ಬೆಳಗಾವಿ : ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪೋಸ್ಟ್ ಸಿಬ್ಬಂದಿಗಳಿಗೆ ಕಮಲೇಶ ಚಂದ್ರ ಸಮಿತಿಯ ವರದಿಯನ್ನು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಮಂಗಳವಾರ ಅಖಿಲ ಭಾರತ ಗ್ರಾಮೀಣ ಢಾಕ್ ಸೇವಕ ಸಂಘದ ಬೆಳಗಾವಿ ವಿಭಾಗದ ಸಿಬ್ಬಂದಿಗಳು ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಪ್ರಧಾನ ಅಂಚೆ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ಪ್ರತಿಭಟನಾಕಾರರು, ಕೇಂದ್ರ ಸರಕಾರ ನೇಮಕ ಮಾಡಿದ್ದ ಕಮಲೇಶ ಚಂದ್ರ ಸಮಿತಿಯ ವರದಿಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಮೂಲಕ ಪ್ರಧಾನ ಮಂತ್ರಿಗೆ ಮನವಿ ಸಲ್ಲಿಸಿದರು.
ಕಳೆದ 160 ವರ್ಷಗಳಿಂದ ಗ್ರಾಮೀಣ ಭಾಗದಲ್ಲಿ ಶೇ. 80 ರಷ್ಟು ಜನಸಂಖ್ಯೆಯ ಸೇವೆಯಲ್ಲಿ ತೊಡಗಿರುವ ಗ್ರಾಮೀಣ ಪ್ರದೇಶದ 1 ಲಕ್ಷ 30 ಸಾವಿರ ಪೋಸ್ಟ್ ಕಚೇರಿಗಳಲ್ಲಿ ಸುಮಾರು 2.6 ಲಕ್ಷ ಪೋಸ್ಟ್ ಸಿಬ್ಬಂದಿಗಳು ಅತೀ ಕಡಿಮೆ ವೇತನದಲ್ಲಿ ದುಡಿಯುತ್ತಿದ್ದಾರೆ. ವೇತನವನ್ನು ಕೇಂದ್ರ ಸರಕಾರ ಹೆಚ್ಚಿಗೆ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಎಸ್.ಜಿ.ಮಾವುತಕರ, ರಾಮಾ ಆನಂದಾಚೆ, ದುಂಡಪ್ಪಾ ಮಾವಿನಕಟ್ಟಿ, ಅಶೋಕ ಸುತ್ತಾರ, ಬಿ.ಆರ್. ಮಹಾಜಿಕ್ ಸೇರಿದಂತೆ ನೂರಾರು ಗ್ರಾಮೀಣ ಅಂಚೆ ಸಿಬ್ಬಂದಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.