡಿ ತಿಳಿಸಿದರು.

ಬೆಳಗಾವಿ ಉಪ ಪೊಲೀಸ್ ಆಯುಕ್ತ ಡಾ.ವಿಕ್ರಮ್ ಆಮಟೆ, ಅಪರಾಧ ಪ್ರಕರಣ ಭೇದಿಸುವಾಗ, ಸಂಚಾರ ನಿಯಮ ಉಲ್ಲಂಘನೆ, ಸಂಚಾರ ಸಮಸ್ಯೆ ನಿವಾರಣೆಗಾಗಿ ಕಮಾಂಡ್ ಸೆಂಟರ್ ನ ಕೆಲವು ಸೇವೆಗಳನ್ನು ಪೊಲೀಸ್ ಇಲಾಖೆಗೆ ಅನುಕೂಲವಾಗುವಂತೆ ಮಾರ್ಪಡಿಸಿಕೊಡುವಂತೆ ತಿಳಿಸಿದರು.
ವಾಹನಗಳ ಮೇಲೆ ನಿಗಾ ಇರಿಸಲು ಸಾಧ್ಯವಾಗುವಂತೆ ಸಿಸಿಟಿವಿ ದೃಶ್ಯಾವಳಿಗಳನ್ನು ಆರ್.ಟಿ.ಓ ಹಾಗೂ ಪೊಲೀಸ್ ಇಲಾಖೆಯ ಪ್ರಸ್ತುತ ನಿಗಾ ವ್ಯವಸ್ಥೆಯ ಜತೆ ಜೋಡಿಸುವ ಅಗತ್ಯವಿದೆ ಎಂದರು.

ತುರ್ತು ಪೊಲೀಸ್ ಸೇವೆ ಪಡೆಯಲು ಅನುಕೂಲವಾಗುವಂತೆ 112 (ಇ.ಆರ್.ಎಸ್.)ಗೆ ಪ್ರತ್ಯೇಕ ನಿಯಂತ್ರಣ ಕೊಠಡಿ ಕಾರ್ಯನಿರ್ವಹಿಸುತ್ತಿದ್ದು, ಈ ಸೇವೆಯನ್ನು ಇನ್ನಷ್ಟು ತ್ವರಿತವಾಗಿ ನೀಡಲು ಎರಡೂ ಕೇಂದ್ರಗಳ ನಡುವೆ ಸಮನ್ವಯತೆ ಸಾಧಿಸುವ ನಿಟ್ಟಿನಲ್ಲಿ ತಂತ್ರಜ್ಞರು ಕೆಲಸ ಮಾಡಬೇಕು ಎಂದು ಡಾ.ವಿಕ್ರಮ್ ಆಮಟೆ ಹೇಳಿದರು.

ಅಪರಾಧ ಮತ್ತು ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಸ್ನೇಹಾ ಪಿ.ವಿ. ಮಾತನಾಡಿ, ಸಂಚಾರ ನಿಯಂತ್ರಣ ಮತ್ತು ಅಪರಾಧ ಪತ್ತೆಗೆ ಸಂಬಂಧಿಸಿದಂತೆ ಈಗಾಗಲೇ ಇರುವ ಕೆಲವು ವ್ಯವಸ್ಥೆಗಳ ಜತೆಗೆ ಕಮಾಂಡ್ ಸೆಂಟರ್ ನಲ್ಲಿರುವ ಸೌಲಭ್ಯಗಳನ್ನು ಬಳಕೆ ಮಾಡಿಕೊಳ್ಳಲಾಗುವುದು ಎಂದರು.
ಮೊಬೈಲ್ ಆ್ಯಪ್ ನಾಗರಿಕ ಸ್ನೇಹಿಯಾಗಿಸುವ ಕೆಲವು ಮಾರ್ಪಾಡು ಮಾಡುವಂತೆ ಸಲಹೆ ನೀಡಿದರು.

ಮಹಾನಗರ ಪಾಲಿಕೆಗೆ ಹಸ್ತಾಂತರಿಸಲಾಗಿರುವ ವ್ಯವಸ್ಥೆಯನ್ನು ಸಮರ್ಪಕ ಮತ್ತು ಪರಿಣಾಮಕಾರಿಯಾಗಿ ಬಳಕೆಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಆಯುಕ್ತ ಡಾ.ರುದ್ರೇಶ್ ಘಾಳಿ ತಿಳಿಸಿದರು.

ಕಮಾಂಡ್ ‌ಸೆಂಟರ್ ಕಾರ್ಯಚಟುವಟಿಕೆಗಳು:

ನಗರದಲ್ಲಿ ಸಂಚರಿಸುವ 62 ಬಸ್ ಗಳಲ್ಲಿ ಜಿಪಿಎಸ್ ಅಳವಡಿಸಲಾಗಿದ್ದು, ಬಸ್ ಸಂಚಾರದ ಕುರಿತು ನಿಖರ ಮಾಹಿತಿ ಲಭಿಸಲಿದೆ.
10 ಬಸ್ ತಂಗುದಾಣ(ಶೆಲ್ಟರ್)ಗಳಲ್ಲಿ ಡಿಸ್ ಪ್ಲೆ ಫಲಕ ಹಾಗೂ ಬಸ್ ವೇಳಾಪಟ್ಟಿಯನ್ನು ಅಳವಡಿಸಲಾಗಿದೆ. ಏಳು ಬಸ್ ತಂಗುದಾಣಗಳಲ್ಲಿ ವೈಫೈ ಸೌಲಭ್ಯ ಒದಗಿಸಲಾಗಿದೆ.
ಸಿಟಿಜನ್ ಆ್ಯಪ್ ಮೂಲಕ ಕೂಡ ಜಿಪಿಎಸ್ ಅಳವಡಿತ 62 ಬಸ್ ಗಳ ಸಂಚಾರದ ಬಗ್ಗೆ ಮಾಹಿತಿಯನ್ನು ಪಡೆಯಬಹುದು ಎಂದು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಡಾ.ಪ್ರವೀಣ ಬಾಗೇವಾಡಿ ವಿವರಿಸಿದರು.
ಮುಂಬರುವ ದಿನಗಳಲ್ಲಿ ಹಂತಹಂತವಾಗಿ ಎಲ್ಲಾ ತಂಗುದಾಣಗಳಲ್ಲಿ ಈ ಸೌಲಭ್ಯ ವಿಸ್ತರಿಸಲಾಗುವುದು.

ಇಂಟೆಲಿಜೆಂಟ್ ಪೋಲ್:

ನಗರದ ಒಂಬತ್ತು ಸ್ಥಳಗಳಲ್ಲಿ ಇಂಟೆಲಿಜೆಂಟ್ ಪೋಲ್ ಅಳವಡಿಸಲಾಗಿದೆ. ಇದರಲ್ಲಿ ಸಿಸಿಟಿವಿ, ವಾಯುಮಾಲಿನ್ಯ ಕುರಿತ ಮಾಹಿತಿ, ತುರ್ತು ಸಂದರ್ಭದಲ್ಲಿ ಅನುಕೂಲವಾಗುವಂತೆ ಪ್ಯಾನಿಕ್ ಬಟನ್ ಅಳವಡಿಸಿದೆ. ಪೊಲೀಸ್, ಮಹಾನಗರ ಪಾಲಿಕೆ ಸೇರಿದಂತೆ ಸಂಬಂಧಿಸಿದ ಇಲಾಖೆಯ ತರಬೇತಿ ಪಡೆದ ಸಿಬ್ಬಂದಿ ಕಂಟ್ರೋಲ್ ಸೆಂಟರ್ ನಲ್ಲಿ ಇರುತ್ತಾರೆ. ಅವರು ಈ ವ್ಯವಸ್ಥೆಯನ್ನು ನಿರ್ವಹಿಸುತ್ತಾರೆ.
ಗಣ್ಯರ ಸಂಚಾರ, ಆ್ಯಂಬ್ಯುಲೆನ್ಸ್, ಇತರೆ ತುರ್ತು ಸಂದರ್ಭದಲ್ಲಿ ಗ್ರೀನ್ ಕಾರಿಡಾರ್ ವ್ಯವಸ್ಥೆಯನ್ನು ಕೂಡ ಕಲ್ಪಿಸಬಹುದು ಎಂದು ತಿಳಿಸಿದರು.
ನಗರದ ವಿವಿಧ ವೃತ್ತಗಳಲ್ಲಿ ಅಳವಡಿಸಲಾಗಿರುವ ಎಲ್.ಇ.ಡಿ. ಫಲಕಗಳ ಕುರಿತು ಮಾಹಿತಿಯನ್ನು ನೀಡಿದರು.

ಸ್ಮಾರ್ಟ್ ವಾಟರ್:
ಕ್ಲೋರಿನ್ ವಿಶ್ಲೇಷಣೆ, ಪಿ.ಎಚ್.‌ಮೀಟರ್ ಅಳವಡಿಕೆ, ಬಲ್ಕ್ ಫ್ಲೋ ಮೀಟರ್ ಅಳವಡಿಸಲಾಗಿದ್ದು, ಈ ವ್ಯವಸ್ಥೆಯನ್ನು ಬೆಳಗಾವಿ ಮಹಾನಗರದಲ್ಲಿ ನಿರಂತರ ನೀರು ಸರಬರಾಜು ಯೋಜನೆ ಸಂಪೂರ್ಣವಾಗಿ ಅನುಷ್ಠಾನಗೊಂಡ ಬಳಿಕ ಬಳಸಬಹುದಾಗಿದೆ.
ಸದ್ಯಕ್ಕೆ ಕೆಲವು ಮಾಹಿತಿಯನ್ನು ಕಮಾಂಡ್ ಕೇಂದ್ರದಿಂದ ನೀರು ಸರಬರಾಜು ಮಂಡಳಿ ಜತೆ ಹಂಚಿಕೊಳ್ಳಲಾಗುತ್ತಿದೆ.
ಇದಲ್ಲದೇ ಘನತ್ಯಾಜ್ಯ ನಿರ್ವಹಣೆ, ಕಸ ವಿಲೇವಾರಿ ಮೇಲೆ ನಿಗಾ ವಹಿಸಲಾಗುತ್ತಿದೆ. ಕಸ ವಿಲೇವಾರಿ ವಾಹನಗಳಿಗೆ ಕೂಡ ಜಿಪಿಎಸ್ ಅಳವಡಿಸಿ ನಿಗಾವಹಿಸಲಾಗಿದೆ.
ಕಸ ಎಸೆಯುವುದನ್ನು ತಡೆಯಲು ಇಪ್ಪತ್ತು ಸ್ಥಳಗಳಲ್ಲಿ ಕ್ಯಾಮೆರಾ ಮೂಲಕ ನಿಗಾ ವಹಿಸಲಾಗುತ್ತದೆ ಎಂದು ಡಾ.ಬಾಗೇವಾಡಿ ವಿವರಿಸಿದರು.
ಇನ್ನು ಆರು ತಿಂಗಳ ನಂತರ ಆರ್.ಎಫ್.ಐ.ಡಿ. ನಿರ್ವಹಣೆಯನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸಲಾಗುತ್ತದೆ. ಆದ್ದರಿಂದ ಆರ್.ಎಫ್. ಐ.ಡಿ. ರೀಡರ್ ಬಳಕೆ ಹೆಚ್ಚಿಸಬೇಕು ಎಂದು ತಿಳಿಸಿದರು.
ಆ್ಯಂಬ್ಯುಲೆನ್ಸ್ ಹಾಗೂ‌ ಅಗ್ನಿಶಾಮಕ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗಿದೆ. ತುರ್ತು ಸಂದರ್ಭದಲ್ಲಿ ಇಲ್ಲಿಂದಲೇ ನಿರ್ವಹಿಸಲಾಗುತ್ತದೆ.

“ಮೈ ಬೆಳಗಾವಿ” ಸಿಟಿಜನ್ ಮೊಬೈಲ್ ಆ್ಯಪ್:

ಸರಕಾರಿ ಸೇವೆಗಳು, ಬಸ್ ಸಂಚಾರ, ಬಸ್ ನಿಲ್ದಾಣಗಳು, ಹವಾಮಾನ, ಸಮೀಪದ ಸ್ಥಳಗಳು, ದೂರು ಕೋಶ ಮತ್ತಿತರ ಸೌಲಭ್ಯಗಳನ್ನು “ಮೈ ಬೆಳಗಾವಿ” ಮೊಬೈಲ್ ಆ್ಯಪ್ ನಲ್ಲಿ ಅಳವಡಿಸಲಾಗಿದೆ.
ಯಾವುದೇ ಇಲಾಖೆಗೆ ಸಂಬಂಧಿಸಿದ ದೂರುಗಳು ಆ್ಯಪ್ ನಲ್ಲಿ ದಾಖಲಾದಾಗ ಸಂಬಂಧಿಸಿದ ಇಲಾಖೆಯ ಫೀಲ್ಡ್ ಆಫೀಸರ್ ಗಳಿಗೆ ಮಾಹಿತಿ ಹೋಗುತ್ತದೆ. ಅವರು ದೂರು ನಿವಾರಣೆಗೆ ಕ್ರಮ ವಹಿಸುತ್ತಾರೆ.
ಪೊಲೀಸ್, ಬೆಂಕಿ ಅನಾಹುತ, ಅಪಘಾತ, ಸಾರಿಗೆ ಸಮಸ್ಯೆ ಮತ್ತಿತರ ತುರ್ತು ಸಂದರ್ಭದಲ್ಲಿ ತಕ್ಷಣವೇ ಮಾಹಿತಿಯನ್ನು ಒದಗಿಸಲು ಈ ಆ್ಯಪ್ ಉಪಯುಕ್ತವಾಗಿದೆ ಎಂದು ಡಾ.ಪ್ರವೀಣ ಬಾಗೇವಾಡಿ ವಿವರಿಸಿದರು.

ಸಂಚಾರ ವಿಭಾಗದ ಎಸಿಪಿ ಶರಣಪ್ಪ, ವಾರ್ತಾ‌ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ಗುರುನಾಥ ಕಡಬೂರ, ಸಾರಿಗೆ, ಆರೋಗ್ಯ, ಮಹಾನಗರ ಪಾಲಿಕೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
*****

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *